ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿಗೆ ಆದೇಶ
ಬೆಂಗಳೂರು, ಮೇ 26; ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿ ಕುರಿತು ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಡವಳಿಗಳ ಅನ್ವಯ ಈ ಆದೇಶ ಪ್ರಕಟಿಸಲಾಗಿದೆ. ಹಲವು ಸೂಚನೆಗಳನ್ನು ಸಹ ನೀಡಲಾಗಿದೆ.
ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಎಸ್. ಮುರಬಳ್ಳಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44(2)ರ ಪ್ರಕಾರ, ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.

ಮೊದಲನೇ ಅವಧಿಯ ನಿಗದಿಪಡಿಸಿದ ಮೀಸಲಾತಿಗಳನ್ನು ಪರಿಗಣಿಸಿ 2020ನೇ ಸಾಲಿನ ಚುನಾವಣೆ ನಂತರದ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಮೀಸಲಾತಿ ನಿಗದಿಪಡಿಸುವಾಗ ಸೂಚನೆಗಳನ್ನು ಪಾಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೂಚನೆಗಳು; ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯಿತಿವಾರು ನಿಗದಿಪಡಿಸುವಾಗ ಪ್ರಕರಣ 44ರ ವಿವರಣೆಯಲ್ಲಿರುವಂತೆ, ಸರದಿಯಂತೆ 1993ನೇ ಸಾಲಿನಲ್ಲಿ ಚುನಾವಣೆ ನಡೆದ ನಂತರದ ಮೊದಲ ಮೀಸಲಾತಿ ಹಾಗೂ 2000ನೇ ಸಾಲಿನ ಚುನಾವಣೆಗಳ ನಂತರ ನಡೆದ ಎರಡು ಅವಧಿಗಳ ಮೀಸಲಾತಿ (2000 ಮತ್ತು 2002ನೇ ಸಾಲು) ಹಾಗೂ 2005ನೇ ಸಾಲಿನ ಚುನಾವಣೆ ನಂತರ ನಡೆದ ಎರಡು ಅವಧಿಗಳ ಮೀಸಲಾತಿ (2005 ಮತ್ತು 2007ನೇ ಸಾಲು) ಹಾಗೂ 2010ನೇ ಸಾಲಿನ ಚುನಾವಣೆ ನಂತರ ನಡೆದ ಎರಡು ಅವಧಿಗಳ (2010 ಮತ್ತು 2012ನೇ ಸಾಲು) ಹಾಗೂ 2015ನೇ ಸಾಲಿನ ಚುನಾವಣೆ ನಂತರ ನಡೆದ 5 ವರ್ಷಗಳ ಒಂದು ಅವಧಿಯ (2015ನೇ ಸಾಲು) ಹಾಗೂ 2020ನೇ ಸಾಲಿನ ಚುನಾವಣೆ ನಂತರ ನಡೆದ ಮೊದಲನೇ ಅವಧಿಯ ನಿಗದಿಪಡಿಸಿದ ಮೀಸಲಾತಿಗಳನ್ನು ಪರಿಗಣಿಸಿ 2020ನೇ ಸಾಲಿನ ಚುನಾವಣೆ ನಂತರದ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವುದು ಎಂದು ಹೇಳಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 44ರ ಉಪ ಪ್ರಕರಣ 2 (ಎ)ರನ್ವಯ, ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೊಳಪಟ್ಟು ಜಿಲ್ಲಾಧಿಕಾರಿಗಳು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ, ರಾಜ್ಯದಲ್ಲಿರುವ ಅನುಸೂಚಿತ ಜನಸಂಖ್ಯೆಯು ಅಥವಾ ರಾಜ್ಯದಲ್ಲಿರುವ ಅನುಸೂಚಿತ ಪಂಗಡಗಳ ಜನಸಂಖ್ಯೆಯು ಅನುಪಾತದಲ್ಲಿದೆಯೋ ಅಂತಹ ಹುದ್ದೆಗಳ ಸಂಖ್ಯೆಯು ರಾಜ್ಯದಲ್ಲಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಸರಿ ಸುಮಾರು ಅದೇ ಅನುಪಾತದಲ್ಲಿರತಕ್ಕದ್ದು ಎಂದಿರುತ್ತದೆ.
ಸದರಿ ಅಧಿನಿಯಮದ ಪ್ರಕರಣ 44ರ ಉಪ ಪ್ರಕರಣ 2(ಬಿ)ರ ಪ್ರಕಾರ ರಾಜ್ಯದ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಯ ಸರಿ ಸುಮಾರು 1/3ರ ಸಂಖ್ಯೆಯಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದವರಿಗಾಗಿ ಮೀಸಲಿಡತಕ್ಕದ್ದು. ಹಾಗೆ ನಿರ್ಧರಿಸಿ ಮೀಸಲಿರಿಸಿದ ಸಂದರ್ಭದಲ್ಲಿ ಒಂದು ವೇಳೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಿರಿಸಬೇಕಾದ ಹುದ್ದೆಗಳ ಒಟ್ಟು ಸಂಖ್ಯೆಯು ರಾಜ್ಯದಲ್ಲಿ ಆ ಗ್ರಾಮ ಪಂಚಾಯಿತಿಯ ಒಟ್ಟು ಹುದ್ದೆಗಳ ಸಂಖ್ಯೆಯ ಶೇಕಡ ಐವತ್ತನ್ನು ಮೀರತಕ್ಕದ್ದಲ್ಲ ಎಂದಿರುತ್ತದೆ ಎಂದು ತಿಳಿಸಿದೆ.
ಹುದ್ದೆಗಳನ್ನು ನಿಗದಿಪಡಿಸುವ ಸಂದರ್ಭದಲ್ಲಿ ಒಂದು ವೇಳೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಹಿಂದುಳಿದ ವರ್ಗದವರಿಗಾಗಿ ಮೀಸಲಿರಿಸಬೇಕಾದ ಹುದ್ದೆಗಳ ಒಟ್ಟು ಸಂಖ್ಯೆಯು ಗ್ರಾಮ ಪಂಚಾಯಿತಿಗಳ ಒಟ್ಟು ಹುದ್ದೆಗಳ ಸಂಖ್ಯೆಯ ಶೇಕಡ ಐವತ್ತನ್ನು ಮೀರುವ ಸಂದರ್ಭದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ನಿಗದಿಪಡಿಸಿದ ಹುದ್ದೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಹಿಂದುಳಿದ ವರ್ಗಕ್ಕೆ ನಿಗದಿಪಡಿಸಿದ ಹುದ್ದೆಗಳಲ್ಲಿ ಕಡಿತಗೊಳಿಸಿ, ಆ ಮೂರು ಪ್ರವರ್ಗದ ಹುದ್ದೆಗಳ ಸಂಖ್ಯೆಗಳನ್ನು ಗ್ರಾಮ ಪಂಚಾಯಿತಿಗಳ ಒಟ್ಟು ಹುದ್ದೆಗಳ ಶೇಕಡ ಐವತ್ತಕ್ಕೆ ಮಿತಿಗೊಳಿಸಬೇಕಾಗುತ್ತದೆ. ಹೀಗೆ ಹಿಂದುಳಿದ ವರ್ಗದವರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಿದ ನಂತರ ಈ ಪೈಕಿ ಹಿಂದುಳಿದ ವರ್ಗ 'ಅ' ಕ್ಕೆ ಶೇಕಡ 80ರಷ್ಟು ಮತ್ತು ಹಿಂದುಳಿದ ವರ್ಗ 'ಬ' ಕ್ಕೆ ಶೇಕಡ 20ರಷ್ಟು ಹುದ್ದೆಗಳನ್ನು ಮೀಸಲಿರಿಸತಕ್ಕದ್ದು ಎಂದು ತಿಳಿಸಲಾಗಿದೆ.












Click it and Unblock the Notifications