ಸರ್ಕಾರಿ ನೌಕರರಿಗೆ ಸಲಹೆ ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 21: ಕರ್ನಾಟಕ ಪ್ರಗತಿಪರ ರಾಜ್ಯ. ಬಹುತೇಕ ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯಪ್ರಜ್ಞೆಯಿಂದ ರಾಜ್ಯ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ. ನಿಮ್ಮ ಕಾರಣದಿಂದ ರಾಜ್ಯ GST ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದರು.
ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಉದ್ಘಾಟಿಸಿ, 2023 ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, 5.5 ಲಕ್ಷ ಸರ್ಕಾರಿ ನೌಕರರಿಗೆ ಇವತ್ತಿನ ಪ್ರಶಸ್ತಿ ಪುರಸ್ಕೃತರು ಸ್ಫೂರ್ಥಿಯಾಗಬೇಕು. ಪ್ರಶಸ್ತಿ ಪುರಸ್ಕೃತರ ಜವಾಬ್ದಾರಿ ಈಗ ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಸರ್ಕಾರಿ ನೌಕರರು ಕರ್ತವ್ಯಪ್ರಜ್ಞೆ ಹೆಚ್ಚಿಸಿಕೊಂಡು ಜನರ ಸೇವೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದರು.

ಸಮಾಜದ ನಾಲ್ಕೂ ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗದ ಕೆಲಸ ಸಂವಿಧಾನದ ಆಶಯವನ್ನು ಈಡೇರಿಸುವುದೇ ಆಗಿದೆ. ಸಂವಿಧಾನದ ಆಶಯದಂತೆ ಜಾತ್ಯತೀತ ಸಮಾಜ ನಿರ್ಮಿಸಿ, ಜಾತಿ ಅಸಮಾನತೆಯನ್ನು ಅಳಿಸುವುದಾಗಿದೆ ಎಂದರು. ಬುದ್ದ, ಬಸವ, ಗಾಂಧಿ ಹೇಳಿದ್ದನ್ನೇ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಇವರೆಲ್ಲರ ಆಶಯದಂತೆ ನಾವು ಸಂವಿಧಾನ ಪಾಲಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದ ಹೊರಟು ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಹೀಗಾಗಿ ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕುವ ದಿಕ್ಕಿನಲ್ಲಿ ನಾವು ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಸಮಾನತೆಯಿರುವ ವೈರುಧ್ಯದ ಸಮಾಜದಲ್ಲಿ ಕಾಲಿಡುತ್ತಿದ್ದೇವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರವರು ತಿಳಿಸಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಅವಕಾಶ ವಂಚಿತರಿಗೆ, ಬಡವರಿಗೆ, ಶೋಷಿತರಿಗೆ ಸಮಾನ ಅವಕಾಶ ಹಾಗೂ ಸಮಾನತೆಯನ್ನು ಪಡೆಯಲು ಹೋರಾಟ ಮಾಡಬೇಕು ಎಂದರು.
1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಸಂಬಂಧ ಮಿಲ್ಲರ್ ಆಯೋಗವನ್ನು ರಚಿಸಿದರು. ಬ್ರಾಹ್ಮಣೇತರ ಸಮುದಾಯಗಳಿಗೆ ಶೇ.75 ರಷ್ಟು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡಲಾಯಿತು. ನಂತರ ಮೀಸಲಾತಿ ಸೌಲಭ್ಯಕ್ಕಾಗಿ ಹಲವು ಆಯೋಗಗಳನ್ನು ರಚಿಸಲಾಗಿದೆ. ಶಿಕ್ಷಣ ಪಡೆಯದಿದ್ದರೆ ಗುಲಾಮಗಿರಿ ಹೆಚ್ಚಲಿದ್ದು, ಸ್ವಾಭಿಮಾನದ ಬದುಕು ಸಾಧ್ಯವಾಗುವುದಿಲ್ಲ. ಶಿಕ್ಷಣ ಪಡೆದಿದ್ದರಿಂದ ಮಾತ್ರ ಮುಖ್ಯಮಂತ್ರಿಯ ಹುದ್ದೆಗೇರಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಶಿಕ್ಷಣದ ಮಹತ್ವವನ್ನು ಸಭಿಕರಿಗೆ ವಿವರಿಸಿದರು.
ಗೊಲ್ಲ ಸಮಾಜದವರೂ ಸೇರಿದಂತೆ ಎಲ್ಲ ತಳಸಮುದಾಯದವರು ಉತ್ತಮ ಶಿಕ್ಷಣ ಪಡೆದು ವೈದ್ಯರು, ಐಪಿಎಸ್-ಐಎಎಸ್ ಅಧಿಕಾರಿಗಳು, ವಕೀಲರಾಗಬಹುದು. ಯಾದವ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚಿಸುವ ಬೇಡಿಕೆಇದೆ. ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ, ಆರ್ಥಿಕ ಸಹಾಯ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಮಾಜದ ಸಂಘಟನೆಯತ್ತ ಯಾದವ ಸಮುದಾಯದ ಮುಖಂಡರು ಗಮನಹರಿಸಬೇಕು ಎಂದರು.












Click it and Unblock the Notifications