• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಕ್ಷದ ಆಂತರಿಕ ಸಮಸ್ಯೆಯ ಕೈಗೊಂಬೆ ಆಗಬಾರದು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

|
Google Oneindia Kannada News

ಬೆಂಗಳೂರು, ಸೆ. 09: "ಗಣೇಶ ಹಬ್ಬದಲ್ಲಿ ಎಷ್ಟು ಗಾತ್ರದ ಮೂರ್ತಿಗೆ ಪೂಜೆ ಮಾಡಬೇಕು ಎಂಬುದು ಭಕ್ತ ಹಾಗೂ ಭಗವಂತನಿಗೆ ಬಿಟ್ಟ ವಿಚಾರ. ಈ ಮೂರ್ತಿ ಹಿಂದೆ ಅನೇಕ ವರ್ಗದ ಜನರ ಜೀವನ ಅವಲಂಬಿತವಾಗಿದೆ. ಯಾರು, ಯಾವ ರೀತಿಯಲ್ಲಿ ಪೂಜೆ ಮಾಡಬೇಕು ಎಂಬುದು ಅವರವರ ವೈಯಕ್ತಿಕ ಭಾವಕ್ಕೆ ಬಿಟ್ಟ ವಿಚಾರ. ಇದಕ್ಕೆ ಬಿಜೆಪಿ ಸರ್ಕಾರ ನಿರ್ಬಂಧ ಹೇರಬಾರದು. ಸರ್ಕಾರ ತನ್ನ ನಿರ್ಬಂಧ ಆದೇಶ ಹಿಂಪಡೆಯಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕೋವಿಡ್ ಮಾರ್ಗಸೂಚಿ ಹೆಸರಲ್ಲಿ ರಾಜ್ಯ ಸರ್ಕಾರ ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿಯ ಗಾತ್ರ ಹಾಗೂ ಹಬ್ಬ ಆಚರಣೆ ಅವಧಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ನಗರದ ಮಾವಳ್ಳಿಯಲ್ಲಿ ಗಣೇಶ ಮೂರ್ತಿ ತಯಾರಕರು ಮತ್ತು ಮಾರಾಟಗಾರರನ್ನು ಗುರುವಾರ ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸಣ್ಣ ಸಗಣಿ ಉಂಡೆಯನ್ನು ಗಣೇಶ ಎಂದು ಪೂಜೆ ಮಾಡ್ತೇವೆ

ಸಣ್ಣ ಸಗಣಿ ಉಂಡೆಯನ್ನು ಗಣೇಶ ಎಂದು ಪೂಜೆ ಮಾಡ್ತೇವೆ

"ಈ ದೇಶದ ಸಂಸ್ಕೃತಿ ನಮ್ಮ ಆಸ್ತಿ. ಈ ಸಂಸ್ಕೃತಿಯಲ್ಲಿ ನಾವು ಬೆಳೆಯುತ್ತಿದ್ದೇವೆ. ಯಾವ ಧರ್ಮದವರು ಹೇಗೆ ಪೂಜೆ ಮಾಡಬೇಕು ಎಂಬುದು ಭಕ್ತ ಹಾಗೂ ಭಗವಂತನಿಗೆ ಬಿಟ್ಟ ವಿಚಾರ. ಭಾರತದಲ್ಲಿ ಹಿಂದೂಗಳ ಜತೆಗೆ ಇತರೆ ಧರ್ಮದವರು ಕೂಡ ವಿಘ್ನಗಳನ್ನು ನಿವಾರಣೆ ಮಾಡುವ ವಿನಾಯಕನ ಪೂಜೆ ಮಾಡುತ್ತಾರೆ" ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಣ್ಣ ಸಗಣಿ ಉಂಡೆಗೆ ಒಂದು ಗರಿಕೆಯಿಟ್ಟು ಅದನ್ನು ಗಣೇಶ ಎಂದು ನಾವು ಪೂಜೆ ಮಾಡುತ್ತೇವೆ. ಇದೇ ನಮ್ಮ ಹಿರಿಯರು, ನಮ್ಮ ಸಂಸ್ಕೃತಿ ನಮಗೆ ತೋರಿರುವ ಮಾರ್ಗದರ್ಶನ ಎಂದರು.

