School Holiday: ರಾಜ್ಯದ ಈ ಜಿಲ್ಲೆಗಳಲ್ಲಿ 1-10ನೇ ತರಗತಿ ಶಾಲೆಗಳಿಗೆ ರಜೆ ಘೋಷಣೆ
School Holiday: ರಾಜ್ಯಕ್ಕೆ ಅವಧಿಗೂ ಮುನ್ನ ಮುಂಗಾರು ಮಳೆ ಪ್ರವೇಶಿಸಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಈ ಹಿನ್ನೆಲೆ ಈಗಾಗಲೇ ಕೆಲವೆಡೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗೆಯೇ ಇದೀಗ ಇಂದು (ಮೇ 30) ಈ ಜಿಲ್ಲೆಗಳಲ್ಲೂ ರಜೆ ನೀಡಲಾಗಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರಾಜ್ಯದಲ್ಲಿ ಬೇಸಿಗೆ ರಜೆ ಮುಕ್ತವಾಗಿ ಗುರುವಾರದಿಂದ ಅಂದರೆ ಮೇ 29ರಿಂದ ಶಾಲೆಗಳು ಪುನರಾರಂಭಗೊಂಡಿದ್ದು, ಮೇ 30ರಿಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆಯೇ ಕೆಲವೆಡೆ ಭಾರೀ ಮಳೆಮುಂದುವರೆದಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಮುಂದುವರೆದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 30 ಹಾಗೂ 31ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೀ ಈಗಾಗಲೇ ಕರಾವಳಿ ಭಾಗದಲ್ಲಿ ಬಿಡುವು ಕೊಡದೇ ಮಳೆರಾಯ ಆರ್ಭಟ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಭಾಗದ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಮತ್ತೊಂದೆಡೆ ಉಡುಪಿ ಜಿಲ್ಲೆಯಲ್ಲೂ ಎಲ್ಲಾ ಅಂಗನವಾಡಿ ಹಾಗೂ 1-10ನೇ ತರಗತಿವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ.ಕೆ ಅವರು ಆದೇಶಿಸಿದ್ದಾರೆ. ಈಗಾಗಲೇ ಕೊಡಗು, ಮೈಸೂರು, ಉಡುಪಿ ಜಿಲ್ಲೆಯಲ್ಲೂ ಕೂಡ ರಜೆ ಘೋಷಣೆ ಮಾಡಲಾಗಿತ್ತು.
ಇನ್ನು ಗುಡುಗು, ಮಿಂಚು ಸಹಿತ ರಣಭೀಕರ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ಕೊಡಗು, ಹಾಸನ, ವಿಜಯಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಮೈಸೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ ಇದ್ದು, ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಜೂನ್ ಆರಂಭದಿಂದ ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಅಂತಲೂ ಮುನ್ಸೂಚನೆ ಇದೆ.
ಈಗಾಗಲೇ ಕಳೆದ ಬಾರಿ ಅಂದರೆ 2024ರಲ್ಲಿ ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು, ಪ್ರಮುಖ ಜಲಾಶಯಗಳು ತುಂಬಿ ಹರಿದಿದ್ದವು. ಪರಿಣಾಮ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿ ಆಗಿದ್ದವು. ಆದರೆ, ಈ ಬಾರಿ ಅಂದರೆ 2025ರಲ್ಲಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದ್ದು, ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದೆ. ಈಗಲೇ ಹಿಂಗಾದ್ರೆ ಮುಂದೆ ಹೇಗೆ ಎನ್ನುವ ಆತಂಕ ಜನರದ್ದಾಗಿದೆ.












Click it and Unblock the Notifications