ಮಗುವೆ ಮರಳಿ ಬಾ ಶಾಲೆಗೆ: ಮೇ 29ರಿಂದ ಸರ್ಕಾರಿ ಶಾಲೆಗಳು ಆರಂಭ
ಬೆಂಗಳೂರು, ಮೇ 28: ಬೇಸಿಗೆ ರಜೆಯ ಬಳಿಕ ಮೇ 29ರಿಂದ 2018-19ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಗಳು ಆರಂಭಗೊಳ್ಳಲಿವೆ. ಮಕ್ಕಳು ಈ ದೀರ್ಘ ರಜೆಯಲ್ಲಿ ಅಪ್ಪ, ಅಮ್ಮ, ಅಜ್ಜ, ಅಜ್ಜಿಯೊಂದಿಗೆ ನಲಿದಾಡಿ ಇದೀಗ ಮತ್ತೆ ಶಾಲೆ ಆರಂಭವಾಯಿತಾ ಹೋಗಲೇ ಬೇಕಾ ಎನ್ನುವ ಬೇಜಾರದ ಮಾತುಗಳು ಕೂಡ ಆರಂಭವಾಗಿದೆ.
ಮೇ 28ರಂದು ಶಾಲೆಗಳಿಗೆ ಶಿಕ್ಷಕರು ಮತ್ತು ಅಧಿಕಾರಿಗಳು ಆಗಮಿಸಿ ಶಾಲಾ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ತರಗತಿಗಳು ಮೇ 29ರಿಂದ ಆರಂಭವಾಗಲಿದೆ. ಶಾಲೆ ಆರಂಭಕ್ಕೂ ಮುನ್ನ ಶಾಲಾ ವೇಳಾಪಟ್ಟಿ, ಸ್ವಚ್ಛತೆ, ಶಾಲಾ ಅಭಿವೃದ್ಧಿ ಯೋಜನೆ ಕುರಿತು ಆಡಳಿತ ಮಂಡಳಿಯು ಸಂಪೂರ್ಣ ಆಸಕ್ತಿ ವಹಿಸಬೇಕು.
ಶಾಲಾ ಪ್ರಾರಂಭೋತ್ಸವವನ್ನು ಒಂದು ಯಾಂತ್ರಿಕ ಪ್ರಕ್ರಿಯೆ ಎಂದು ಪರಿಗಣೊಸದೆ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಶಾಲಾ ಕಟ್ಟಡಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಶಾಲೆ ಆರಂಭವನ್ನು ಯುಗಾದಿ ಹಬ್ಬದಂತೆ ಆಚರಿಸಲು ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಶಾಲಾ ಪ್ರಾರಂಭೋತ್ಸವ ಮುಗಿದ ಬಳಿಕ ಕ್ರೋಢೀಕೃತ ವರದಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ಜೂ.10ರೊಳಗೆ ಆಯುಕ್ತರ ಕಚೇರಿಗೆ ಕಳುಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಎಂ.ಟಿ. ರೇಜು ಸೂಚನೆ ನೀಡಿದ್ದಾರೆ. ಸೋಮವಾರದಿಂದ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತದೆ. ಆದರೆ, ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆ ವಿಳಂಬವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪಠ್ಯಪುಸ್ತಕ ಮುದ್ರಣ ಕಾರ್ಯ ಮುಗಿದಿದ್ದು, ಮೇ 28ರಿಂದಲೇ ಸರಬರಾಜು ಮಾಡಲಾಗುತ್ತದೆ. ಕಲಬುರಗಿ ಮತ್ತು ಬೆಂಗಳೂರು ವಿಭಾಗಕ್ಕೆ ಸಮವಸ್ತ್ರ ಪೂರೈಕೆ ಮಾಡಲಾಗಿದೆ. ಬೆಳಗಾವಿ ಮತ್ತು ಮೈಸೂರು ವಿಭಾಗಕ್ಕೆ ಟೆಂಡರ್ ನೀಡಲಾಗಿದ್ದು ಸದ್ಯದಲ್ಲೇ ವಿಭಾಗಕ್ಕೆ ಪೂರೈಕೆಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಬಸವರಾಜು ತಿಳಿಸಿದ್ದಾರೆ.












Click it and Unblock the Notifications