ಜನ ಪ್ರತಿನಿಧಿಗಳ ಭ್ರಷ್ಟಾಚಾರ ವಿರುದ್ಧ ಕಾನೂನು ಪ್ರಕಾರ ಫೈಟ್ ಮಾಡುವುದು ಹೇಗೆ?
ಬೆಂಗಳೂರು, ಮಾ. 08: ಯಾವುದೇ ಜನ ಪ್ರತಿನಿಧಿ, ಅಧಿಕಾರಿಗಳು ಒಳಗೊಂಡಂತೆ ಸಾರ್ವಜನಿಕ ಸೇವಕನ ಭ್ರಷ್ಟಾಚಾರವನ್ನು ಒಬ್ಬ ಸಾಮಾನ್ಯ ಪ್ರಜೆಯೂ ಬಯಲಿಗೆ ಎಳೆಯಬಹುದು. ಸಾರ್ವಜನಿಕ ಸೇವಕರ ಭ್ರಷ್ಟಾಚಾರ ಬಯಲಿಗೆ ಎಳೆಯುವ ಮುನ್ನ 2018 ರಲ್ಲಿ ತಿದ್ದುಪಡಿ ಆಗಿರುವ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಈ ಮೂರು ಅಂಶಗಳ ಬಗ್ಗೆ ತಿಳಿದುಕೊಂಡಿರಲೇಬೇಕು.
ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿ ವರೆಗೂ ಎಲ್ಲಾ ಜನ ಪ್ರತಿನಿಧಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಸಾರ್ವಜನಿಕ ಸೇವಕರೇ ! ಗ್ರಾಮ ಪಂಚಾಯಿತಿ ಅಕೌಂಟೆಂಟ್ ನಿಂದ ಹಿಡಿದು ಸರ್ಕಾರದ ಮುಖ್ಯ ಕಾರ್ಯದರ್ಶಿವರೆಗೂ ಸರ್ಕಾರದಿಂದ ವೇತನ ಗೌರವ ಧನ ಪಡೆದವರು ಕೂಡ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸಾರ್ವಜನಿಕ ಸೇವಕ ಎಂದೇ ಪರಿಗಣಿಸಲಾಗುತ್ತದೆ.
ರಾಜ್ಯದಲ್ಲಿ ಇಂದು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಸು ಇಲ್ಲದೇ ಕಡತ ವಿಲೇವಾರಿ ಮಾಡಲ್ಲ ಎನ್ನುವ ಸ್ಥಿತಿಯಿದೆ. ಹಾಗಂತ ಲಂಚ ಕೊಟ್ಟೇ ಕೆಲಸ ಮಾಡಿಸಿಕೊಳ್ಳುವುದು ತಪ್ಪು. ಹೀಗಾಗಿ ತನ್ನ ಸುತ್ತಮುತ್ತ ನಡೆಯುವ ಭ್ರಷ್ಟಾಚಾರವನ್ನು, ಜನ ಪ್ರತಿನಿಧಿಗಳು ಎಸಗುವ ಅಕ್ರಮವನ್ನು ಜನ ಸಾಮಾನ್ಯರು ಮನಸು ಮಾಡಿದರೆ ಬಯಲಿಗೆ ಎಳೆಯಬಹುದು. ಅದಕ್ಕೆ ಆಸಕ್ತಿ ಮತ್ತು ಜ್ಞಾನ ಮುಖ್ಯ.

ಅಕ್ರಮ ಆಸ್ತಿ ಗಳಿಕೆ ಮತ್ತು ಕೇಸು:
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ರ ಪ್ರಕಾರ ಯಾವುದೇ ಸಾರ್ವಜನಿಕ ಸೇವಕ (ಸರ್ಕಾರಿ ಅಧಿಕಾರಿ- ಜನ ಪ್ರತಿನಿಧಿ) ತನ್ನ ಸೇವಾವಧಿಯಲ್ಲಿ ತನ್ನ ಅಧಿಕಾರ ಬಳಸಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದರೆ, ಅಥವಾ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದರೆ, ಅಂತಹ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಬಹುದು. ಒಬ್ಬ ಸಾರ್ವಜನಿಕ ಸೇವಕ ತನ್ನ ಸೇವಾವಧಿಯಲ್ಲಿ ಅಪ್ರಮಾಣಿಕತೆ ಮೆರೆದು ಲಾಭ ಮಾಡಿಕೊಳ್ಳುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ.