ಕೋವಿಡ್ ಸಮಯದಲ್ಲಿ ದೇವಸ್ಥಾನ ತೆರೆಯಲು ಅವಕಾಶ

ಕೋವಿಡ್ ಸಮಯದಲ್ಲಿ ದೇವಸ್ಥಾನ ತೆರೆಯಲು ಅವಕಾಶ

"ಕೋವಿಡ್ ಸಮಯದಲ್ಲಿ ದೇವಸ್ಥಾನ ತೆರೆಯಲು ಅವಕಾಶ ಕೊಟ್ಟಿದ್ದೀರಿ. ನಿಮ್ಮವರು ಕೇಂದ್ರ ಸಚಿವರಾದರು ಎಂಬುದಕ್ಕೇ ಜನಾಶೀರ್ವಾದ ಯಾತ್ರೆ ಮಾಡಿಸುತ್ತಿದ್ದೀರಿ. ಚುನಾವಣೆ ನಡೆಸುತ್ತಿದ್ದೀರಿ. ಈಗ ಬಿಜೆಪಿ ನಾಯಕರು ಶಿಫಾರಸ್ಸು ಮಾಡುವ ಕಡೆ ವಾರ್ಡ್‌ನಲ್ಲಿ ಒಂದು ಗಣೇಶ ಇಟ್ಟು ಪೂಜೆ ಮಾಡಬೇಕು. ಅದೂ ಮನೆಯಲ್ಲಿ 2 ಅಡಿ, ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಮೂರ್ತಿ ಮಾತ್ರ ಇಡಬೇಕು ಎಂದು ನಿರ್ಬಂಧ ಹಾಕಿದ್ದೀರಿ? ಇದು ಸರಿಯೇ? ಈಗ ಇಷ್ಟು ದೊಡ್ಡ ಗಣೇಶ ಮೂರ್ತಿ ಮಾಡಿರುವವರ ಕತೆ ಏನಾಗಬೇಕು. ಸರ್ಕಾರ ಇದೇ ಆದೇಶವನ್ನು 3 ತಿಂಗಳ ಹಿಂದೆಯೇ ಯಾಕೆ ಪ್ರಕಟಿಸಲಿಲ್ಲ?" ಎಂದು ಪ್ರಶ್ನೆ ಮಾಡಿದರು

ವಿಗ್ರಹದ ಎತ್ತರ ನಿರ್ಧಾರ ಮಾಡಲು ನೀವ್ಯಾರು?

ವಿಗ್ರಹದ ಎತ್ತರ ನಿರ್ಧಾರ ಮಾಡಲು ನೀವ್ಯಾರು?

"ಎಷ್ಟು ಗಾತ್ರದ ವಿಗ್ರಹ ಪೂಜೆ ಮಾಡಬೇಕು ಅಂತಾ ನಿರ್ದೇಶನ ನೀಡಲು ನೀವ್ಯಾರು? ಇದು ನಮ್ಮ ವೈಯಕ್ತಿಕ ವಿಚಾರ. ಇದರಲ್ಲಿ ನಿಮ್ಮ ಸಮಸ್ಯೆ ಏನು? ಕೋವಿಡ್ ಮಾರ್ಗಸೂಚಿ ಏನು ಬೇಕಾದರೂ ಮಾಡಿಕೊಳ್ಳಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಒಂದು ಕೋವಿಡ್ ಮಾರ್ಗಸೂಚಿ ಪ್ರಕಟಿಸಿರುವಾಗ ಬಿಜೆಪಿ ಆಡಳಿತದಲ್ಲಿರುವ ಕರ್ನಾಟಕಕ್ಕೂ ಗುಜರಾತ್, ಮಧ್ಯ ಪ್ರದೇಶ ಹಾಗೂ ಇತರೆ ರಾಜ್ಯಗಳಲ್ಲಿ ಕೋವಿಡ್ ನಿಯಮದಲ್ಲಿ ವ್ಯತ್ಯಾಸ ಏಕಿದೆ?"

"ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಗಳು ಕೋವಿಡ್ ನಿಯಮಾವಳಿ ಹಾಕಿದರೆ ಅದನ್ನು ನಿಮ್ಮ ಪಕ್ಷದ ಕಾರ್ಯಕರ್ತರೇ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಕರ್ನಾಟಕದಲ್ಲಿ ಉಲ್ಟಾ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಹೀಗೆ ಇದು ನಮ್ಮ ವೈಯಕ್ತಿಕ ವಿಚಾರ. ಅದಕ್ಕೆ ನಿರ್ಬಂಧ ಹಾಕುವುದು ಸರಿಯಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದೇ ವೇಳೆ ಸಲಹೆ ನೀಡಿದ್ದಾರೆ.

ನೀವು ಯಾವ ಪರಿಹಾರ ಕೊಟ್ಟಿದ್ದೀರಿ?

ನೀವು ಯಾವ ಪರಿಹಾರ ಕೊಟ್ಟಿದ್ದೀರಿ?

