ಆರ್ಥಿಕ ಹಿನ್ನೆಲೆ ಪರಿಗಣಿಸಿ ಆರೋಪಿ ವಿರುದ್ಧದ ಪೋಕ್ಸೋ ಕೇಸ್ ರದ್ದು
ಬೆಂಗಳೂರು, ಫೆಬ್ರವರಿ 27: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ, ದೈಹಿಕ ಸಂಪರ್ಕ ಬೆಳೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣವಾದ 20 ವರ್ಷದ ಯುವಕನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ಆರೋಪಿಯ ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆ, ಜತೆಗೆ ಆತನ ತಾಯಿ ಅವನನ್ನೇ ಅವಲಂಬಿಸಿರುವುದು.
ತಮ್ಮ ವಿರುದ್ಧ ಐಪಿಸಿಯ ಸೆಕ್ಷನ್ 366 (ಎ), 376(1) ಮತ್ತು ಪೋಕ್ಸೊ ಕಾಯ್ದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ ಕಾಯ್ದೆಯ 9ರ ಅಡಿಯಲ್ಲಿ ಹೊರಿಸಲಾದ ಆರೋಪ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ ಅವರ ಏಕಸದಸ್ಯಪೀಠ ಪುರಸ್ಕರಿಸಿದೆ.

ನ್ಯಾಯಾಲಯದ ಆದೇಶವೇನು?: ಹುಡುಗಿಯ ಪಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದು, ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿದೆ ಹಾಗೂ ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದರೆ ಕುಟುಂಬವೂ ಸಂಕಷ್ಟಕ್ಕೀಡಾಗುತ್ತದೆ. ಪತ್ನಿ ಹಾಗೂ ಮಗುವೂ ದುಃಖಮಯ ಬದುಕು ಸಾಗಿಸಬೇಕಾಗುತ್ತದೆ. ಅವುಗಳೆಲ್ಲವನ್ನು ಗಣನೆಗೆ ಪಡೆದುಕೊಂಡ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.
ಅಪ್ರಾಪ್ತ ವಯಸ್ಕರೊಂದಿಗೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಾಗಿದ್ದರೂ, ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ ದೋಷಾರೋಪಣೆಯ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗುತ್ತಿದೆ. ಇಲ್ಲದಿದ್ದರೆ, ಬಾಲಕಿ ಮತ್ತು ಮಗುವೂ ನ್ಯಾಯವೈಲ್ಯತೆಯನ್ನು ಎದುರಿಸಬೇಕಾಗುಬಹುದು ಎಂದು ನ್ಯಾಯಪೀಠ ಹೇಳಿತು.
ಕಾನೂನಿನ ಅರಿವಿಕೆಯಿಲ್ಲದೆ ಅರ್ಜಿದಾರ ಹಾಗೂ ಮಗಳ ಮದುವೆ ಅನೀರಿಕ್ಷಿತವಾಗಿ ನಡೆದಿದೆ. ಬಳಿಕ ಮಗಳು ಗಂಡುಮಗುವಿಗೆ ಜನ್ಮ ನೀಡಿರುತ್ತಾಳೆ. ವಿವಾಹಕ್ಕೆ ಕಾನೂನು ಬದ್ಧ ವಯಸ್ಸು ತಲುಪಿದ ಕೂಡಲೇ ದಂಪತಿಗಳು ಕಾನೂನಿನ ಅಡಿಯಲ್ಲಿ ವಿವಾಹವನ್ನು ನೋಂದಾಯಿಸಿಕೊಳ್ಳುತ್ತಾರೆ ಎಂದು ನ್ಯಾಯಪೀಠದ ಮುಂದೆ ಅಪ್ರಾಪ್ತ ಬಾಲಕಿ ಹಾಗೂ ತಾಯಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿದ್ದನ್ನು ಪೀಠ ಪರಿಗಣಿಸಿದೆ.
ಅಷ್ಟೇ ಅಲ್ಲದೆ, ಪೋಕ್ಸೋ ಕಾಯ್ದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು. ಪರಿಣಾಮ ಅರಿಯದೆ ಪರಸ್ಪರ ಒಮ್ಮತದಿಂದ ಇಬ್ಬರು ಹರಿಹರೆಯದವರು ಲೈಂಗಿಕ ಸಂಭೋಗ ಹೊಂದುವುದು ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮುಂದುವರಿದು, ಯುವಕ ಹಾಗೂ ಬಾಲಕಿಯೂ ಸಮಾಜದ ಆರ್ಥಿಕ ಹಿಂದುಳಿದ ವರ್ಗದಿಂದ ಬಂದವರು, ಹಾಗಾಗಿ ಪ್ರಕರಣ ಸಂಬಂಧ ಪರಿಣಾಮಗಳ ಕುರಿತು ಮಾಹಿತಿಯಿಂದ ವಂಚಿತರಾಗಿದ್ದಾರೆ ಎಂದು ಅರ್ಜಿದಾರರ ಮನವಿಗೆ ಅನುಮತಿ ನೀಡಿ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಆಂಧ್ರ ಮೂಲದ 20 ವರ್ಷದ ಯುವಕ 16 ಹರೆಯದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅಪ್ರಾಪ್ತೆಯನ್ನು ವರಸಿದ್ದಕ್ಕಾಗಿ ಯುವಕನ ವಿರುದ್ಧ ಐಪಿಸಿಯ ಸೆಕ್ಷನ್ 366 (ಎ), 376(1) ಮತ್ತು ಪೋಕ್ಸೋ ಕಾಯ್ದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ ಕಾಯ್ದೆಯ 9 ರ ಅಡಿಯಲ್ಲಿ ಆರೋಪ ದಾಖಲಾಗುತ್ತದೆ. ಆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಯುವಕ ಹೈಕೋರ್ಟ್ ಮೊರೆ ಹೋಗಿದ್ದ.












Click it and Unblock the Notifications