ಏ.10ರಿಂದ ಮೇ 28ರವರೆಗೆ ಮಡಿಕೇರಿಯಲ್ಲಿ ಹಾಕಿ ಉತ್ಸವ

By: ಲವಕುಮಾರ್ ಬಿಎಂ, ಮಡಿಕೇರಿ
Subscribe to Oneindia Kannada

ಮಡಿಕೇರಿ, ಏಪ್ರಿಲ್ 09 : ಲಿಮ್ಕಾ ದಾಖಲೆ ಬರೆದಿರುವ ಕೊಡವ ಕುಟುಂಬಗಳ ಹಾಕಿನಮ್ಮೆ(ಹಾಕಿಉತ್ಸವ) ವರ್ಷದಿಂದ ವರ್ಷಕ್ಕೆ ತನ್ನ ವೈಭವವನ್ನು ಹೆಚ್ಚಿಸಿಕೊಂಡು ಹೋಗುವ ಮೂಲಕ ದೇಶ ವಿದೇಶಗಳ ಗಮನಸೆಳೆಯುವುದರೊಂದಿಗೆ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ.

ಈ ಬಾರಿ ಹಾಕಿ ಉತ್ಸವ ಕೊಡಗಿನ ಮುಖ್ಯಪಟ್ಟಣ ಮಂಜಿನ ನಗರಿ ಮಡಿಕೇರಿಯಲ್ಲಿ ನಡೆಯುತ್ತಿದ್ದು, ಏ.10ರಂದು ಉತ್ಸವಕ್ಕೆ ಚಾಲನೆ ದೊರೆಯಲಿದೆ. ಮೇ 28ರವರೆಗೆ ಪಂದ್ಯ ನಡೆಯಲಿದೆ. ಈ ಬಾರಿ ದಾಖಲೆಯ 299 ತಂಡಗಳು ಪಂದ್ಯಾವಳಿಯಲ್ಲಿ ಸುಮಾರು 5 ಸಾವಿರ ಆಟಗಾರರು ಸೆಣೆಸಾಡಲಿದ್ದಾರೆ. [ಕೊಡಗಿನ ಹೆಮ್ಮೆಯ ಹಾಕಿ ಉತ್ಸವ ಹಾಕಿನಮ್ಮೆಯ ಇತಿಹಾಸ]

Hockey festival in Madikeri from 10th April

ಕಾಫಿ ಬೆಳೆಗಾರರು, ಸೇನೆ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ವಿದ್ಯಾರ್ಥಿಗಳು, ಭಾರತದ ಹಾಕಿ ತಂಡದಲ್ಲಿ ಆಟವಾಡುತ್ತಿರುವ ಆಟಗಾರರು ಹೀಗೆ ಹಲವರು ಪಾಲ್ಗೊಳ್ಳಲಿದ್ದಾರೆ. ಇನ್ನು ತಂಡದಲ್ಲಿ ಮಹಿಳೆಯರಿಗೆಂದು ಪ್ರತ್ಯೇಕವಿಲ್ಲದೆ, ತಮ್ಮ ಕುಟುಂಬದ ತಂಡದಲ್ಲಿ ಪುರುಷರ ನಡುವೆಯೇ ಅವರಿಗೆ ಸರಿಸಮಾನವಾಗಿ ಆಟವಾಡುವುದು ವಿಶೇಷವಾಗಿದೆ.

ಮಡಿಕೇರಿಯಲ್ಲಿ ನಡೆಯುತ್ತಿರುವ 20ನೇ ವರ್ಷದ ಹಾಕಿ ಉತ್ಸವದ ನೇತೃತ್ವವನ್ನು ಶಾಂತೆಯಂಡ ಕುಟುಂಬವು ವಹಿಸಿಕೊಂಡಿದೆ. ಮಡಿಕೇರಿಯಲ್ಲಿ ಸುಮಾರು 10 ವರ್ಷದ ಬಳಿಕ ಹಾಕಿ ಉತ್ಸವ ನಡೆಯುತ್ತಿದ್ದು, ಒಂದು ಕೋಟಿ ವೆಚ್ಚಮಾಡಲಾಗುತ್ತಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎರಡು ಮೈದಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

