Biryani: ನಾನ್ ವೆಜ್ ಪ್ರಿಯರೇ ಎಂದಾದರೂ ಚೌಚೌ ಬಿರಿಯಾನಿ ತಿಂದಿದ್ದೀರಾ? ಎಲ್ಲಿ ಸಿಗುತ್ತೆ? ಎಷ್ಟು ದರ?
ಬಿರಿಯಾನಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ನಾನ್ ವೆಜ್ ಪ್ರಿಯರ ಪ್ರಥಮ ಆಯ್ಕೆಯಾಗಿರುವ ಬಿರಿಯಾನಿ ತಿನ್ನುವವರಿಗೆ ಆತ್ಮ ತೃಪ್ತಿ ನೀಡಿದರೆ, ಮಾಡಿ ಬಿಡಿಸುವವರ ಕೈ ಹಿಡಿದಿದೆ. ಇಂದು ಅದೆಷ್ಟೋ ಹೋಟೆಲ್‌ಗಳು ಕೇವಲ ಬಿರಿಯಾನಿಯಿಂದ ಜನಪ್ರಿಯತೆ ಪಡೆದಿದ್ದು, ಮಾಲೀಕರ ಜೀವನಾಧಾರವಾಗಿದೆ.
ದೇಶದಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲಿ ಅಂತ್ಯಂತ ಹೆಚ್ಚು ಜನರು ಇಷ್ಟಪಡುವ ಹಾಗೂ ಅಂತ್ಯಂತ ಹೆಚ್ಚು ಮಾರಾಟವಾಗುವ ಖಾದ್ಯವೆಂದರೆ ಅದು ಬಿರಿಯಾನಿ. ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾದ ಬಿರಿಯಾನಿ ಸಿಗುವ ಅನೇಕ ಸ್ಥಳಗಳಿವೆ. ಹಾಗೂ ಬೆಂಗಳೂರು ಸುತ್ತಲೂ, ಬೆಂಗಳೂರಿಗೆ ತೆರಳುವ ಮಾರ್ಗದಲ್ಲೂ ಅತ್ಯಂತ ರುಚಿಕವಾದ ಬಿರಿಯಾನಿ ಸಿಗುವ ಸ್ಥಳಗಳಿವೆ. ಈ ಸ್ಥಳಗಳ ಪೈಕಿ ಒಂದು ಜನಪ್ರಿಯ ಹೋಟೆಲ್‌ನ ಪರಿಚಯ ಇಲ್ಲಿದೆ.

ನೀವು ಸಾಮಾನ್ಯವಾಗಿ ಹೈದರಬಾದ್ ಬಿರಿಯಾನಿ, ಧಮ್ ಬಿರಿಯಾನಿ, ದೊಣ್ಣೆ ಬಿರಿಯಾನಿ, ಬ್ಯಾಂಬೂ ಬಿರಿಯಾನಿ, ನಾಟಿ ಶೈಲ್ ಬಿರಿಯಾನಿ, ಅಂಬೂರ್ ಬಿರಿಯಾನಿ, ಮಲಬಾರ್ ಬಿರಿಯಾನಿ ಹೆಸರು ಕೇಳಿರುತ್ತೀರಾ, ಎಂದಾದರೂ ಚೌಚೌ ಬಿರಿಯಾನಿ ಹೆಸರು ಕೇಳಿದ್ದೀರಾ..? ಚೌಚೌ ಬಿರಿಯಾನಿ ತಿಂದಿದ್ದೀರಾ..? ಹೆಸರೇ ಇಷ್ಟೊಂದು ಡಿಫರೆಂಟ್ ಆಗಿದ್ದರೇ ರುಚಿ ಹೇಗಿರಬಹುದು ನೀವೇ ಊಹಿಸಿ.
ಬೆಂಗಳೂರಿನಲ್ಲೂ ಸಿಗದಿದ್ದರೂ, ಬೆಂಗಳೂರು ಸಮೀಪದಲ್ಲೇ ಈ ಚೌಚೌ ಬಿರಿಯಾನಿ ಸಿಗುತ್ತದೆ. ಹಾಗಾದರೆ ಈ ಚೌಚೌ ಬಿರಿಯಾನಿ ಸಿಗುವ ಸ್ಥಳ ಯಾವುದು? ಚೌಚೌ ಬಿರಿಯಾನಿ ದರವೆಷ್ಟು? ಚೌಚೌ ಬಿರಿಯಾನಿ ತಿನ್ನಲು ಹೋಗುವ ಮಾರ್ಗವೇನು ಎನ್ನುವುದರ ಸವಿವರವಾದ ವಿವರ ಇಲ್ಲಿದೆ.

ಚನ್ನರಾಯಪಟ್ಟಣದ ಲೋಕೇಶ್ ಬಿರಿಯಾನಿ ಕಾರ್ನರ್ ಅಥವಾ ಲೋಕೇಶ್ ಧಮ್ ಬಿರಿಯಾನಿ ರಾಜ್ಯದ ಅತಿಹೆಚ್ಚು ಜನಪ್ರಿಯತೆ ಪಡೆದ ಬಿರಿಯಾನಿ ಹೋಟೆಲ್‌ಗಳಲ್ಲಿ ಒಂದು. ಇಲ್ಲಿನ ವಿಶೇಷವಾದ ಖಾದ್ಯವೇ ಚೌಚೌ ಬಿರಿಯಾನಿ. ರಾಜ್ಯದಲ್ಲಿ ರುಚಿಯಾದ ಚೌಚೌ ಬಿರಿಯಾನಿ ಸಿಗುವ ಏಕೈಕ ಹೋಟೆಲ್ ಎಂದರೆ ಲೋಕೇಶ್ ಧಮ್ ಬಿರಿಯಾನಿ.
1995ರಲ್ಲಿ ಆರಂಭವಾದ ಲೋಕೇಶ್ ಧಮ್ ಬಿರಿಯಾನಿ ಸತತ ಮೂವತ್ತು ವರ್ಷಗಳಿಂದ ಗ್ರಾಹಕರಿಗೆ ರುಚಿರುಚಿಯಾದ ಬಿರಿಯಾನಿ ಬಿಡಿಸುತ್ತಿದೆ. ಮಟನ್ ಬಿರಿಯಾನಿ, ಖುಷ್ಕ, ಮಟನ್ ಚಾಪ್ಸ್ ಹಾಗೂ ಚೌಚೌ ಬಿರಿಯಾನಿ ಇಲ್ಲಿ ಲಭ್ಯವಿರುತ್ತದೆ. ಪ್ರತಿದಿನ ಏಳು ಗಂಟೆಗೆ ಆರಂಭವಾದರೆ ಮಧ್ಯಾಹ್ನ ಹನ್ನೆರಡು ಗಂಟೆವರೆಗೆ ಬಿರಿಯಾನಿಗಳು ಇಲ್ಲಿ ಲಭ್ಯವಿರುತ್ತದೆ ಎನ್ನುವುದು ಮಾಲೀಕರ ಮಾತು. ಆದರೆ ಗ್ರಾಹಕರು ಹೇಳುವ ಪ್ರಕಾರ ಇಲ್ಲಿ ಬೆಳಗ್ಗೆ 9-10 ಗಂಟೆಯಷ್ಟರಲ್ಲಿ ಬಿರಿಯಾನಿ ಖಾಲಿ ಆಗುತ್ತದೆ. ಹೀಗಾಗಿ ನಾವು ಬೆಳ್ಳಂಬೆಳಗ್ಗೆ ಬಂದು ಕಾದು ಬಿರಿಯಾನಿ ತಿನ್ನುತ್ತೇವೆ ಎನ್ನುತ್ತಾರೆ ಗ್ರಾಹಕರು.

ಸ್ಥಳೀಯ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಈ ಹೋಟೆಲ್‌ನ ಮಾಲೀಕರು ಅತೀ ಕಡಿಮೆ ಬೆಲೆಗೆ ಊಟ ನೀಡುತ್ತಿದ್ದಾರೆ. 50 ರೂಪಾಯಿಗೆ ಖುಷ್ಕ ಹಾಗೂ ಒಂದು ಮೊಟ್ಟೆ ನೀಡಲಾಗುತ್ತದೆ. ಇನ್ನು ಮಟನ್ ಬಿರಿಯಾನಿ 220 ರೂಪಾಯಿ ಇಲ್ಲಿ ಲಭ್ಯವಿದ್ದು, ಇಬ್ಬರು ತಿನ್ನಬಹುದಾದಷ್ಟು ಬಿರಿಯಾನಿ ಅನ್ನ ನೀಡಲಾಗುತ್ತದೆ. ಇಲ್ಲಿ ಆಹಾರಗಳನ್ನು ಸೌದೆ ಒಲೆಯಲ್ಲಿ ತಯಾರಿಸಲಾಗುತ್ತದೆ.
ಚೌಚೌ ಬಿರಿಯಾನಿ ಎಂದರೆ ಮಟನ್ ಬಿರಿಯಾನಿಗೆ ಮಟನ್ ಪೀಸ್ ಜೊತೆಗೆ ಮಟನ್ ಚಾಪ್ಸ್ ಕೂಡ ಸೇರಿಸಿ ಬಡಿಸಲಾಗುತ್ತದೆ. ಇಲ್ಲಿ ಭಾನುವಾರ ವಿಶೇಷವರೆಂದರೆ ಮಟನ್ ಬಿರಿಯಾನಿಗೆ ಹಣ್ಣುಗಳನ್ನು ಸೇರಿಸಲಾಗುತ್ತದೆ. ಅನಾನಸ್, ಸೇಬು ಹಣ್ಣು, ಸ್ಟ್ರಾಬೆರಿ ಹಣ್ಣುಗಳನ್ನು ಸೇರಿಸಿ ಬಿರಿಯಾನಿ ತಯಾರಿಸಲಾಗುತ್ತದೆ.

ಲೋಕೇಶ್ ಧಮ್ ಬಿರಿಯಾನಿ ಬರುವ ಗ್ರಾಹಕರು ಈ ಹೋಟೆಲ್‌ನ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಡಿಮೆ ಬೆಲೆಗೆ ರುಚಿಕರವಾದ ಬಿರಿಯಾನಿ ನೀಡುವ ಈ ಹೋಟೆಲ್ ಪ್ರತಿನಿತ್ಯ ನೂರಾರು ಖಾಯಂ ಗ್ರಾಹಕರನ್ನು ಹೊಂದಿದೆ. ಇಲ್ಲಿನ ಬಿರಿಯಾನಿ ತಿಂದರೆ ಮನೆಯ ಊಟದಂತೆ ಭಾಸವಗುತ್ತದೆ. ಹಾಗೂ ಇಲ್ಲಿ ಕೃತಕ ಮಸಾಲೆ ಬಳಸದ ಕಾರಣ ಆರೋಗ್ಯದ ಮೇಲೂ ಯಾವುದೇ ಅಡ್ಡಪರಿಣಾಮ ಇಲ್ಲ ಎನ್ನುವುದು ಗ್ರಾಹಕರ ಮಾತಾಗಿದೆ. ಅಲ್ಲದೇ ಮಟನ್ ಅಲ್ಲಿ ಕೊಬ್ಬು ಅಥವಾ ಚರ್ಬಿ ಸಿಕ್ಕಿದ್ರೆ ಸೈಡಿಗಿಡೋರೇ ಜಾಸ್ತಿ. ಇಲ್ಲಿನ ಸ್ಪೆಷಾಲಿಟಿ ಏನೆಂದರೆ ಚರ್ಬಿ ಪೀಸ್. ಇಲ್ಲಿ ಆ ಪೀಸ್ಗೆ ತುಂಬಾ ಡಿಮ್ಯಾಂಡ್ ಇದೆ.
ಚೆನ್ನರಾಯಪಟ್ಟಣ ಲೋಕೇಶ್ ಧಮ್ ಬಿರಿಯಾನಿ ತಿನ್ನಲು ಕೇವಲ ಹಾಸನ ಹಾಗೂ ಬೆಂಗಳೂರಿನ ಜನರಷ್ಟೇ ಅಲ್ಲದೇ ರಾಜ್ಯದ ಮೂಲೆ ಮೂಲೆಯಿಂದಲೂ ಬರುತ್ತಾರೆ. ಜನರಿಂದಲೇ ಜನಪ್ರಿಯತೆ ಪಡೆದ ಈ ಬಿರಿಯಾನಿ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಗ್ರಾಹಕರನ್ನು ಉಪಚರಿಸುವ ರೀತಿಗೂ ಕೂಡ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಹಾಸನಕ್ಕೆ ತೆರಳುವವರು ಮಿಸ್ ಮಾಡದೇ ಒಮ್ಮೆ ಲೋಕೇಶ್ ಧಮ್ ಬಿರಿಯಾನಿಗೆ ಭೇಟಿ ನೀಡಿ ಚೌ ಚೌ ಬಿರಿಯಾನಿ ಸವಿಯಿರಿ. ಚನ್ನರಾಯಪಟ್ಟಣ ಹಳೆ ಬಸ್‌ನಿಲ್ದಾಣದ ಎದುರುಗಡೆ ಇರುವ ಭುವನೇಶ್ವರಿ ತರಕಾರಿ ಮಾರುಕಟ್ಟೆಯ ಬಳಿ ಲೋಕೇಶ್ ಧಮ್ ಬಿರಿಯಾನಿ ಹೋಟೆಲ್ ಇದೆ. ಇದು ಸಾಮಾನ್ಯವಾಗಿ ವಾರದ ಎಲ್ಲಾ ದಿನವೂ ತೆರೆದಿದ್ದು, ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ತೆರೆದಿರುತ್ತದೆ.












Click it and Unblock the Notifications