Gruhalakshmi Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ
Gruhalakshmi Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತದೆ. ಇದೀಗ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಈವರೆಗೆ ರಾಜ್ಯ ಕಾರ್ಯದರ್ಶಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣ ಪಾವತಿ ಆಗುತಿತ್ತು. ಆದರೆ, ಇನ್ಮುಂದೆ ರಾಜ್ಯ ಕಾರ್ಯದರ್ಶಿಯಿಂದ ತಾಲೂಕು ಪಂಚಾಯಿತಿಗೆ ಹಣ ಪಾವತಿ ಆಗಲಿದೆ. ತಾಲ್ಲೂಕು ಪಂಚಾಯಿತಿಯಿಂದ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ ಎಂದು ತಿಳಿದುಬಂದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಇಲಾಖೆಯದ್ದೇ ಬಹಳಷ್ಟು ಜವಾಬ್ದಾರಿ ಇದೆ. ಇದೀಗ ಗೃಹಲಕ್ಷ್ಮಿ ನಿಭಾಯಿಸುವುದು ಮತ್ತಷ್ಟು ಹೊರೆ ಆಗುತ್ತಿದ್ದು, ಈ ಹೊರೆಯನ್ನು ತಪ್ಪಿಸಲು ಮಹತ್ವದ ಬದಲಾವಣೆ ಮಾಡಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯ ಸರ್ಕಾರ 3 ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಾವತಿ ಮಾಡಿಲ್ಲ. ಈಗ ಹಣ ಪಾವತಿಯ ಕಾರ್ಯ ವಿಧಾನದಲ್ಲೇ ಬದಲಾವಣೆಗೆ ಮುಂದಾಗಿದೆ. ಈ ವಿಚಾರದ ಬಗ್ಗೆ ಈಗ ಇಲಾಖೆ ಹಂತದಲ್ಲಿ ಚರ್ಚೆ ನಡೆಯುತ್ತಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಗ್ಯ ಸ್ಥಿತಿ ಸುಧಾರಣೆ ಬಳಿಕ ಅಧಿಕೃತ ಆದೇಶ ಪ್ರಕಟ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಆಗಿದೆ ಎಂದು ಕೆಲವು ಶಾಸಕರೇ ಹೇಳಿರುವ ಉದಾಹರಣೆಗಳಿವೆ. ಇದೀಹ ಗೃಹಲಕ್ಷ್ಮಿ ಕಂತು ಪಾವತಿಗೂ ಹಣದ ಕೊರತೆ ಉಂಟಾಗಿದೆ. ಆದ್ದರಿಂದ 3 ಕಂತು ಪಾವತಿಯಾಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಣ ಪ್ರತಿ ತಿಂಗಳು ರೈತರ ಖಾತೆಗೆ ಹಣ ಜಮೆ ಆಗುತ್ತಿದೆ. ಇದು ದೇಶವ್ಯಾಪಿ ನಡೆಯುತ್ತಿರುವಾಗ ಗೃಹಲಕ್ಷ್ಮಿ ಹಣ ಪಾವತಿಗೆ ಕಷ್ಟ ಯಾಕೆ ಎಂಬ ಪ್ರಶ್ನೆಗಳನ್ನು ಕೂಡ ಜನರು ಕೇಳುತ್ತಿದ್ದಾರೆ.
ಸಿ.ಎಸ್.ಚಂದ್ರಭೂಪಾಲ ಹೇಳಿದ್ದೇನು?: ಇನ್ನು ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ಫಲಾನುಭವಿಗಳು ಮೊದಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಜೊತೆಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ದಾರಿ ದೀಪವಾಗಿದೆ ಹಾಗೂ ಮಹಿಳೆಯರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಯ ಬದಲಾವಣೆಗಳನ್ನು ತರುವಲ್ಲಿ ಗೃಹಲಕ್ಷ್ಮಿ ಯೋಜನೆ ಯಶಸ್ವಿ ಕಂಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದ್ದಾರೆ.












Click it and Unblock the Notifications