HD Deve Gowda: ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ಹೆಚ್ ಡಿ ದೇವೇಗೌಡ
ಬೆಂಗಳೂರು, ಫೆಬ್ರವರಿ 16: ಬಿಜೆಪಿ- ಜೆಡಿಎಸ್ ಸಂಸದರು ರಾಜ್ಯದ ಪರವಾಗಿ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಗುಡುಗಿದ್ದಾರೆ. ರಾಜ್ಯಕ್ಕೆ 25 ಟಿಎಂಸಿ ನೀರು ಕೊಡಬೇಕು. ಇದು ನಮ್ಮ ಡಿಮ್ಯಾಂಡ್. ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ 25 ಟಿಎಂಸಿ ನೀರು ಕರ್ನಾಟಕಕ್ಕೆ ಹಂಚಿಕೆ ಆಗಬೇಕು. ಇದು ದೊಡ್ಡ ಗುರಿ. ರಾಜಕೀಯದ ಅಗತ್ಯ ಇಲ್ಲ. ನಮ್ಮ ನಮ್ಮ ನಡುವೆಯೇ ಭಿನ್ನಾಭಿಪ್ರಾಯ ಬೇಡ. ಒಟ್ಟಾಗಿ ರಾಜ್ಯಕ್ಕಾಗಿ ಹೊರಾಟ ಮಾಡೋಣ ಎಂದು ದೇವೇಗೌಡ್ರು ಹೇಳಿದರು.
ಕಾಂಗ್ರೆಸ್ ನವರು ಅನೇಕ ನೀರಾವರಿ ಯೋಜನೆಗಳನ್ನು ಮಾಡಿದರು. ಆದರೆ, ಅನುಷ್ಠಾನಕ್ಕೆ ಹಣ ಇಡಲಿಲ್ಲ. ಅದರ ಬಗ್ಗೆ ನಾನು ಯಾಕೆ ಚರ್ಚೆ ಮಾಡಲಿ? ನಾನೇನು ಮಾಡಿದ್ದೇನೆ ಎಂಬುದಕ್ಕೆ ದಾಖಲೆ ಇದೆ. ಕಾವೇರಿ ನೀರು ಸದ್ವಿನಿಯೋಗ ಮಾಡಿಕೊಳ್ಳಲು ನಾನೇನು ಮಾಡಿದ್ದೇನೆ ಎನ್ನುವುದಕ್ಕೆ ದೊಡ್ಡ ಇತಿಹಾಸ ಇದೆ. ಸದನದಲ್ಲಿ ನಾನು ಏನೆಲ್ಲಾ ಹೋರಾಟ ನಡೆಸಿದ್ದೇನೆ ಎನ್ನುವುದಕ್ಕೆ ದಾಖಲೆ ಇದೆ. ಪರಿಶೀಲನೆ ಮಾಡಬಹುದು. ಭದ್ರಾ ಮೇಲ್ದಂಡೆಗೆ ಅನುಮತಿ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಮಹದಾಯಿ ಬಗ್ಗೆ ಕೂಡ ನಾನು ಹೋರಾಟ ನಡೆಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹೇಳಿದರು.

ತಮಿಳುನಾಡಿಗೆ ನೀರಿನ ಸಮಸ್ಯೆ ಇಲ್ಲ. ಯಥೇಚ್ಚವಾಗಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಈ ಬಗ್ಗೆ ಸಂಸತ್ ನಲ್ಲಿ ಮಾತಾಡೋವಾಗ ತಮಿಳುನಾಡಿನವರು ವಿರೋಧ ಮಾಡಲಿಲ್ಲ. ನೀರು ಪಡೆಯಲು ನಾವು ಪಕ್ಷಬೇಧ ಮರೆತು ಒಟ್ಟಾಗಿ ಹೋರಾಟ ಮಾಡುತ್ತೇವೆ. ನನಗೆ ಆ ವಿಶ್ವಾಸ ಇದೆ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಗೋದಾವರಿ-ಕಾವೇರಿ ಬಗ್ಗೆ ಸಂಸತ್ ನಲ್ಲಿ ನಾನು ಮಾತಾಡಿದ್ದೇನೆ. ತಮಿಳುನಾಡಿನ ಎಲ್ಲಾ ರಾಜ್ಯಸಭೆ ಸದಸ್ಯರು ಒಕ್ಕೊರಳಿನಿಂದ ಗೋದಾವರಿ, ಕಾವೇರಿ ಅಂತ ಕೂಗಿದರು. ಇದರಲ್ಲಿ ಕರ್ನಾಟಕದ ಹೋರಾಟ ಮೊದಲಿನಿಂದಲೂ ಇದೆ. ನಾನು ನೀರಾವರಿ ಮಂತ್ರಿ ಆಗಿದ್ದಾಗಿನಿಂದ ಹೋರಾಟ ನಡೆಯುತ್ತಲೇ ಇದೆ. ಕಾವೇರಿ ನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಇದನ್ನು ಮೋದಿ ಅವರ ಗಮನಕ್ಕೆ ತಂದಿದ್ದೇನೆ. ನಮ್ಮ ರಾಜ್ಯದ ಒಬ್ಬರು ಪುಣ್ಯಾತ್ಮರು ನೀರು ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರು ನೀರು ಕೊಟ್ಟರೆ ಸಂತೋಷ. ಚಿತ್ರದುರ್ಗ, ತುಮಕೂರು ಸೇರಿದಂತೆ ನೀರೇ ಕಾಣದ ಪ್ರದೇಶಗಳಿಗೆ ನೀರು ಹೋಗಬೇಕು. ಎಲ್ಲಿಂದಾದರೂ ನೀರು ಕೊಡಲಿ ಎಂದು ದೇವೇಗೌಡ ಅವರು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಸಿಕ್ಕಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಮೊದಲು ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಅನೇಕ ನೀರಾವರಿ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ, ಹಣ ಕೊಡಲು ಸಾಧ್ಯವಾಗಿಲ್ಲ. ಅವರು ಮೊದಲು ಆ ಕೆಲಸ ಮಾಡಲಿ ಎಂದು ಎಂದು ತಿರುಗೇಟು ನೀಡಿದರು.
ಜೆಡಿಎಸ್ ಪಕ್ಷದಿಂದ ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಪಕ್ಷದ ರಾಷ್ಟ್ರಾಧ್ಯಕ್ಷರೂ ಆಗಿರುವ ದೇವೇಗೌಡರು ಹೇಳಿದರು. ಪಕ್ಷ ಸಂಘಟನೆ ಹಾಗೂ ಜನಪರ ವಿಷಯಗಳನ್ನು ಇಟ್ಟುಕೊಂಡು ಸಮಾವೇಶ ನಡೆಸಬೇಕು ಎನ್ನುವುದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಉದ್ದೇಶ. ಅದಕ್ಕಾಗಿ ಮಾರ್ಚ್ 6ರಂದು ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದೇವೆ. ಅಂದು ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು ಸೇರಿದಂತೆ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.












Click it and Unblock the Notifications