ಬೆಳಗಾವಿ-ಧಾರವಾಡ-ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲು
ಬೆಂಗಳೂರು, ಜುಲೈ 28 : ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ನಡುವೆ ಹೈಸ್ಪೀಡ್ ರೈಲು ಆರಂಭಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಬೆಳಗಾವಿ ಮತ್ತು ಧಾರವಾಡ ನಡುವೆ ಪ್ರಸ್ತುತ ನೇರ ರೈಲುಗಳು ಸಂಚಾರ ನಡೆಸುತ್ತಿಲ್ಲ.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಈ ಕುರಿತು ಮಾಹಿತಿ ನೀಡಿದರು. "ಬೆಳಗಾವಿ-ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ಬುಲೆಟ್ ರೈಲು ಮಾದರಿಯ ಹೈಸ್ಫೀಡ್ ರೈಲು ಓಡಿಸುವ ಚಿಂತನೆ ಇದೆ. ಈ ಸಂಬಂಧ ಅಧ್ಯಯನ ನಡೆಸಲಾಗುತ್ತದೆ" ಎಂದರು.
"ಈ ಮೂರು ನಗರಗಳ ನಡುವೆ ಬಸ್ಸಿನ ಹಾಗೆ ರೈಲು ಸಂಪರ್ಕ ಕಲ್ಪಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂದು ಅಧ್ಯಯನ ಮಾಡಲಾಗುತ್ತದೆ" ಎಂದು ಸಚಿವರು ಹೇಳಿದರು.

ಬೆಳಗಾವಿ-ಧಾರವಾಡ ನಡುವೆ ಪ್ರಸ್ತುತ ನೇರವಾದ ರೈಲುಗಳು ಮಾರ್ಗವಿಲ್ಲ. ಖಾನಾಪುರ-ಲೋಂಡಾ-ಆಳ್ನಾವರ ಮಾರ್ಗವಾಗಿ ಸದ್ಯ ರೈಲುಗಳು ಸಂಚಾರ ನಡೆಸುತ್ತಿವೆ. ಇದೇ ಮಾರ್ಗದಲ್ಲಿ ರೈಲು ಓಡಿಸಬೇಕೇ? ಎಂದು ಅಧ್ಯಯನ ಮಾಡಲಾಗುತ್ತದೆ.
ಧಾರವಾಡ-ಕಿತ್ತೂರು ಮೂಲಕ ರೈಲು ಹಾದು ಹೋಗುವಂತೆ ಹೊಸ ಮಾರ್ಗ ನಿರ್ಮಾಣ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿದೆ. ಸಚಿವರು ಸಹ ಈ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿ ನೀಡಿಲ್ಲ.












Click it and Unblock the Notifications