DK Shivakumar: ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಈ ಡಿ ಕೆ. ಶಿವಕುಮಾರ್ ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ
ಬೆಳಗಾವಿ, ಡಿಸೆಂಬರ್ 23: ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ವೇಳೆ ಬಿಜೆಪಿಯವರು ಪ್ರತಿಭಟನೆಗೆ ಮುಂದಾಗಿದ್ದು, ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಈ ಡಿ.ಕೆ.ಶಿವಕುಮಾರ್ ಇನ್ನೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದಾನೆ. ಬಿಜೆಪಿಯವರ ಪ್ರತಿಭಟನೆಗೆ ನಾನು ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲೆಸೆದರು.
ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದ್ದಾರೆ. ಇದೆಲ್ಲವೂ ಅವರ ನೇತೃತ್ವದ ಹೋರಾಟದ ಫಲ. ಇದೆಲ್ಲವನ್ನು ಉಳಿಸಿಕೊಂಡು ಸರಿಯಾದ ರೀತಿಯಲ್ಲಿ ಜಾರಿಯಲ್ಲಿಡಬೇಕು. ಗಾಂಧೀಜಿ ಅವರನ್ನು ದಿನನಿತ್ಯ ನೆನೆಯಬೇಕು ಎಂಬ ಕಾರಣಕ್ಕೆ ಮಹಾತ್ಮ ಗಾಂಧಿಜಿ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಣ ಮಾಡಲಾಗಿದೆ. ಮಹಾತ್ಮ ಎಂಬ ಹೆಸರು ಪಡೆದ ನಾಯಕನ ಸ್ಮರಣೆ ಮಾಡುವ ಆಚರಣೆ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದರೆ ನಾವು ಹೆದರುತ್ತೇವಾ? ಎಂದು ಸವಾಲೆಸೆದರು.

ಸಿ.ಟಿ ರವಿ ಅವರನ್ನು ಫೇಕ್ ಎನ್ ಕೌಂಟರ್ ಮಾಡುವ ಹುನ್ನಾರ ನಡೆದಿತ್ತು ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು, ನಾನು ಜೋಷಿ ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅದಕ್ಕೆ ಗೃಹಸಚಿವರು, ಪೊಲೀಸರು ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಸಿ.ಟಿ. ರವಿ ಅವರನ್ನು ಸುತ್ತಾಡಿಸಿದ್ದರ ಬಗ್ಗೆ ಮಾತನಾಡುವ ಬಿಜೆಪಿಯವರು ಸಿ.ಟಿ ರವಿ ಮಹಿಳೆಯರ ಬಗ್ಗೆ ಆಡಿರುವ ಮಾತಿನ ಬಗ್ಗೆ ಯಾರೂ ಕೇಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವನ್ನು ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಈ ವಿಚಾರವಾಗಿ ನಾವು ಈಗ ಮಾತನಾಡುವುದಿಲ್ಲ. 27ರಂದು ಕಾರ್ಯಕ್ರಮಗಳು ಮುಗಿಯಲಿ ನಂತರ ಮಾತನಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಕಾರಣ ಎಂಬ ರೀತಿ ಬಿಂಬಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಬಲಿಷ್ಠರಾಗಿದ್ದಷ್ಟು ಹೆಚ್ಚು ಶತ್ರುಗಳು. ನೀವು ಕಡಿಮೆ ಶಕ್ತಿಶಾಲಿಯಾದರೆ ಕಡಿಮೆ ಶತ್ರುಗಳು, ನೀವು ದುರ್ಬಲರಾಗಿದ್ದರೆ ಯಾವುದೇ ಶತ್ರುಗಳಿರುವುದಿಲ್ಲ. ಹೆಚ್ಚು ಕೆಲಸ ಮಾಡಿದಷ್ಟು ಹೆಚ್ಚು ತಪ್ಪುಗಳು, ಕಡಿಮೆ ಕೆಲಸ ಮಾಡಿದಷ್ಟು ಕಡಿಮೆ ತಪ್ಪುಗಳು, ಕೆಲಸಗಳೇ ಮಾಡದಿದ್ದರೆ ತಪ್ಪುಗಳೇ ಇರುವುದಿಲ್ಲ ಎಂದು ತಿಳಿಸಿದರು. ಸರ್ಕಾರಕ್ಕೆ ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, "ಕುಮಾರಸ್ವಾಮಿ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತ್ಯೇಕವಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಸುವರ್ಣ ಸೌಧದ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷಕ್ಕೂ ಆಹ್ವಾನ ಇದೆಯೇ ಎಂದು ಕೇಳಿದಾಗ, "ವಿರೋಧ ಪಕ್ಷಗಳ ನಾಯಕರು, ಸಂಸದರು, ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳು, ಎಲ್ಲಾ ಪಕ್ಷಗಳ ಶಾಸಕರು ಹಾಗೂ ಪರಿಷತ್ ಸದಸ್ಯರು ಸೇರಿ ಎಲ್ಲಾ ಪಕ್ಷಗಳಿಗೂ ಆಹ್ವಾನ ನೀಡಲಾಗುವುದು. ಇದು ಸಂಪೂರ್ಣ ಸರ್ಕಾರಿ ಕಾರ್ಯಕ್ರಮ. ಭದ್ರತಾ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನ ಇರುವುದಿಲ್ಲ. ಬೆಳಗಾವಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಇತರೆ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗುವುದು" ಎಂದು ತಿಳಿಸಿದರು.
ದೇಶದಾದ್ಯಂತ ಎಷ್ಟು ಜನ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಾರೆ ಎಂದು ಕೇಳಿದಾಗ, "ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪ್ರಮುಖ 500ರಿಂದ 600 ಜನ ಕಾಂಗ್ರೆಸ್ ನಾಯಕರು ಮಾತ್ರ ಆಗಮಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಸಂಸದರು ಆಗಮಿಸಲಿದ್ದಾರೆ. ಇವರೆಲ್ಲರೂ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.












Click it and Unblock the Notifications