ಗಣೇಶ ವಿಗ್ರಹವನ್ನು ಸಾಮಾನ್ಯರು ಮಾಡಲು ಸಾಧ್ಯವಿಲ್ಲ. ಈ ಕಸುಬು, ಕಲೆಯನ್ನು ಕಲಿತು, ಅದನ್ನೇ ನಂಬಿ ಜೀವನ ಮಾಡುತ್ತಿರುವವರು ಮಾತ್ರ ಮಾಡಲು ಸಾಧ್ಯ. ಬೇರೆ ರಾಜ್ಯಗಳಲ್ಲಿ ಇವರಿಗೆ ಪರಿಹಾರ ನೀಡಿದ್ದಾರೆ. ಆದರೆ ನೀವು ಯಾವ ಪರಿಹಾರ ಕೊಟ್ಟಿದ್ದೀರಿ? ಲೆಕ್ಕ ಇದೆಯಾ? ರಾಜ್ಯದಲ್ಲಿ ಹೂವು, ಹಣ್ಣು ವ್ಯಾಪಾರದವರು, ಆರ್ಕೆಸ್ಟ್ರಾ, ಪೆಂಡಾಲ್ ವ್ಯಾಪಾರಿಗಳಲ್ಲಿ ಯಾರಿಗೆ ನೀವು ಪರಿಹಾರ ಕೊಟ್ಟಿದ್ದೀರಿ? ಮೂರ್ತಿಗೆ ನಿರ್ಬಂಧ ಹೇರಿರುವುದರಿಂದ ಇವರೆಲ್ಲರಿಗೂ ಹೊಡೆತ ಬೀಳಲಿದೆ. ಇದು ಕೇವಲ ಪಾಲಿಕೆ ವ್ಯಾಪ್ತಿಗೆ ಸೀಮಿತವಲ್ಲ. ಇಡೀ ರಾಜ್ಯಕ್ಕೆ ಒಂದೇ ನೀತಿ ಇರಬೇಕು. ಒಂದೇ ದೃಷ್ಟಿಯಲ್ಲಿ ನೋಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಜನಾಶೀರ್ವಾದ ಯಾತ್ರೆಗೆ ಅವಕಾಶ ಕೊಟ್ಟಿದ್ದೇಕೆ?

ಜನಾಶೀರ್ವಾದ ಯಾತ್ರೆಗೆ ಅವಕಾಶ ಕೊಟ್ಟಿದ್ದೇಕೆ?

ಇಲ್ಲಿ ಹಿಂದೂ ಭಾವನೆ ಒಂದೇ ಅಲ್ಲ. ಇದು ಎಲ್ಲರ ಭಕ್ತಿ, ಉತ್ಸಾಹದ ವಿಚಾರ. ಸರ್ಕಾರ ಗಣೇಶ ಹಬ್ಬ ಆಚರಣೆಗೆ 10-15 ದಿನಗಳ ಅವಕಾಶ ನೀಡಬೇಕು. ಆರ್ಕೆಸ್ಟ್ರಾ ಮತ್ತಿತರ ಮನರಂಜನೆ ಕಾರ್ಯಕ್ರಮಕ್ಕೂ ಅವಕಾಶ ಇರಬೇಕು. ಕೋವಿಡ್ ನಿಯಮಾವಳಿ ವ್ಯಾಪ್ತಿಯಲ್ಲೇ ಆಚರಣೆಗೆ ಅವಕಾಶ ನೀಡಬೇಕು. ಕೋವಿಡ್ ನಿಯಮ ಮಾಡಿದರೆ ಅದು ಎಲ್ಲರಿಗೂ ಅನ್ವಯವಾಗಬೇಕು.


ಹೊಸದಾಗಿ ಕೇಂದ್ರ ಮಂತ್ರಿಯಾದವರಿಗೆ ಜನಾಶೀರ್ವಾದ ಯಾತ್ರೆ ಮಾಡಲು ಅವಕಾಶ ಕೊಟ್ಟಿದ್ದೇಕೆ? ಬೇರೆ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಯಾಕೆ? ಪ್ರತಿಭಟನೆ ಮಾಡುತ್ತಿದ್ದ ಹೆಣ್ಣು ಮಕ್ಕಳನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದೇಕೆ? ಕಾನೂನು ಒಬ್ಬೊಬ್ಬರಿಗೆ ಒಂದು ಎಂಬಂತೆ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ತಮ್ಮ ಪಕ್ಷದ ಆಂತರಿಕ ವಿಚಾರಕ್ಕೆ ಕೈಗೊಂಬೆಯಾಗಬಾರದು. ಗಣೇಶನ ಪೂಜೆ ಎಲ್ಲರ ಹಕ್ಕು, ಎಲ್ಲರ ಆಸ್ತಿ. ಎಲ್ಲ ಧರ್ಮದವರು ತಮ್ಮ ಸಂಪ್ರದಾಯ ಆಚರಣೆಗೆ ಅವಕಾಶ ಮಾಡಿಕೊಡಿ. ಈ ಹಬ್ಬ ಅನೇಕರ ಜೀವನಕ್ಕೆ ಆಸರೆಯಾಗಿದೆ. ಸರ್ಕಾರ ನಮ್ಮ ಭಾವನೆ ಕೆರಳಿಸಲು ಪ್ರಯತ್ನಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

   ಹಬ್ಬ ಮಾಡೋಕೆ ಹೆದರಿದ ಜನಸಾಮಾನ್ಯರು | Oneindia Kannada
   English summary
   Government should not interfere with Ganesh and devotees; CM's internal problem should not be a puppet: KPCC President DK Shivakumar. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X