'ನನಗೂ ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಆಸೆ ಇತ್ತು'
ರಾಮನಗರ,ಫೆಬ್ರವರಿ03: ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಇಚ್ಛೆ ಇತ್ತು. ಪಕ್ಷ ಅದಕ್ಕೆ ಒಪ್ಪಲಿಲ್ಲ. ಸುರೇಶ್ ಅವರು ಸ್ಪರ್ಧಿಸಲು ಒತ್ತಡ ಇತ್ತು. ನಾವು ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನ ಮಾಡಿದೆ. ಯೋಗೇಶ್ವರ್ ಅವರು ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ಮಾಡಿ, ಅಂತಿಮ ತೀರ್ಮಾನ ಮಾಡಿದೆವು. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ ಚಿಂತೆ ಮಾಡುವುದು ಬೇಡ, ನಾವು ಎಲ್ಲಾ ಕಾರ್ಯಕರ್ತರ ರಕ್ಷಣೆ ಮಾಡೇ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನಮಗೆ ಮಹಿಳೆಯರು ಹೆಚ್ಚು ಬೆಂಬಲ ನೀಡಿದ್ದಾರೆ, ಕಾರ್ಯಕರ್ತರು ಒಗ್ಗಟ್ಟಿನ ಕೆಲಸ ಮಾಡಿದ್ದಾರೆ. ನಾನು, ಸುರೇಶ್, ಪುಟ್ಟಣ್ಣ, ಬಾಲಕೃಷ್ಣ, ರವಿ, ಇಕ್ಬಾಲ್ ಹುಸೇನ್ ಎಲ್ಲರೂ ನಿಮ್ಮ ಜತೆ ಇರುತ್ತೇವೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 25 ಸಾವಿರ ಮತಗಳ ಅಂತರದ ಗೆಲುವು ನೀಡಿದ್ದೀರಿ. ಮುಂದೆ ನಾನು ಹಾಗೂ ಯೋಗೇಶ್ವರ್ ಸತ್ತೆಗಾಲಕ್ಕೆ ಭೇಟಿ ನೀಡಿ ನೀರಾವರಿ ಯೋಜನೆ, ಕೆರೆ ತುಂಬಿಸುವ ಕೆಲಸ, ರಸ್ತೆ ಅಭಿವೃದ್ಧಿ ಸೇರಿ ಎಲ್ಲಾ ಯೋಜನೆ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ದಳದ ಕಾರ್ಯಕರ್ತರು ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ಕೊಟ್ಟು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಿಸಲು ನಾವು ಕೆಲಸ ಮಾಡೋಣ. ಒಬ್ಬ ವ್ಯಕ್ತಿಗಾಗಿ ಪಕ್ಷವನ್ನೇ ಬಲಿಕೊಟ್ಟ ಬಗ್ಗೆ ಈಗ ಚರ್ಚೆ ಬೇಡ. ಯೋಗೇಶ್ವರ್ ಹಿರಿಯರು, ಅನುಭವ ಇರುವವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ನಾನು, ಸಿದ್ದರಾಮಯ್ಯ ಅವರು ಹಾಗೂ ಇಡೀ ಸರ್ಕಾರ ನಿಮ್ಮ ಜತೆ ನಿಲ್ಲಲಿದೆ" ಎಂದು ತಿಳಿಸಿದರು.
ನಾನು ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರವಾಗಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ. ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ" ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ಬಳಿಕ, ನಾನು ಕ್ಷೇತ್ರದ ಪ್ರತಿ ಹೋಬಳಿಗೆ ಬಂದು ಮನೆ ಬಾಗಿಲಿಗೆ ಸರ್ಕಾರವನ್ನು ತಂದು 25 ಸಾವಿರಕ್ಕೂ ಹೆಚ್ಚು ಜನರ ಅರ್ಜಿ ಸ್ವೀಕರಿಸಿದ್ದೇನೆ. 19 ಸಾವಿರಕ್ಕೂ ಹೆಚ್ಚು ಜನ ಮನೆ, ನಿವೇಶನ, ಪಹಣಿ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದೀರಿ. ಚುನಾವಣೆಗೂ ಮುನ್ನ ಈ ಕ್ಷೇತ್ರ ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದೆ. ನಾನು ಈಗಲೂ ಹೇಳುತ್ತೇನೆ. ಇಲ್ಲಿ ಯೋಗೇಶ್ವರ್ ಮಾತ್ರವಲ್ಲ, ನಾನು ಕೂಡ ಕ್ಷೇತ್ರದ ಅಭ್ಯರ್ಥಿಯೇ. ನಾನು ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ, ರವಿ, ರಾಮೋಜಿ ಗೌಡ ಸೇರಿ ಡಿ.ಕೆ. ಸುರೇಶ್ ಅವರ ಸಹಕಾರದಲ್ಲಿ ಜಿಲ್ಲೆಯಲ್ಲಿ ಬದಲಾವಣೆ ತರುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications