Gruha Lakshmi Scheme: ಗೃಹಲಕ್ಷ್ಮೀ ಯೋಜನೆ ಹಣ ಬಾಕಿ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ, ನೋಟಿಸ್ ಜಾರಿ
Gruha Lakshmi Guarantee Scheme: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯೂ ಸಹ ಪ್ರಮುಖವಾಗಿದೆ. ಕರ್ನಾಟಕ ಸರ್ಕಾರವು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ಕೊಡುತ್ತಿದೆ. ಆದರೆ ಈ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವ ವಿಚಾರದಲ್ಲಿ ವಿಳಂಬವಾಗುತ್ತಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಿಂಬಾಕಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಗೃಹಲಕ್ಷ್ಮೀ ಯೋಜನೆಯ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಿಂಬಾಕಿ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಇದೀಗ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ಬಸವೇಶ್ವರ ನಗರದ ಆರ್.ಗಂಗಾ ಮತ್ತು ನಂದಿನಿ ಲೇಔಟ್‌ನ ಜಿ.ಡಿ. ಪವಿತ್ರಾ ಎನ್ನುವವರು ಗೃಹ ಲಕ್ಷ್ಮೀ ಯೋಜನೆಯ ಹಿಂಬಾಕಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಡಾ.ಕೆ. ಮನ್ಮಧ ರಾವ್ ಅವರಿದ್ದ ರಜಾ ಕಾಲದ ಪೀಠದ ಮುಂದೆ ವಿಚಾರಣೆಗೆ ಬಂದಿತು.

ವಾದ ಆಲಿಸಿದ ನಂತರ ನ್ಯಾಯಾಲಯವು ಕರ್ನಾಟಕ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು
ಕರ್ನಾಟಕ ಸರ್ಕಾರವು 2023ರ ಮೇ 5ರಂದು ಗೃಹಲಕ್ಷ್ಮಿ ಯೋಜನೆ ಜಾರಿಗೆ ಅನುಮೋದನೆ ನೀಡಿತ್ತು. ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಯೋಜನೆ ಇದಾಗಿದೆ. ಈ ಯೋಜನೆಯನ್ನು 2023ರ ಜೂ.6ರಿಂದ ಜಾರಿ ಮಾಡಲಾಗಿದೆ. ಯೋಜನೆಯಡಿ 1,28,80,594 ಫಲಾನುಭವಿಗಳು ನೋಂದಣಿಯಾಗಿದ್ದರು. ಆದರೆ 2025ನೇ ಸಾಲಿನ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಮನೆಯ ಯಜಮಾನಿಯರಿಗೆ ಗೃಹ ಲಕ್ಷ್ಮೀ ಯೋಜನೆಯ 2,000 + 2,000 = 4,000 ರೂಪಾಯಿ ಸಂದಾಯವಾಗಿಲ್ಲ. ಈ ವಿಚಾರದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ಈ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಗೃಹಲಕ್ಷ್ಮೀ ಯೋಜನೆ ಎರಡು ತಿಂಗಳ ಹಣ ಬಾಕಿಗೆ ಕಾರಣವೇನು
2024ರ ಏಪ್ರಿಲ್‌ರಿಂದ 2025ರ ಜನವರಿ ವರೆಗೆ ಸರ್ಕಾರವೇ ಹಣ ಬಿಡುಗಡೆ ಮಾಡಿತ್ತು. ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬದಲಿಗೆ ತಾಲ್ಲೂಕು ಪಂಚಾಯಿತಿ ಮೂಲಕ ಹಣವನ್ನು ಫಲಾನುಭವಿಗಳಿಗೆ ಪಾವತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, 2025ರ ಫೆಬ್ರವರಿ ತಿಂಗಳ ಹಣ ಬಿಡುಗಡೆ ಮಾಡಿಲ್ಲ. ಮಾರ್ಚ್ ತಿಂಗಳ ಹಣವನ್ನು ಪಾವತಿ ಮಾಡಿಲ್ಲ ಎಂದು ವಿಚಾರಣೆ ವೇಳೆಗೆ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.
ಇನ್ನು ಹಣಕಾಸು ಇಲಾಖೆಯು ಪಾವತಿಸಿದ ಮೊತ್ತವನ್ನು ಹೊಸ ಹಣಕಾಸು ವರ್ಷಕ್ಕೆ ಮುಂದುವರಿಸಲು ವಿಫಲವಾದ ಕಾರಣ 2025ರಲ್ಲಿ ಸುಮಾರು 5,000 ಕೋಟಿ ರೂಪಾಯಿ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಈ ಯೋಜನೆಯಡಿ ಎರಡು ಕಂತು ಹಣ ಪಾವತಿ ಮಾಡಲಾಗುವುದು ಎಂದು ಸರ್ಕಾರವು ಸಹ ಹೇಳಿತ್ತು. ಆದರೆ ಇಲ್ಲಿಯ ವರೆಗೆ ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳು ಬಾಕಿ ಹಣವು ಇನ್ನೂ ಮಹಿಳೆಯರ ಖಾತೆಗೆದ ಜಮೆ ಆಗಿಲ್ಲ.














Click it and Unblock the Notifications