'ಗೃಹಜ್ಯೋತಿ' ಯೋಜನೆ; ಬಾಡಿಗೆದಾರರ ಗೊಂದಲಗಳು
ಬೆಂಗಳೂರು, ಜೂನ್ 07; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ 'ಗೃಹಜ್ಯೋತಿ' ಯೋಜನೆ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಆದರೆ ಯೋಜನೆಯ ಫಲಾನುಭವಿಗಳಾಗಲು ಹಾಕಿರುವ ಹಲವು ಷರತ್ತುಗಳು ಗೊಂದಲಕ್ಕೆ ಕಾರಣವಾಗಿವೆ. ಅದರಲ್ಲೂ ಬಾಡಿಗೆ ಮನೆಯಲ್ಲಿ ವಾಸಿಸುವವರು ಚಿಂತೆಗೀಡಾಗಿದ್ದಾರೆ.
ಕರ್ನಾಟಕ ಸರ್ಕಾರದ ಆದೇಶದಂತೆ 'ಗೃಹಜ್ಯೋತಿ' ಯೋಜನೆ ಜುಲೈ 2023ರ ತಿಂಗಳ ವಿದ್ಯುತ್ ಬಿಲ್ ಬಳಕೆಗೆ ಆಗಸ್ಟ್ 2023ರ ತಿಂಗಳು ನೀಡುವ ಬಿಲ್‌ಗೆ ಅನ್ವಯವಾಗಲಿದೆ. ಗೃಹ ಬಳಕೆ ವಿದ್ಯುತ್‌ಗೆ ಮಾತ್ರ ಈ ಯೋಜನೆ ಅನ್ವಯ. ಅಷ್ಟರೊಳಗೆ ಗ್ರಾಹಕರು ಬಾಕಿ ಇರುವ ಎಲ್ಲಾ ವಿದ್ಯುತ್ ಬಿಲ್ ಪಾವತಿಸಬೇಕು.

ಇಂಧನ ಸಚಿವ ಕೆ. ಜೆ. ಜಾರ್ಜ್ ಬೆಂಗಳೂರಿನ ಬೆಸ್ಕಾಂ ಮುಖ್ಯ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. 'ಗೃಹಜ್ಯೋತಿ' ಯೋಜನೆ ಗೊಂದಲ ಕುರಿತು ಸ್ಪಷ್ಟನೆಗಳನ್ನು ನೀಡುವ ನಿರೀಕ್ಷೆ ಇದೆ.
ಬಾಡಿಗೆದಾರರ ಗೊಂದಲಗಳು; ಯೋಜನೆಯ ಷರತ್ತುಗಳಲ್ಲಿ ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ (ಮೀಟರ್), ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು ಎಂದು ಹೇಳಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ಬಾಡಿಗೆದಾರರ ಹೆಸರಿನಲ್ಲಿ ಮೀಟರ್ ಇರುವುದಿಲ್ಲ. ಆಗ ಅವರು ಏನು ಮಾಡಬೇಕು ಎಂಬುದು ಪ್ರಶ್ನೆ.
ಗೃಹ ಜ್ಯೋತಿ ಯೋಜನೆಯ ಮತ್ತೊಂದು ಷರತ್ತಿನಲ್ಲಿ ಪ್ರತಿ ಫಲಾನುಭವಿಯು ತನ್ನ Customer ID/ Account ID ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡುವುದು ಎಂದು ಇದೆ. ನಗರದಲ್ಲಿ ವಾಸಿಸುವ ಬಾಡಿಗೆದಾರ ಆ ವಿಳಾಸದ ಆಧಾರ್ ಕಾರ್ಡ್ ಹೊಂದಿಲ್ಲ ಎಂದರೆ ಏನು ಮಾಡಬೇಕು? ಎಂದು ಕುಂದಾಪುರದಿಂದ ಆಗಮಿಸಿ ಹನುಮಂತನಗರದಲ್ಲಿ ಹೋಟೆಲ್ ನಡೆಸುವ ವಾಸುದೇವ ಪ್ರಶ್ನೆ ಮಾಡಿದ್ದಾರೆ.

