Karnataka Rains: ಚಂಡಮಾರುತ: ಕರ್ನಾಟಕದಲ್ಲಿ ಡಿಸೆಂಬರ್ 27ರ ವರೆಗೆ ಭರ್ಜರಿ ಮಳೆ!
ಚಂಡಮಾರುತದ ಪ್ರಭಾವದಿಂದ ರಾಜ್ಯದ ವಿವಿಧ ಭಾಗದಲ್ಲಿ ಡಿಸೆಂಬರ್ 27ರ ವರೆಗೂ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ರಾಜ್ಯದ ವಿವಿಧ ಭಾಗದಲ್ಲಿ ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮುನ್ಸೂಚನೆ ಹೇಳಿದೆ. ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಯಾವ ದಿನ ಮಳೆಯಾಗಲಿದೆ. ಕರ್ನಾಟಕದಲ್ಲಿ ಹವಾಮಾನ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಡಿಸೆಂಬರ್ 22ಕ್ಕೆ ಚಂಡಮಾರುತ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1ಕಿ.ಮೀ ವರೆಗೆ ವಿಸ್ತರಿಸಲಿದೆ. ಇದು ಪಶ್ಚಿಮ ನೈರುತ್ಯಕ್ಕೆ ಚಲಿಸಿ ಸಮೀಪದ ನೈರುತ್ಯ ಬಂಗಾಳಕೊಲ್ಲಿಯನ್ನು ತಲುಪುವ ಸಾಧ್ಯತೆ ಇದೆ. ಹೀಗಾಗಿ, ಉತ್ತರ ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲೂ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಡಿಸೆಂಬರ್ 22 ಹಾಗೂ 23ಕ್ಕೆ ವಿವಿಧ ಭಾಗದಲ್ಲಿ ಮಳೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಒಂದುವಾರಗಳ ಕಾಲ ಅವಧಿಯಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಭಾನುವಾರ ಹಾಗೂ ಸೋಮವಾರ ರಾಯಚೂರು, ಯಾದಗಿರಿ, ಚಾಮರಾಜನಗರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. ಕರ್ನಾಟಕದ ಒಳನಾಡಿನ ಉಳಿದ ಜಿಲ್ಲೆಗಳು ಮತ್ತು ಕರಾವಳಿ ಕರ್ನಾಟಕದಾದ್ಯಂತ ಒಣ ಹವಾಮಾನ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ.
ಡಿಸೆಂಬರ್ 24: ಡಿಸೆಂಬರ್ 24ಕ್ಕೆ ಕರ್ನಾಟಕದಲ್ಲಿ ಮಳೆ ತುಸು ಬಿಡುವ ಕೊಡಲಿದೆ. ಅಂದು ರಾಜ್ಯದಾದ್ಯಂತ ಒಣಹವೆ ಇರಲಿದೆ. ಬೆಳಗ್ಗೆಯ ಸಮಯದಲ್ಲಿ ಚಳಿಯ ವಾತಾವರಣ ಇರಲಿದೆ ಎಂದು ಹೇಳಲಾಗಿದೆ.
ಡಿಸೆಂಬರ್ 25: ಡಿಸೆಂಬರ್ 25ಕ್ಕೆ ಅಂದರೆ ಬುಧವಾರ ಕರ್ನಾಟಕದ ವಿವಿಧ ಭಾಗದಲ್ಲಿ ಭರ್ಜರಿ ಹಾಗೂ ಧಾರಾಕಾರ ಮಳೆಯಾಗಲಿದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ. ಇನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಡಿಸೆಂಬರ್ 26: ಗುರುವಾರದಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ. ಉಳಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಒಣಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಡಿಸೆಂಬರ್ 27: ಡಿಸೆಂಬರ್ 27ರಂದು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಲಿದೆ. ಅದೇ ರೀತಿ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಭಾಗದಲ್ಲಿ ಧಾರಾಕಾರ ಮಳೆಯಾಗಲಿದೆ. ಕರ್ನಾಟಕದ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಇನ್ನು ಕರ್ನಾಟಕದ ಒಳನಾಡಿನಲ್ಲಿ ಮುಂದಿನ 3 ದಿನಗಳವರೆಗೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4°C ಗಿಂತ ಹೆಚ್ಚಾಗಲಿದೆ.












Click it and Unblock the Notifications