Hockey festival in Madikeri from 10th April

ಸಂಸದ ಪ್ರತಾಪ್ ಸಿಂಹ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 30 ಲಕ್ಷ ರೂ. ಅನುದಾನ ಬಳಸಿಕೊಂಡು ಎರಡು ಶಾಶ್ವತ ಮೈದಾನ, ಒಂದು ವೇದಿಕೆ ಮತ್ತು 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ನ್ನು ನಿರ್ಮಿಸಲಾಗಿದೆ. ಪಂದ್ಯಾವಳಿ ಬಳಿಕ ಕಾಲೇಜಿಗೆ ಇದು ಉಪಯೋಗಕ್ಕೆ ಬರಲಿದೆ. ಈಗಾಗಲೇ ಜಿಲ್ಲೆಯಾದ್ಯಂತ ಅಲ್ಲಲ್ಲಿ ಪಂದ್ಯಾವಳಿ ನಡೆಸಲಾಗಿದ್ದು, ಇದರಿಂದ ಶಾಲೆ, ಕಾಲೇಜುಗಳ ಮೈದಾನಗಳು ಅಭಿವೃದ್ಧಿಯಾಗಿದೆ. ಇದು ಹಾಕಿ ಉತ್ಸವದ ಮತ್ತೊಂದು ವಿಶೇಷತೆಯಾಗಿದೆ.

ಮಡಿಕೇರಿಯಲ್ಲಿ ನಡೆಯುವ ಹಾಕಿ ಉತ್ಸವವನ್ನು ನೋಡಲು ಅನುಕೂಲವಾಗುವಂತೆ ಸುಮಾರು 30 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸುಮಾರು 26 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತಿದ್ದು, ಅದಕ್ಕೂ ಮುನ್ನ ಮಡಿಕೇರಿ ಕೋಟೆ ಆವರಣದಲ್ಲಿರುವ ಕೋಟೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಮೈದಾನಕ್ಕೆ ತೆರಳಲಾಗುವುದು. ಮೆರವಣಿಗೆಯಲ್ಲಿ ಕೊಡವರ ಸಂಪ್ರದಾಯವನ್ನು ನೆನಪಿಸುವ ಸ್ತಬ್ದ ಚಿತ್ರಗಳಿರುತ್ತವೆ.

ಸಾಂಪ್ರದಾಯಿಕ ಉಡುಪಿನಲ್ಲಿ ಬೆಳ್ಳಿ ಸ್ಟಿಕ್‌ನಿಂದ ಬೆಳ್ಳಿ ಚೆಂಡನ್ನು ತಳ್ಳುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ಹಾಕಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ಶಾಂತೆಯಂಡ ಕುಟುಂಬದ ಪಟ್ಟೇದಾರ(ಮುಖ್ಯಸ್ಥರು) ಬಿ.ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಪ್ರತಾಪಸಿಂಹ, ಕೊಡವ ಹಾಕಿ ಅಕಾಡೆಮಿ ಸ್ಥಾಪಕಾಧ್ಯಕ್ಷ ಪಾಂಡಂ ಎಂ.ಕುಟ್ಟಪ್ಪ ಹಾಗೂ ಮೂರನೇ ವರ್ಲ್ಡ್ ಕಪ್ ಚಿನ್ನದ ಪದಕ ವಿಜೇತ ಹಾಕಿಪಟು ಪೈಕೇರ ಕಾಳಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ದಿನೇಶ್‌ ಗುಂಡೂರಾವ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನೀಲ್ ಸುಬ್ರಹ್ಮಣಿ, ನಗರಸಭಾಧ್ಯಕ್ಷೆ ಬಂಗೇರ, ಮಾಜಿ ಸಚಿವರಾದ ಎಂ.ಸಿ.ನಾಣಯ್ಯ, ಟಿ.ಜಾನ್ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World famous hockey festival Hakinamme will begin in Madikeri from April 10 till April 28. This is the 20th anniversary of the festival. Women also participate in the festival along with men in this tournament.
Please Wait while comments are loading...