ಒಬ್ಬ ಸಾರ್ವಜನಿಕ ಸೇವಕ ಪಡೆಯುವ ವೇತನ, ಗಳಿಸುವ ಆಸ್ತಿ, ಪಿತ್ರಾರ್ಜಿತ ಆಸ್ತಿಯ ವಿವರಗಳನ್ನು (ಎಪಿಆರ್) ಪ್ರತಿ ವರ್ಷ ಸಾರ್ವಜನಿಕ ಸೇವಕ ತಾನು ಕೆಲಸ ಮಾಡುವ ಇಲಾಖೆಗೆ ಸಲ್ಲಿಸಬೇಕು. ಒಬ್ಬ ಸಾರ್ವಜನಿಕ ಸೇವಕ ಕಾನೂನು ಬದ್ಧ ದುಡಿಮೆ ಹೊರತು ಪಡಿಸಿ ಹೆಚ್ಚವರಿಯಾಗಿ ಆಸ್ತಿ ಮಾಡಿದ್ದರೆ ಅದನ್ನು ಅಕ್ರಮ ಆಸ್ತಿ ಎಂದೇ ಈ ಕಾಯ್ದೆ ಅಡಿ ಪರಿಭಾವಿಸಬೇಕಾಗುತ್ತದೆ. ಒಬ್ಬ ಸಾರ್ವಜನಿಕ ಸೇವಕ ಬೇನಾಮಿ ಆಸ್ತಿ ಗಳಿಸಿದ್ದರೆ, ಜಮೀನು, ನಿವೇಶನ, ಚಿನ್ನ ಅಥವಾ ಹೂಡಿಕೆ ಮಾಡಿದ್ದರೆ, ಸ್ಥಿರ ಅಥವಾ ಚರಾಸ್ತಿ ರೂಪದಲ್ಲಿ ಹೊಂದಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಬಹುದು.

ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖಾ ಸಂಸ್ಥೆ ಕೇಸು ದಾಖಲಿಸಿ ತನಿಖೆ ಮಾಡಿ ಅರೋಪಿತ ಅಧಿಕಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುತ್ತದೆ. ಒಂದು ವೇಳೆ ದೂರು ಒಟ್ಟರೂ ಭ್ರಷ್ಟಾಚಾರ ನಿಗ್ರಹ ದಳ ಯಾವುದೇ ಕ್ರಮ ಜರುಗಿಸದಿದ್ದರೆ, ಇಂತಹ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಪ್ರಜೆ ದಾಖಲೆಗಳ ಸಮೇತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಬಹುದು. ದೂರುದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯ ತನಿಖೆಗೆ ಆದೇಶಿಸುತ್ತದೆ.

ಆರೋಪಿತ ಅಧಿಕಾರಿ ಮೇಲೆ ತನಿಖಾ ಸಂಸ್ಥೆ ಹೊರೆಸುವ ಅಕ್ರಮ ಆಸ್ತಿ ಗಳಿಕೆಗೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕು. ಕಾನೂನು ಬದ್ಧ ಗಳಿಕೆ ಎಂಬುದನ್ನು ಸಾಬೀತು ಮಾಡಬೇಕು, ಇಲ್ಲದಿದ್ದರೆ ಭಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 13 (1) 2 ಅಡಿ ನ್ಯಾಯಾಲಯ ಶಿಕ್ಷೆಗೆ ಗುರಿಪಡಿಸಬಹುದು. ಅಕ್ರಮ ಆಸ್ತಿ ಗಳಕೆ ಆರೋಪ ಸಂಬಂಧ ಆರೋಪಿತ ಸಾರ್ವಜನಿಕ ಸೇವಕನ ವಿರುದ್ಧ ಕೇಸು ದಾಖಲಿಸಲು ಪೂರ್ವಾನಮತಿ ಅಗತ್ಯವಿಲ್ಲ. ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ ಸಕ್ಷಮ ಪ್ರಾಧಿಕಾರದಿಂದ ತನಿಖಾಧಿಕಾರಿ ಅಭಿಯೋಜನಾ ಮಂಜೂರಾತಿ ಪಡೆಯಬೇಕಾಗುತ್ತದೆ.