ಬಾಡಿಗೆದಾರರು 12 ತಿಂಗಳ ಕರಾರು ಪತ್ರವನ್ನು ಸೇವಾಸಿಂಧು ಪೋರ್ಟ್‌ಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸರ್ಕಾರ ಹೇಳಿದೆ. ಮನೆಗೆ ಬಾಡಿಗೆಗೆ ಬಂದು ಎರಡು ತಿಂಗಳು ಕಳೆದಿಲ್ಲ ಎಂದರೆ ಅವರು ಏನು ಮಾಡಬೇಕು? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಎರಡು ಮೀಟರ್ ಹೊಂದಿದ್ದರೆ ಯಾವುದಾದರೂ ಒಂದಕ್ಕೆ ಮಾತ್ರ ಗೃಹ ಜ್ಯೋತಿ ಯೋಜನೆ ಅನ್ವಯ ಎಂದು ಸರ್ಕಾರ ಹೇಳಿದೆ. ನಗರಗಳಲ್ಲಿ ಮೂರು ಮನೆಗೆ ಪ್ರತ್ಯೇಕ ಮೀಟರ್ ಇರುತ್ತದೆ. ಅದು ಮಾಲೀಕರ ಹೆಸರಿನಲ್ಲಿ ಇರುತ್ತದೆ. ಯೋಜನೆಯ ಲಾಭ ಮನೆ ಮಾಲೀಕರಿಗೆ ಮಾತ್ರ ಸಿಗುತ್ತದೆಯೇ?, ಬಾಡಿಗೆದಾರರು ಏನು ಮಾಡಬೇಕು.
12 ತಿಂಗಳ ಸರಾಸರಿ ವಿದ್ಯುತ್ ಬಳಕೆ ನೋಡುತ್ತೇವೆ ಎಂದು ಸರ್ಕಾರ ಹೇಳಿದೆ. ಹೊಸದಾಗಿ ಮನೆ ಕಟ್ಟಿದವರು ಅಥವ ಹೊಸದಾಗಿ ಬಾಡಿಗೆ ಮನೆಗೆ ಹೋದವರು ಏನು ಮಾಡಬೇಕು. ಹಿಂದಿನ ಮನೆಯ ಬಿಲ್ ಕೊಡಲು ಆಗುವುದಿಲ್ಲ, ಹೊಸ ಮನೆ ಸರಾಸರಿ ಹೇಗೆ ಪಡೆಯುತ್ತಾರೆ?.
ಬೆಂಗಳೂರಿನಂತಹ ನಗರದಲ್ಲಿ ಯಾವ ತಿಂಗಳಿನಲ್ಲಾದರೂ ಮನೆ ಬದಲಾವಣೆ ಆಗುತ್ತಲೇ ಇರುತ್ತದೆ. ಆದ್ದರಿಂದ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಲು ಕಾಲಾವಧಿ ನಿಗದಿ ಮಾಡಿದರೆ ಕಷ್ಟವಾಗುತ್ತದೆ ಎಂಬುದು ಬಾಡಿಗೆದಾರರ ಮನವಿಯಾಗಿದೆ.
ಪೂರ್ಣ ಬಿಲ್ ಪಾವತಿ;ಯೋಜನೆಯ ಆದೇಶ ಹೊರಡಿಸುವಾಗ ಸರ್ಕಾರ 'ಗೃಹಜ್ಯೋತಿ' ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10ರಷ್ಟು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿದೆ ಎಂದು ಹೇಳಿದೆ.
ಅಲ್ಲದೇ ಯಾವುದೇ ಮನೆಯಲ್ಲಿ 200 ಯೂನಿಟ್‌ಗಳ ಬಳಕೆಯನ್ನು ಮೀರಿದರೆ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ಸರ್ಕಾರವು ತನ್ನ ಆಡಳಿತಾತ್ಮಕ ಅನುಮೋದನೆಯಲ್ಲಿ ಸ್ಪಷ್ಟಪಡಿಸಿದೆ.












Click it and Unblock the Notifications