ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಧಾರಾಕಾರ ಮಳೆ
Recommended Video

ಬೆಂಗಳೂರು, ಮಾರ್ಚ್ 15: ಬಿಸಿಲಿನ ಝಳಕ್ಕೆ ಬಳಲಿ ಬೆಂಡಾಗಿದ್ದ ಬೆಂಗಳೂರು ನಗರವಾಸಿಗಳು ಮತ್ತು ರಾಜ್ಯದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರ, ಕರ್ನಾಟಕದ ಕರಾವಳಿ ತೀರ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಂಗಳವಾರದಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ನಗರವಾಸಿಗಳು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಇದೀಗ ಎರಡು ದಿನ ತಡವಾಗಿ ಅಂದರೆ ಇಂದು ಸಂಜೆ ನಗರದ ಹಲವು ಭಾಗಗಳಲ್ಲಿ ಸಾಧಾರಣದಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಬಂಗಾಳ ಕೊಲ್ಲಿಯ ತಮಿಳುನಾಡು ಮತ್ತು ಶ್ರೀಲಂಕಾ ಮಧ್ಯೆ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರಾವಳಿ ಸೇರಿದಂತೆ ರಾಜ್ಯದ ಅನೇಕ ಕಡೆ ಗುಡುಗು - ಮಿಂಚಿನಿಂದ ಕೂಡಿದ ಮಳೆಯಾಗುತ್ತಿದೆ. ಕರಾವಳಿ ಕರ್ನಾಟಕ ಮತ್ತು ಒಳನಾಡು ಕರ್ನಾಟಕದಾದ್ಯಂತ ಬುಧವಾರ ಸುರಿದ ಮಳೆ ಗುರುವಾರವೂ ಮುಂದುವರಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ, ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.
ಶಿವಾನಂದ ಸರ್ಕಲ್, ವಿಧಾನಸೌಧ ಸುತ್ತಮುತ್ತ, ಶ್ರೀರಾಂಪುರ, ಜಯನಗರ, ಬಿಟಿಎಂ ಲೇಔಟ್, ಮೆಜೆಸ್ಟಿಕ್, ಅಶೋಕನಗರ, ಮಲ್ಲೇಶ್ವರಂ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ.

24 ಗಂಟೆಗಳ ಹವಾಮಾನ ವರದಿ
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಸಾಧಾರಣದಿಂದ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ನೀಡುವ 'ಸ್ಕೈಮೆಟ್ ವೆದರ್' ವರದಿ ಮಾಡಿದೆ.

ಕರ್ನಾಟಕದಾದ್ಯಂತ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.












Click it and Unblock the Notifications