ಲಂಚ ಸ್ವೀಕಾರ ಮತ್ತು ಶಿಕ್ಷೆ:
ಯಾವುದೇ ಸಾರ್ವಜನಿಕ ಸೇವೆಯನ್ನು ಕಾನೂನು ಅಡಿ ನಿಗದಿ ಪಡಿಸಿದ ಶುಲ್ಕ ಹೊರತು ಪಡಿಸಿ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟರೆ, ಅಥವಾ ಸ್ವೀಕರಿಸಿದರೆ, ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಕೆಲಸವನ್ನು ಬಾಕಿ ಇಟ್ಟಿದ್ದರೆ ಅಂತಹ ಸಾರ್ವಜನಿಕ ಸೇವಕನ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಬಹುದು. 2018 ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಲಂಚ ಪ್ರಕರಣ ದಾಖಲಿಸಬೇಕಾದರೆ, ಲಂಚಕ್ಕೆ ಬೇಡಿಕೆ, ಅದರ ಸ್ವೀಕಾರ, ಮತ್ತು ಕೆಲಸದ ಬಾಕಿ ಬಹು ಮಹತ್ವ ಪಡೆಯುತ್ತವೆ. ಈ ಆರೋಪದಡಿ ಆರೋಪಿತರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಬಹುದು. ಇದಕ್ಕೆ ಯಾವುದೇ ಸಕ್ಷಮ ಪ್ರಾಧಿಕಾರದ ಅನುಮತಿ ಬೇಕಾಗಿಲ್ಲ. ಶಾಸಕರು, ಸಚಿವರು ಲಂಚ ಸ್ವೀಕರಿಸಿದರೆ, ಅಥವಾ ಮೂರನೇ ವ್ಯಕ್ತಿಯಿಂದ ಲಂಚ ಸ್ವೀಕರಿಸಿರುವುದು ಕಂಡು ಬಂದರೆ, ಅವರ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಬಹುದು.
ಒಂದು ಲಂಚ ಸ್ವೀಕರಿಸಿದ ಬಗ್ಗೆ ವಿಡಿಯೋ ಸೇರಿದಂತೆ ಸಾಕ್ಷಾಧಾರಗಳನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಬೇಕು. ಇಲ್ಲವೇ ಲಂಚಕ್ಕೆ ಬೇಡಿಕೆ ಇಟ್ಟಾಗಲೇ ತನಿಖಾ ಸಂಸ್ಥೆಗೆ ದೂರು ನೀಡಬಹುದು. ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಭ್ರಷ್ಟಾಚಾರ ನಿಗ್ರಹ ದಳವಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 7 ರ ಅಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಆರೋಪಿತ ಅಧಿಕಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ ಸಕ್ಷಮ ಪ್ರಾಧಿಕಾರದಿಂದ ಅಭಿಯೋಜನಾ ಮಂಜೂರಾತಿ ಪಡೆಯುವುದು ಅತ್ಯಗತ್ಯ. ಇದನ್ನು ತನಿಖಾಧಿಕಾರಿಯೇ ಮಾಡುತ್ತಾರೆ. ಲಂಚ ಸ್ವೀಕರಿಸಿ ಸಿಕ್ಕಿಬಿದ್ದರೆ ಕನಿಷ್ಠ ಮೂರು ವರ್ಷದಿಂದ ಏಳು ವರ್ಷದ ವರೆಗೂ ನ್ಯಾಯಾಲಯ ಶಿಕ್ಷೆ ವಿಧಿಸಲು ಅವಕಾಶವಿದೆ. ಶಿಕ್ಷೆ ಪ್ರಮಾಣ ನ್ಯಾಯಾಲಯದ ವಿವೇಚನೆಗೆ ಒಳಪಟ್ಟಿರುತ್ತದೆ.
