ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಗೃಹಿಣಿಯರ ಮೇಲುಗೈ

ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ನೀಡಿರುವ ಮಾಹಿತಿಯಂತೆ ಕರ್ನಾಟಕ ರಾಜ್ಯದಲ್ಲಿ 2001ರಿಂದ 2012ರ ವರೆಗೆ 1,46,785 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ ಗೃಹಿಣಿಯರು ಮತ್ತು ರೈತರೇ ಹೆಚ್ಚಾಗಿದ್ದಾರೆ. ಶೇ 8.7ರಷ್ಟು ಖಾಸಗಿ ವಲಯದ ಉದ್ಯೋಗಿಗಳು ಸಹ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಂಕಿ-ಸಂಖ್ಯೆ ಮಾಹಿತಿ ನೀಡಿದೆ.
ಆತ್ಮಹತ್ಯೆಗೆ ಶರಣಾಗುವವರಲ್ಲಿ ಗೃಹಿಣಿಯರ ಸಂಖ್ಯೆಯೇ ಹೆಚ್ಚಾಗಿತ್ತು. 2001ರಿಂದ 2012ರವರೆಗೆ ಆತ್ಮಹತ್ಯೆಗೆ ಶರಣಾದ ಗೃಹಿಣಿಯರ ಸಂಖ್ಯೆ 44,314. ಕೌಟುಂಬಿಕ ಕಲಹಗಳು ಗೃಹಿಣಿಯರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡವರು 15-29 ವಯೋಮಾನದವರು ಎಂಬುದು ವಿಭಾಗ ನೀಡಿದ ಮಾಹಿತಿಯಿಂದ ತಿಳಿದು ಬಂದಿದೆ. ಅಂದರೆ, ವಿದ್ಯಾರ್ಥಿಗಳು ಮತ್ತು ಗೃಹಿಣಿಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಸಮಾಧಾನದ ಸಂಗತಿ ಎಂದರೆ, 2001ರಲ್ಲಿ ಶೇ 50ರಷ್ಟಿದ್ದ ಗೃಹಿಣಿಯರ ಆತ್ಮಹತ್ಯೆ ಪ್ರಕರಣ 2012ರ ವೇಳೆಗೆ ಶೇ 39ಕ್ಕೆ ಕಡಿಮೆಯಾಗಿದೆ. ಇನ್ನೂ ರೈತರ ಆತ್ಮಹತ್ಯೆಗೆ ಸಾಮಾಜಿಕ ಸ್ಥಾನಮಾನ, ಬೆಳೆನಾಶ ಮುಂತಾದವುಗಳು ಕಾರಣವಾಗಿರಬಹುದು. ರೈತರ ಹಿತ ಕಾಪಾಡುತ್ತೇವೆ ಎಂದು ಹೇಳುವ ಸರ್ಕಾರ ಇಂತಹ ಅಂಕಿಅಂಶಗಳ ಬಗ್ಗೆ ಒಮ್ಮೆ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ.











Click it and Unblock the Notifications