ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಪತ್ನಿ ರಿಚಾಗೆ ಕ್ಲೀನ್ ಚಿಟ್
ಬೆಂಗಳೂರು, ಜೂನ್ 06: ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಪತ್ನಿ ರಿಚಾ ಸಕ್ಸೇನಾಗೆ ಬಹುತೇಕ ಕ್ಲೀನ್ ಚಿಟ್ ಸಿಕ್ಕಿದೆ. ರಿಚಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಜಾರಿಗೊಳಿಸಿದ್ದ ಸಮನ್ಸ್ ಅನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯವು 2023ರ ಫೆಬ್ರವರಿ 2ರಂದು ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸುವಂತೆ ಕೋರಿ ರಿಚಾ ಸಕ್ಸೇನಾ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ರಿಚಾ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಅಧೀನ ನ್ಯಾಯಾಲಯವು ತನಿಖಾಧಿಕಾರಿಗಳು ಸಲ್ಲಿಸಿದ ಬಿ-ರಿಪೋರ್ಟ್ ಒಪ್ಪಿಕೊಂಡು ಅರ್ಜಿದಾರರ ವಿರುದ್ಧದ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದೆ. ಅಂದರೆ ಆರೋಪಗಳಿಂದ ಅರ್ಜಿದಾರರು ಖುಲಾಸೆಯಾದಂತಾಗಿದೆ. ಆದರೂ ಅದೇ ಪ್ರಕರಣ ಸಂಬಂಧ ಇಡಿ ಮತ್ತೆ ಸಮನ್ಸ್ ಜಾರಿಗೊಳಿಸಿರುವುದು ನ್ಯಾಯಸಮ್ಮತವಾಗಿಲ್ಲ ಎಂದು ತಿಳಿಸಿ, ರಿಚಾ ಅವರ ವಿರುದ್ಧದ ಸಮನ್ಸ್ ರದ್ದುಪಡಿಸಿದೆ.
ಏನಿದು ಪ್ರಕರಣ?; ಹುಬ್ಬಳ್ಳಿಯಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಇಬ್ಬರು ಬುಕ್ಕಿಗಳು ನೀಡಿದ್ದ ಮಾಹಿತಿ ಆಧರಿಸಿ ಹುಬ್ಬಳ್ಳಿ ಹಳೆ ಠಾಣೆಯ ಪೊಲೀಸರು 2015ರಲ್ಲಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದರೋಡೆ, ಅಪರಾಧಿಕ ಒಳಸಂಚು, ಸಾಕ್ಷ್ಯನಾಶ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ರಿಚಾ ಸಕ್ಸೇನಾ ಅವರನ್ನು ಆರೋಪಿಯನ್ನಾಗಿಸಲಾಗಿತ್ತು.

ಪ್ರಕರಣ ಸಂಬಂಧ ಐಟಿ ಮತ್ತು ಸಿಐಡಿ ಪೊಲೀಸರು ಜಂಟಿಯಾಗಿ ರಿಚಾ ಸಕ್ಸೇನಾ ಅವರ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದ್ದರು. ಈ ವೇಳೆ 4.2 ಕೋಟಿ ರೂ. ಹಣ, 2.5 ಕೆಜಿ ಬಂಗಾರ ಮತ್ತು ವಜ್ರದ ಆಭರಣಗಳು ದೊರೆತಿದ್ದವು. ಇದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ್ದ ಅಧೀನ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು.
2021ರ ಏಪ್ರಿಲ್ 20ರಂದು ನ್ಯಾಯಾಲಯವು ಬಿ-ರಿಪೋರ್ಟ್ ಒಪ್ಪಿಕೊಂಡು ರಿಚಾ ಸಕ್ಸೇನಾ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಇದಾದ ಬಳಿಕ ರಿಚಾ ಸಕ್ಸೇನಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ರಿಚಾ ಸಕ್ಸೇನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications