ಮೇ 12 ರಂದು ಕರ್ನಾಟಕದಾದ್ಯಂತ ಖಾಸಗಿ, ಸರ್ಕಾರಿ ಸಿಬ್ಬಂದಿಗಳಿಗೆ ರಜೆ
Recommended Video

ಬೆಂಗಳೂರು, ಮೇ 11: ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಅಂಗವಾಗಿ ಮೇ 12 ರಂದು ಮತದಾನ ನಡೆಯಲಿದೆ. ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜು, ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆ ಸೇರಿದಂತೆ) ಮೇ 12 ರಂದು ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದೆ.
ಮೇ 12 ರಂದು ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟಿರುವ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಜೊತೆಗೆ ತುರ್ತು ಸೇವೆಗಳಿಗೆ ಸಾರ್ವತ್ರಿಕ ರಜೆ ಅನ್ವಯವಾಗುವುದಿಲ್ಲ.
ಸರ್ಕಾರಿ ಕಛೇರಿ ಹಾಗೂ ಸರ್ಕಾರಿ ಶಾಲೆ - ಕಾಲೇಜುಗಳಲ್ಲಿ ಮತಗಟ್ಟೆಯನ್ನು ಸ್ಥಾಪಿಸಿದ್ದಲ್ಲಿ 2018 ರ ಮೇ 11 ರಂದು (ಶುಕ್ರವಾರ) ಅಂತಹ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಮತಗಟ್ಟೆ ಪೂರ್ವ ತಯಾರಿಗಾಗಿ ರಜೆ ಘೋಷಿಸುವ ಬಗ್ಗೆ ಆಯಾ ಮತಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿಗಳು ನಿರ್ಧಾರ ಕೈಗೊಳ್ಳಬಹುದಾಗಿದೆ.

ಹಾಗೆಯೇ, ಮತ ಎಣಿಕೆ ದಿನದಂದು ಸಹ ಅವಶ್ಯಕತೆ ಇದ್ದಲ್ಲಿ ಮತ ಎಣಿಕೆ ನಡೆಯುವ ಸರ್ಕಾರಿ ಕಚೇರಿ ಇಲ್ಲವೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳೂ ಕ್ರಮ ತೆಗೆದುಕೊಳ್ಳಬಹುದಾಗಿದೆ.
ಬ್ಯಾಂಕುಗಳಿಗೆ ರಜೆ
ಮತದಾನ ನಡೆಯುವ ದಿನದಂದು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಕೃತ ಬ್ಯಾಂಕು, ಇತರೆ ಬ್ಯಾಂಕುಗಳು ಮತ್ತು ಇನ್ನಿತರ ಕಚೇರಿಗಳಿಗೆ ಅನ್ವಯಿಸಿದಂತೆ 'ನೆಗೋಷಿಯೇಟ್ ಇನ್ಸ್ಟ್ರುಮೆಂಟ್ ಆಕ್ಟ್-1881'ರ ಅನ್ವಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ವೇತನ ಸಹಿತ ರಜೆ
ಯಾವುದೇ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಅಥವಾ ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಖಾಯಂ ಮತ್ತು ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತದಾನದ ದಿನ ವೇತನ ಸಹಿತ ರಜೆಗೆ ಅರ್ಹರಾಗಿರುತ್ತಾರೆ.
ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ / ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ನೌಕರ ಮತದಾರರಿಗ ಮತ ಚಲಾಯಿಸಲು ಅನುಕೂಲವಾಗುವಂತೆ ಮೇ 12 ರಂದು ವೇತನ ಸಹಿತ ರಜೆಯನ್ನು ನೀಡುವಂತೆ ಎಲ್ಲ ನೋಂದಾಯಿತ ಕಾರ್ಖಾನೆಗಳ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕಾರ್ಖಾನೆಗಳು, ಬ್ರಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಪ್ರಕಟಣೆ ತಿಳಿಸಿದೆ.











Click it and Unblock the Notifications