ರಾಜ್ಯದ ಈ ಜಿಲ್ಲೆಯಗಳಲ್ಲಿ 'ಟ್ರಾನ್ಸ್‌ಫಾರ್ಮರ್' ದುರಸ್ತಿ ಕೇಂದ್ರಗಳಿಗೆ ಜಮೀನು: ಎಂಬಿ ಪಾಟೀಲ್
ಬೆಂಗಳೂರು, ಸೆಪ್ಟಂಬರ್ 20: ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (MEI) ಸಂಸ್ಥೆಯು ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿ ಕೇಂದ್ರಗಳನ್ನು ತೆರೆಯುವ ಅಗತ್ಯವಿದೆ. ಈ ಸಂಬಂಧ ತಲಾ ಒಂದು ಎಕರೆ ಜಮೀನಿಗಾಗಿ ಸಂಸ್ಥೆಯವರು ಮನವಿ ಮಾಡಿದ್ದಾರೆ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರು ಮಾಹಿತಿ ನೀಡಿದರು.
ಶುಕ್ರವಾರ MEI ಅಧ್ಯಕ್ಷ ಎಸ್.ಮನೋಹರ್ ಜಮೀನಿಗಾಗಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದ 'ವಿಜಯಪುರ, ಮೈಸೂರು, ಬಳ್ಳಾರಿ, ಚಿತ್ರದುರ್ಗ, ಮಂಗಳೂರು ಮತ್ತು ರಾಯಚೂರು ಒಳಗೊಂಡಂತೆ ಇತರ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಜಾಗದ ಲಭ್ಯತೆ ನೋಡಿಕೊಂಡು ಜಮೀನು ಮಂಜೂರು ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಜಮೀನು ಮಂಜೂರು ಮಾಡಿದರೆ ಭವಿಷ್ಯದಲ್ಲಿ ಟ್ರಾನ್ಸ್‌ಫಾರ್ಮರ್ ಗಳ ತ್ವರಿತ ದುರಸ್ತಿಗೆ ಸಹಾಯವಾಗುತ್ತದೆ. ಇದರಿಂದ ಅಡೆತಡೆ ಇಲ್ಲದ ಮತ್ತು ಗುಣಮಟ್ಟದ ವಿದ್ಯುತ್ ವಿತರಣೆಗೆ ನೆರವಾಗಲಿದೆ ಎಂದು ಅವರು ತಿಳಿಸಿದರದು.
ಗುಣಮಟ್ಟದ ಟ್ರಾನ್ಸ್‌ಫಾರ್ಮರ್ ತಯಾರಿಕೆ
ಸರಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಕಾರ್ಖಾನೆ ಈಗಾಗಲೇ ಗುಣಮಟ್ಟದ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರಿಸುತ್ತಿದೆ. ಅದರೊಂದಿಗೆ ಎಂಇಐ ಉತ್ಕೃಷ್ಟ ದರ್ಜೆಯ 11 ಕೆ.ವಿ. ಸ್ವಿಚ್‌ಗೇರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಆದರೆ, ನಮ್ಮಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಗೆ ವ್ಯವಸ್ಥಿತವಾದ ಜಾಲವಿಲ್ಲ.
ಆದ್ದರಿಂದ ರಾಜ್ಯ ಸರ್ಕಾರ ತನ್ನ ಅಧೀನದ ಉದ್ಯಮ ಸಂಸ್ಥೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದರಂತೆ ಎಂಇಐಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಸಚಿವ ಎಂಬಿ ಪಾಟೀಲ ಹೇಳಿದರು. ಸಚಿವರ ಭೇಟಿ ವೇಳೆ ಎಂಇಐ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ ಅವರು ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ, ಜಾಗದ ಅಗತ್ಯೆಯನ್ನು ವಿವರಿಸಿದರು.
ಉತ್ತರ ಕರ್ನಾಟಕದಲ್ಲಿ ₹150 ಕೋಟಿ ಹೂಡಿಕೆ
ಜಪಾನಿನ ನಿಡೆಕ್ ಕಾರ್ಪೋರೇಷನ್ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿಯಾಗಿ ₹150 ಕೋಟಿ ಹೂಡಿಕೆಯೊಂದಿಗೆ ತನ್ನ ತಯಾರಿಕಾ ಘಟಕ ವಿಸ್ತರಿಸಲಿದೆ. ಈ ಕುರಿತು ಮಾತುಕತೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನಿಡೆಕ್ ಮೋಷನ್ ಆ್ಯಂಡ್ ಎನರ್ಜಿ ಅಧ್ಯಕ್ಷ ಮೈಕೆಲ್ ಬ್ರಿಗ್ಸ್ ಅವರು ಗುರುವಾರ ಇಲ್ಲಿ ಸಚಿವರ ಜೊತೆಗೆ ನಡೆಸಿದ ಸಭೆಯಲ್ಲಿ ಈ ವಿಸ್ತರಣಾ ಯೋಜನೆ ಪ್ರಕಟಿಸಲಾಗಿದೆ. ನಿಡೆಕ್, ಈ ಹಿಂದೆ ರಾಜ್ಯದಲ್ಲಿ ₹450 ಕೋಟಿ ಹೂಡಿಕೆ ಮಾಡಿತ್ತು. ಸಚಿವ ಪಾಟೀಲ ಅವರ ಇತ್ತೀಚಿನ ಜಪಾನ್ ಭೇಟಿಯ ನಂತರ, ಕಂಪನಿಯು ಈಗ ಈ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ.
800 ಉದ್ಯೋಗ ಸೃಷ್ಟಿ
ಈ ಹೊಸ ಹೂಡಿಕೆಯು ಕರ್ನಾಟಕದ ಕೈಗಾರಿಕಾ ಉತ್ತೇಜನಾ ಕ್ರಮಗಳ ಬಗ್ಗೆ ನಿಡೆಕ್ ಹೊಂದಿರುವ ವಿಶ್ವಾಸದ ದ್ಯೋತಕವಾಗಿದೆ. ಈ ಯೋಜನೆಯ ಕಾಮಗಾರಿಯು 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ. ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಆಗಲಿದೆ. ಈ ಯೋಜನೆಯಿಂದಾಗಿ ಈ ಭಾಗದಲ್ಲಿ ಒಟ್ಟು 800 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಸಚಿವರ ತಿಳಿಸಿದರು.












Click it and Unblock the Notifications