ಅಧಿಕಾರ ದುರುಪಯೋಗ, ಹಗರಣಗಳು ಮತ್ತು ಭಷ್ಟಾಚಾರ ನಿಯಂತ್ರಣ ಕಾಯ್ದೆ:
ಯಾವುದೇ ಸಾರ್ವಜನಿಕ ಸೇವಕ ( ಅಧಿಕಾರಿಗಳು, ಜನ ಪ್ರತಿನಿಧಿಗಳು ಸರ್ಕಾರದ ವೇತನ ಪಡೆದವರು) ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗಿ ಸಾರ್ವಜನಿಕ ಹಣ ದುರುಪಯೋಗ ಪಡಿಸಿಕೊಂಡಿದ್ದರೆ, ಅಥವಾ ಬೇರೆ ಖಾಸಗಿ ವ್ಯಕ್ತಿ ಸಂಸ್ಥೆಗಳಿಗೆ ಲಾಭ ಮಾಡಿಕೊಟ್ಟು ಅವರಿಂದ ಅನುಕೂಲ ಮಾಡಿಕೊಂಡಿರುವುದು ಕಂಡು ಬಂದರೆ, ಅಂತಹ ಸಂದರ್ಭದಲ್ಲೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ಸಲ್ಲಿಸಬಹುದು. ಈ ದೂರುಗಳನ್ನು ತನಿಖೆ ನಡೆಸಬೇಕಾದರೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ತಿದ್ದುಪಡಿ ಪ್ರಕಾರ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಅಗತ್ಯ.
ಪೂರ್ವಾನುಮತಿ ಪಡೆದ ಬಳಿಕವೇ ತನಿಖೆ ನಡೆಸಲು ಸಾಧ್ಯ. ಒಂದು ವೇಳೆ ಪೂರ್ವಾನುಮತಿ ಕೇಳಿ, ಮೂರು ತಿಂಗಳಲ್ಲಿ ಅದು ಸಿಗದಿದ್ದರೆ, ದೂರುದಾರರು ನ್ಯಾಯಾಲಯದ ಮೊರೆ ಹೋಗಬಹುದು. ಸಂಬಂಧಪಟ್ಟ ಸಾರ್ವಜನಿಕ ಸೇವಕರ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅವಕಾಶವಿದೆ. ನ್ಯಾಯಾಲಯ ಆದೇಶದ ಮೇರೆಗೆ ತನಿಖಾ ಸಂಸ್ಥೆ ತನಿಖೆ ನಡೆಸಬಹುದು. ಹಗರಣ, ಅಧಿಕಾರ ದುರುಪಯೋಗ, ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಸಂದರ್ಭದಲ್ಲಿ ದೂರು ನೀಡುವ ಮೂಲಕ ಇಲ್ಲವೇ ಖಾಸಗಿ ದೂರು ಸಲ್ಲಿಸುವ ಮೂಲಕ ಸಾಮಾನ್ಯ ಪ್ರಜೆ ಭ್ರಷ್ಟಾಚಾರ ವಿರುದ್ಧ ಸಮರ ಸಾರಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅವಕಾಶ ಕಲ್ಪಿಸಲಾಗಿದೆ.
ಈ ಮೂರು ವಿಚಾರದ ಬಗ್ಗೆ ಸ್ಪಷ್ಟತೆ ಇದ್ದಲ್ಲಿ ಮಾತ್ರ ಭ್ರಷ್ಟರ ವಿರುದ್ಧ ಸುಲಭವಾಗಿ ಕ್ರಮ ಜರುಗಿಸಬಹುದು. ರಾಜ್ಯದಲ್ಲಿ ಭ್ರಷ್ಟರ ಪಾಲಿಗೆ ಲೋಕಾಯುಕ್ತ ಸಂಸ್ಥೆ ಸಿಂಹಸ್ವಪ್ನವಾಗಿತ್ತು. ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಿಂದ ಹೊರಗೆ ಇಟ್ಟು ಸರ್ಕಾರದ ಅಧೀನಕ್ಕೆ ಒಳಪಡಿಸಿದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನವೇ ಸಂಪೂರ್ಣ ನೆಲಕಚ್ಚಿದೆ. ಸರ್ಕಾರದ ಅಧೀನಕ್ಕೆ ಎಸಿಬಿ ಒಳಪಟ್ಟಿರುವ ಕಾರಣ ಅಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.












Click it and Unblock the Notifications