Hogenakkal Falls: ಹೊಗೇನಕಲ್ ಜಲಪಾತ ನೀರಿನ ಹರಿವು ಹೆಚ್ಚಳ; ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಜಲಪಾತಗಳು, ಜಲಾಶಯಗಳು ನಿಧಾನವಾಗಿ ತುಂಬಿಕೊಳ್ಳುತ್ತಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ರಾಜ್ಯದಲ್ಲಿರುವ ಕಾವೇರಿ ಜಲಾನಯನ ಪ್ರದೇಶದಗಳ ಅಣೆಕಟ್ಟುಗಳಿಗೆ ನೀರಿನ ಹರಿವು ಹೆಚ್ಚಾಗಿದೆ.
ಕಬಿನಿ ಜಲಾಶಯ ತುಂಬುವ ಹಂತ ತಲುಪಿದ್ದು ನೀರನ್ನು ಹೊರಬಿಡಲಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರನ ತಮಿಳುನಾಡಿನ ಮೆಟ್ಟೂರು ಜಲಾಶಯದ ಒಳಹರಿವು ಕೂಡ ಹೆಚ್ಚಾಗುತ್ತಿದೆ.

ಹೊಗೇನಕಲ್‌ನಲ್ಲಿ ನೀರಿನ ಹರಿವು ಹೆಚ್ಚಳ
ಹೊಗೇನಕಲ್ ಜಲಪಾತದ ನೀರಿನ ಒಳಹರಿವು ಸೋಮವಾರ 3,000 ಕ್ಯೂಸೆಕ್ ಇದ್ದರೆ ಮಂಗಳವಾರ 5,500 ಕ್ಯೂಸೆಕ್‌ಗೆ ಹೆಚ್ಚಾಗಿದೆ. ರಾಜ್ಯದ ಕೆಆರ್ ಎಸ್, ಕಬಿನಿ ಜಲಾಶಯದಿಂದ 4,554 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಕಬಿನಿ ಅಣೆಕಟ್ಟಿನಿಂದ 4,000 ಕ್ಯೂಸೆಕ್ ಮತ್ತು ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನಿಂದ 554 ಕ್ಯೂಸೆಕ್ಸ್ ನೀರು ಸದ್ಯ ತಮಿಳುನಾಡಿಗೆ ಹರಿಯುತ್ತಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಲ್ಪ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಸ
ಅಣೆಕಟ್ಟುಗಳಿಂದ ಬಿಡುಗಡೆಯಾದ ನೀರು ಸೋಮವಾರ ಸಂಜೆ ಹೊಗೇನಕಲ್ ಜಲಪಾತವನ್ನು ತಲುಪಿದೆ, ಮಂಗಳವಾರ ಸಂಜೆಯ ವೇಳೆಗೆ ಮೆಟ್ಟೂರು ಜಲಾಶಯದತ್ತ ಹರಿಯುತ್ತಿದೆ. ಮೆಟ್ಟೂರು ಜಲಾಶಯದ ಒಳಹರಿವು ಕೂಡ ಹೆಚ್ಚಾಗಲಿದೆ.
ಕಳೆದ ಐದು ದಿನಗಳಲ್ಲಿ ಮೆಟ್ಟೂರು ಜಲಾಶಯದ ನೀರಿನ ಮಟ್ಟ 0.57 ಅಡಿಗಳಷ್ಟು ಹೆಚ್ಚಾಗಿದೆ. ಸೋಮವಾರ ನೀರಿನ ಮಟ್ಟ 40.05 ಅಡಿ ಇದ್ದ ಮೆಟ್ಟೂರು ಜಲಾಶಯದ ನೀರಿನ ಸಂಗ್ರಹ ಮಂಗಳವಾರ ಸಂಜೆ ವೇಳೆಗೆ 40.22 ಅಡಿಗಳಿಗೆ ಏರಿಕೆಯಾಗಿದೆ. ಜಲಾಶಯದ ಪೂರ್ಣ ಸಾಮರ್ಥ್ಯ 120 ಅಡಿಗಳಾಗಿದೆ.












Click it and Unblock the Notifications