ವಿನೂತನ ಮಾದರಿ ವಿವಿಗಳ ಸ್ಥಾಪನೆ; ಸರ್ಕಾರದ ಆದೇಶ
ಬೆಂಗಳೂರು, ನವೆಂಬರ್ 08; ಕರ್ನಾಟಕ ಸರ್ಕಾರ ವಿನೂತನ ಮಾದರಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಕುರಿತು ಆದೇಶ ಹೊರಡಿಸಿದೆ. ರಾಜ್ಯದ 6 ಸ್ಥಳಗಳಲ್ಲಿ ನೂತನ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಲಿವೆ.
2022-23ನೇ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ವಿನೂತನ ಮಾದರಿ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಚಾಮರಾಜನಗರ, ಹಾಸನ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ ಮತ್ತು ಹಾವೇರಿಯಲ್ಲಿ ನೂತನ ವಿವಿ ಸ್ಥಾಪನೆ ಮಾಡಲಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ಈ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹಚ್ಚುವ ಮಾನವ ಸಂಪನ್ಮೂಲ ಉಪಯೋಗಿಸದೆ ಕಾರ್ಯನಿರ್ವಹಿಸಲಿದೆ ಎಂದು ಸರ್ಕಾರ ಹೇಳಿದೆ.

ನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸಂಬಂಧ ಜಿ. ಹೇಮಂತ ಕುಮಾರ್, ಕುಲಪತಿಗಳು, ಮೈಸೂರು ವಿಶ್ವವಿದ್ಯಾಲಯ, ಇವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.
ಸರ್ಕಾರದ ಷರತ್ತುಗಳು
* ಈ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಯಾವುದೇ ಜಮೀನು, ವಾಹನ ಖರೀದಿಸುವಂತಿಲ್ಲ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಬಳಸಿಕೊಂಡು ಸ್ಥಾಪಿಸುವುದು. ಯಾವುದೇ ಹೊಸ ಹುದ್ಯಗಳನ್ನು ಸೃಜಿಸುವಂತಿಲ್ಲ.
2 ಹಿಂದುಳಿದ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ Digital ಹಾಗೂ Entrepreneurial (ಕೌಶಲ್ಯಾಧಾರಿತ) Earn while you learn ಮಾದರಿಯಂತೆ ವಿಶ್ವವಿದಾಲಯಗಳನ್ನು ಸ್ಥಾಪಿಸಲು ಕ್ರಮವಹಿಸುವುದು.
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದರ ಮೂಲಕ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2022ರಲ್ಲಿ ವಿನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮತ್ತು ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯವಾಗಿರುವ ಮಂಡ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನಾಗಿ ಪರಿವರ್ತಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿನೂತನ ಮಾದರಿಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಮತ್ತು ಪ್ರಸ್ತುತ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯವಾಗಿರುವ ಮಂಡ್ಯ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಸಂಬಂಧ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಕುರಿತಂತೆ ಕ್ರಮವಹಿಸಬೇಕಾಗಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದಂತೆ, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ 7 ವಿಶ್ವವಿದ್ಯಾಲಯಗಳು, ಪ್ರಸ್ತುತ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯವಾಗಿರುವ ಮಂಡ್ಯ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲು ಆದೇಶಿಸಲಾಗಿದೆ.

ಎಲ್ಲೆಲ್ಲಿ ಸ್ಥಾಪನೆಯಾಗಲಿದೆ ಹೊಸ ವಿವಿ
1 ಮೈಸೂರು ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು, ಚಾಮರಾಜನಗರದಲ್ಲಿ ಹೊಸದಾಗಿ ವಿವಿ ಆರಂಭಿಸಲು ಉದ್ದೇಶಿಸಲಾಗಿದೆ. ನೂತನ ವಿವಿ ಕೇಂದ್ರ ಸ್ಥಳ ಡಾ. ಬಿ. ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ.
ಮೈಸೂರು ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು ಹಾಸನದಲ್ಲಿ ಹೊಸ ವಿವಿ ಸ್ಥಾಪನೆಯಾಗಲಿದೆ. ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಹಾಸನ ನೂತನ ವಿವಿ ಕೇಂದ್ರ ಸ್ಥಳವಾಗಲಿದೆ.
ಮೈಸೂರು ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು, ಮಂಡ್ಯದಲ್ಲಿ ನೂತನ ವಿವಿ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸರ್. ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಮಂಡ್ಯ ನೂತನ ವಿವಿ ಕೇಂದ್ರ ಸ್ಥಳ.
2 ಗುಲ್ಬರ್ಗ ವಿಶ್ವವಿದ್ಯಾಲಯ ಮೂಲ ವಿಶ್ವವಿದ್ಯಾಲಯವಾಗಿದ್ದು, ಬೀದರ್‌ನಲ್ಲಿ ಹೊಸ ವಿವಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಜ್ಞಾನ ಕಾರಂಜಿ, ಹಾಲಹಳ್ಳಿ, ಭಾಲ್ಕಿ ತಾಲೂಕು, ಬೀದರ್ ಜಿಲ್ಲೆ ನೂತನ ವಿವಿ ಕೇಂದ್ರ ಸ್ಥಾನ.
3 ಮಂಗಳೂರು ವಿಶ್ವವಿದ್ಯಾಲಯ ಮೂಲ ವಿವಿ. ಕೊಡಗಿನಲ್ಲಿ ಹೊಸ ವಿವಿ ಸ್ಥಾಪನೆಯಾಗಲಿದೆ. ಚಿಕ್ಕಅಲುವಾರ, ಕುಶಾಲನಗರ ಹೊಸ ವಿವಿ ಕೇಂದ್ರ ಸ್ಥಾನ.
4 ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಮೂಲ ವಿವಿ. ಕೊಪ್ಪಳದಲ್ಲಿ ಹೊಸ ವಿವಿ ನಿರ್ಮಾಣ. 4ನೇ ಮಹಡಿ, ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯ, ತಳಕಲ್, ಕೊಪ್ಪಳ.
5 ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮೂಲ ವಿವಿಯಾಗಿದೆ. ಬಾಗಲಕೋಟೆಯಲ್ಲಿ ಹೊಸ ವಿವಿ ನಿರ್ಮಾಣವಾಗಲಿದೆ. ಜಮಖಂಡಿ, ಬಾಗಲಕೋಟೆ ಕೇಂದ್ರ ಸ್ಥಾನ.
6 ಕರ್ನಾಟಕ ವಿಶ್ವವಿದ್ಯಾಲಯ ಮೂಲ ವಿವಿ. ಹಾವೇರಿಯಲ್ಲಿ ನೂತನ ವಿವಿ ನಿರ್ಮಾಣವಾಗಲಿದೆ. ಕರಿಮತ್ತಿಹಳ್ಳಿ, ಹಾವೇರಿ ಕೇಂದ್ರ ಸ್ಥಾನವಾಗಲಿದೆ.












Click it and Unblock the Notifications