ಹಿಜಾಬ್ V/s ಕೇಸರಿ ಶಾಲು: ಕಾಲೇಜಿಗೆ ರಜೆ ಘೋಷಿಸಿ ಆನ್‌ಲೈನ್ ತರಗತಿ ಆರಂಭಿಸಲು ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು, ಫೆಬ್ರವರಿ 8: "ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ ನಡೆಯುತ್ತಿರುವ ಶಾಲಾ ಕಾಲೇಜುಗಳಿಗೆ ತಕ್ಷಣ ರಜೆ ಘೋಷಿಸಬೇಕು. ಅದರ ಬದಲಿಗೆ ಆನ್ ಲೈನ್ ತರಗತಿಗಳನ್ನು ಶುರು ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ನಡುವಿನ ಸಂಘರ್ಷ ಅತಿರೇಕಕ್ಕೆ ತಲುಪಿದ್ದು, ವಿದ್ಯಾರ್ಥಿಗಳು ಪರಸ್ಪರ ಕಾದಾಟಕ್ಕೆ ಇಳಿದು ಶಾಲಾ-ಕಾಲೇಜುಗಳಳೇ ಕದನಕಣಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಸಂಘರ್ಷಕ್ಕೆ ಇಳಿದಿರುವ ಕಡೆಗಳಲ್ಲಿ ಪುಂಡು ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮಕೈಗೊಳ್ಳದೆ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ವಿದ್ಯಾರ್ಥಿಗಳ ಹೆತ್ತವರಲ್ಲಿ ಆತಂಕ ಹುಟ್ಟಿಸಿದೆ ಎಂದಿದ್ದಾರೆ.
ಹಿಜಾಬ್ ವರ್ಸಸ್ ಕೇಸರಿ ವಿವಾದ ಪ್ರಾರಂಭದ ಹಂತದಲ್ಲಿಯೇ ಸ್ಥಳೀಯವಾಗಿ ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ಸರಳ ಸಮಸ್ಯೆಯನ್ನು ರಾಜಕೀಯ ಕಾರಣಕ್ಕಾಗಿ ಉಲ್ಭಣಗೊಳಿಸಿರುವ ರಾಜ್ಯ ಸರ್ಕಾರ ಈಗ ನಿಯಂತ್ರಿಸಲಾಗದೆ ಕೈಚೆಲ್ಲಿ ಕೂತಿದೆ ಎಂದು ಸಿದ್ದರಾಮಯಯ್ಯ ಆರೋಪಿಸಿದ್ದಾರೆ.

ರಾಜ್ಯದ ಸಚಿವರಿಂದ ಪ್ರಚೋದನಕಾರಿ ಹೇಳಿಕೆ:
ಕರ್ನಾಟಕದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಹೊಣೆಗಾರಿಕೆ ರಾಜ್ಯ ಶಿಕ್ಷಣ ಸಚಿವರು ಮತ್ತು ಗೃಹಸಚಿವರ ಮೇಲಿದೆ. ಆದರೆ ಅವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿರುವುದು ವಿಷಾದನೀಯವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕರ್ನಾಟಕದ ಮೊದಲ ಹಿಜಾಬ್ ಪ್ರಕರಣ: 2009ರ ಘಟನೆಯ ವಿವರ
ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ಆಗ್ರಹ:
ರಾಜ್ಯದಲ್ಲಿ ಸೃಷ್ಟಿಯಾಗಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಗಂಭೀರತೆಯನ್ನು ಅರಿತುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಬೇಕಿದೆ. ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಆನ್ ಲೈನ್ ತರಗತಿಗಳನ್ನು ತಕ್ಷಣ ಶುರು ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹಿಜಾಬ್ ವಿವಾದ: ಆರಂಭದಿಂದ ಕೋರ್ಟ್‌ವರೆಗೆ, ಇಲ್ಲಿದೆ ಟೈಮ್‌ಲೈನ್
ಒಂದು ವಾರ ಕಾಲೇಜು ಬಂದ್ ಮಾಡಲು ಒತ್ತಾಯ:
"ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಪರಿಸ್ಥಿತಿ ಕೈ ಮೀರಿದೆ. ಇದರ ಪರಿಣಾಮವಾಗಿ ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಆನ್‌ಲೈನ್ ಶಿಕ್ಷಣ ಮುಂದುವರಿಸಿ, ಘಟನೆ ಜರುಗಿರುವ ಶಿಕ್ಷಣ ಸಂಸ್ಥೆಗಳನ್ನು ಒಂದು ವಾರ ಕಾಲ ಬಂದ್ ಮಾಡಬೇಕು," ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಕಾಲೇಜುಗಳಿಗೆ ರಜೆ ಘೋಷಣೆ:
ಮಂಗಳವಾರ ಉಡುಪಿ, ಮಂಡ್ಯ, ಮಡಿಕೇರಿ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕಾಲೇಜುಗಳ ಮೇಲೆ ಕಿಡಿಗೇಡಿಗಳ ಗುಂಪು ಕಲ್ಲುತೂರಾಟ ನಡೆಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಸ್ ಮೇಲೆ ಕಲ್ಲು ತೂರಲಾಗಿದೆ. ಅದೇ ರೀತಿ ಬಾಗಲಕೋಟೆಯ ರಬಕವಿ ಬನಹಟ್ಟಿ ಪಟ್ಟಣದಲ್ಲೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾದ ಕಾಲೇಜುಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಗೃಹ ಸಚಿವರ ಮನವಿ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಎರಡು ವರ್ಷಗಳ ವ್ಯಾಸಂಗ ಅವಧಿ ಹಾಳಾಗಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಆಲೋಚನೆ ಮಾಡಬೇಕೇ ವಿನಃ ಬೇರೆ ಯಾವುದೂ ಇಲ್ಲಿ ಮುಖ್ಯವಲ್ಲ. ಈ ವರ್ಷ ತುಂಬಾ ಚೆನ್ನಾಗಿ ತರಗತಿಗಳು ನಡೆಯುತ್ತಿವೆ. ಕೆಲವೇ ತಿಂಗಳುಗಳಲ್ಲಿ ಪರೀಕ್ಷೆಗಳು ಎದುರಾಗಲಿದ್ದು, ಅವುಗಳಿಗೆ ವಿದ್ಯಾರ್ಥಿಗಳು ಅಣಿಯಾಗಬೇಕೇ ಹೊರತೂ ಮನಸ್ಸು ಹಾಳುಮಾಡಿಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
"ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಬುದ್ಧ ಹೇಳಿ ಮನೆಗೆ ಕರೆಸಿಕೊಳ್ಳಬೇಕು. ಶಾಂತಿಯುತವಾಗಿ ಶಾಲಾ ಕಾಲೇಜುಗಳು ನಡೆಯುವುದಕ್ಕೆ ಅವಕಾಶ ನೀಡಬೇಕು ಎಂದು ಪೋಷಕರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.












Click it and Unblock the Notifications