ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕೋವಿಡ್ ಸೋಂಕು
ಬೆಂಗಳೂರು, ಸೆಪ್ಟೆಂಬರ್ 16 : ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕೋವಿಡ್ ಸೋಂಕು ತಗುಲಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲದ ಕಾರಣ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದಾರೆ.
Recommended Video
ಶಿಗ್ಗಾವಿ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಸಚಿವ ಬಸವರಾಜ ಬೊಮ್ಮಾಯಿ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಸಹ ಪರೀಕ್ಷೆಗೆ ಒಳಪಟ್ಟಿದ್ದರು.
ಸಚಿವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. "ನನಗೂ ಸಹ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ ಹಾಗೂ ಆರೋಗ್ಯವಾಗಿದ್ದೇನೆ" ಎಂದು ಸಚಿವರು ಹೇಳಿದ್ದಾರೆ.

ಸಚಿವರು ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದಾರೆ. "ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ" ಎಂದು ಮನವಿ ಮಾಡಿದ್ದಾರೆ.
ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೋವಿಡ್-19 ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು ನನಗೂ ಸಹ ಸೊಂಕು ದೃಢಪಟ್ಟಿದ್ದು, ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ ಹಾಗೂ ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ.#COVID19India
— Basavaraj S Bommai (@BSBommai) September 16, 2020
ಕಳೆದ ಒಂದು ವಾರದಿಂದ ಸಚಿವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ವಿಧಾನಸೌಧದಲ್ಲಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಪಾಲ್ಗೊಂಡಿದ್ದರು.
ಮಂಗಳವಾರ ಕರ್ನಾಟಕದಲ್ಲಿ 7,576 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,75,265. ಸಕ್ರಿಯ ಪ್ರಕರಣಗಳ ಸಂಖ್ಯೆ 98,536.












Click it and Unblock the Notifications