Honeytrap: ಸ್ವಪಕ್ಷದವರಿಗೇ ಗುನ್ನ, ಇದೂ ಒಂದು ಬದುಕೇ: ಹೆಚ್‌ಡಿಕೆ ಟಾಂಗ್ ಕೊಟ್ಟಿದ್ಯಾರಿಗೆ?
ಸಚಿವರಿಗೆ ಹನಿಟ್ರ್ಯಾಪ್ ಖೆಡ್ಡಾ ತೋರಿರುವ ವಿಚಾರವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ಮತ್ತೊಂದೆಡೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಮೇಲೆ ಕೇಳಿಬಂದಿರುವ ಭೂ ಒತ್ತುವರಿ ಆರೋಪದ ವಿಚಾರ ಕೂಡ ಕಾಂಗ್ರೆಸ್‌ಗೆ ಅಸ್ತ್ರವಾಗಿದೆ. ಇದೀಗ ಹನಿಟ್ರ್ಯಾಪ್ ವಿಚಾರವು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದೇ ವಿಚಾರವಾಗಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ..! ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಅಹೋರಾತ್ರಿಯೂ ದ್ರೋಹ ಚಿಂತನೆ, ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ, ಇದೂ ಒಂದು ಬದುಕೇ..? ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವ ವಿಷಸರ್ಪ ನನ್ನಡೆಗೆ ನಾಲಿಗೆ ಚಾಚಿದೆ. ಇಂಥಹ ಕ್ರಿಮಿನಲ್‌ವೊಬ್ಬ ಕೆಟ್ಟ ಅಲೋಚನೆಗಳಲ್ಲಿ ದಿನಪೂರ್ತಿ ಮುಳುಗಿರುವುದು ಸಹಜ. ಕ್ರಿಮಿನಲ್‌ನ ಚಾಳಿಯೇ ಧಮ್ಕಿ ಹಾಕುವುದು, ವಿಷಕ್ರಿಮಿಯ ಕೆಲಸ ಎಲ್ಲರನ್ನೂ ಕಚ್ಚುವುದು, ಇದರಲ್ಲಿ ನನಗೇನೂ ಅಚ್ಚರಿ ಇಲ್ಲ ಎಂದು ಹರಿಹಾಯ್ದಿದ್ದಾರೆ.
ನಾನು ಭೂ ಒತ್ತುವರಿ ಮಾಡಿದ್ದೇನೋ ಇಲ್ಲವೋ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನವಾಗುತ್ತದೆ. ಈಗ ನನ್ನ ಮರ್ಯಾದೆ ವಿಷಯ ಹಾಗಿರಲಿ, ಇವತ್ತು ಸ್ವಪಕ್ಷೀಯರೇ ಈ ಮರ್ಯಾದೆಗೇಡಿಯ ಮಾನವನ್ನು ವಿಧಾನಸೌಧದಲ್ಲಿಯೇ ಹರಾಜು ಹಾಕಿದ್ದಾರೆ. ಅದಕ್ಕೆ ಉತ್ತರವೇನು? ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಅವರು ಸವಾಲ್ ಹಾಕಿದ್ದಾರೆ.

ಆ ಶಕುನಿ ರಾಜಕಾರಣಿ ಕೈವಾಡ:
ಹನಿಟ್ರ್ಯಾಪ್ ವಿಚಾರವಾಗಿ ಜೆಡಿಎಸ್ ಕೂಡ ಕಾಂಗ್ರೆಸ್‌ಗೆ ಟಾಂಗ್ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಿಡಿಯಲು ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ರಾಜಕಾರಣ ಶುರುವಾಗಿದೆ. ಹನಿ ಟ್ರ್ಯಾಪ್, ಬ್ಲಾಕ್ ಮೇಲ್ ನೀಚ ರಾಜಕಾರಣ ಮಾಡುತ್ತಿರುವ ಆ ದುರುಳರು ಯಾರು? ಎಂದು ಪ್ರಶ್ನಿಸಿದೆ.
2 ಬಾರಿ ಸಚಿವರ ಮೇಲೆ ಹನಿಟ್ರ್ಯಾಪ್‌ಗೆ ಯತ್ನಿಸಿರುವ ಪ್ರಕರಣದ ಹಿಂದಿರುವ ಆ ಮಾಸ್ಟರ್ ಮೈಂಡ್ ಯಾರು? ಅವರ ಉದ್ದೇಶ ಏನು? ಸಿ.ಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಾ, ಅಧಿಕಾರಕ್ಕೆ ಏರಲು ಹಪಹಪಿಸುತ್ತಿರುವ ಆ ಶಕುನಿ ರಾಜಕಾರಣಿಯ ಕೈವಾಡ ಇದೆಯೇ? ಪರೋಕ್ಷವಾಗಿ ಕಾಂಗ್ರೆಸ್ ನಾಯಕನ ಕಡೆಗೆ ಬೊಟ್ಟು ಮಾಡಿದೆ.
ಹನಿಟ್ರ್ಯಾಪ್ ಖೆಡ್ಡಗೆ ಕೆಡವಿ ಚಾರಿತ್ರ್ಯಹರಣ ಮಾಡಿ, ಆ ಮಂತ್ರಿಯ ವಿಕೆಟ್ ಪಡೆದರೆ ಯಾವ ಬಣ ಮೇಲುಗೈ ಸಾಧಿಸುತ್ತದೆಯೋ? ಮಂತ್ರಿಗಳ ವಿಕೆಟ್ ಪಡೆಯಲು ಮುಂದಾಗಿರುವವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೋ? ಮುಖಂಡನೋ? ಸಚಿವನೋ? ಶಾಸಕನೋ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಇತ್ತೀಚೆಗೆ ರಾಜ್ಯದಲ್ಲಿ ಸಚಿವರೊಬ್ಬರ ಮೇಲೆ ರಾಜಕಾರಣಿಯಿಂದಲೇ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಗುರುವಾರ ಸದನದಲ್ಲೂ ಜೋರಾಗಿ ಸದ್ದು ಮಾಡಿತು. ಕಾಂಗ್ರೆಸ್ ಸಚಿವ ಕೆಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ನಡೆದಿತ್ತು ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದಲ್ಲದೆ, ಇನ್ನೂ 48 ಮಂದಿಯ ಪೆನ್‌ಡ್ರೈವ್ ಇದೆ ಎನ್ನುವ ಮೂಲಕ ಹೊಸ ಬಾಂಬ್ ಕೂಡ ಸಿಡಿಸಿದ್ದಾರೆ.












Click it and Unblock the Notifications