Google AI Hub: ಗೂಗಲ್ ಎಐ ಹಬ್ ಕರ್ನಾಟಕದ ಕೈತಪ್ಪಿದ್ದು ಈ ಕಾರಣಕ್ಕೆ: ಜೆಡಿಎಸ್ ಗಂಭೀರ ಆರೋಪ
ಜಾಗತಿಕ ಟೆಕ್ ದಿಗ್ಗಜ ಗೂಗಲ್ ಹೂಡಿಕೆ ಮಾಡುತ್ತಿರುವ 1.3 ಲಕ್ಷ ಕೋಟಿ ರೂ. ವೆಚ್ಚದ AI ಹಬ್ ಯೋಜನೆಯು ಕರ್ನಾಟಕದ ಕೈತಪ್ಪಿದ್ದು, ಪಕ್ಕದ ಆಂಧ್ರಪ್ರದೇಶದ ಪಾಲಾಗಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜೆಡಿಎಸ್ ಹಾಗೂ ಬಿಜೆಪಿ ತರಾಟೆಗೆ ತೆಗೆದುಕೊಂಡಿವೆ. ಸರ್ಕಾರದ ನಿರ್ಲಕ್ಷ್ಯತನದಿಂದ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಯೋಜನೆಯೊಂದು ರಾಜ್ಯದ ಕೈತಪ್ಪಿದ್ದು, ಕರ್ನಾಟಕಕ್ಕೆ ದೊಡ್ಡ ಹೊಡೆತ ಎಂದು ಜೆಡಿಎಸ್ ಆರೋಪ ಮಾಡಿದೆ.
ರಾಜ್ಯದ ಕೈತಪ್ಪಿದ ಗೂಗಲ್ AI ಹಬ್ ಆಂಧ್ರದ ಪಾಲಾಗಿದೆ. ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗ್ರಹಣ ಹಿಡಿಸಿ ಬಿಟ್ಟಿದೆ. ಬೆಂಗಳೂರಿನ ಗುಂಡಿಗಳು, ಐಟಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷ್ಯತನದಿಂದ 1.3ಲಕ್ಷ ಕೋಟಿ ಹೂಡಿಕೆಯ ಯೋಜನೆಯೊಂದು ರಾಜ್ಯದ ಕೈತಪ್ಪಿದ್ದು ಕರ್ನಾಟಕಕ್ಕೆ ದೊಡ್ಡ ಹೊಡೆತ ಎಂದು ಹೇಳಿದೆ.

30,000 ಉದ್ಯೋಗ, 10,000 ಕೋಟಿ ಆದಾಯ ನಷ್ಟ!
ಟೆಕ್ ದಿಗ್ಗಜ ಗೂಗಲ್ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸುಮಾರು 1.3 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ AI ಹಬ್ ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 30,000 ಉದ್ಯೋಗ ಜೊತೆಗೆ ವಾರ್ಷಿಕ 10,000 ಕೋಟಿ ರೂ. ಆದಾಯ ಗಳಿಸಬಹುದಾಗಿದ್ದ ಯೋಜನೆಯ ಕರ್ನಾಟಕದ ಕೈತಪ್ಪಿ ಅನ್ಯ ರಾಜ್ಯಕ್ಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದೆ. ಗಾರ್ಡನ್ ಸಿಟಿಯ ರಸ್ತೆ ಗುಂಡಿ, ಕಸ ಹಾಗೂ ಮೂಲ ಸೌಕರ್ಯ ಸಮಸ್ಯೆ ಕಾರಣಕ್ಕೆ ಕಾರ್ಪೊರೇಟ್ ವಲಯದ ಕೆಂಗಣ್ಣಿಗೆ ಗುರಿಯಾಗಿರುವ ಸಮಯದಲ್ಲೇ ಜಾಗತಿಕ ಬೃಹತ್ ಹೂಡಿಕೆಯ ಯೋಜನೆ ನೆರೆ ರಾಜ್ಯ ಆಂಧ್ರ ಪಾಲಾಗಿದೆ ಎಂದು ದೂರಿದೆ.
ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸುವುದನ್ನು ಬಿಟ್ಟು, ಉದ್ಯಮಿಗಳು ಬೆಂಗಳೂರು ಬಿಟ್ಟು ಹೋದರೆ ಹೋಗಲಿ ಎಂದು ಧಮ್ಕಿ ಹಾಕುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ನಿಷ್ಪ್ರಯೋಜಕ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಗೂಗಲ್ AI ಹಬ್ ಕರ್ನಾಟಕದ ಕೈತಪ್ಪಲು ನೀವು ಮತ್ತು ನಿಮ್ಮ ಸರ್ಕಾರದ ನಿರ್ಲಕ್ಷತನವೇ ಕಾರಣ ಎಂದು ಆರೋಪ ಮಾಡಿದೆ.
ಭಾರತದಲ್ಲಿ ಗೂಗಲ್ ವತಿಯಿಂದ ಅತಿ ದೊಡ್ಡ ಎಐ ಹಬ್ ನಿರ್ಮಾಣವಾಗಲಿದೆ. 1.3 ಲಕ್ಷ ಕೋಟಿ ರೂ. ಪ್ರಾಜೆಕ್ಟ್‌ನಲ್ಲಿ ಅದಾನಿ ಗ್ರೂಪ್ ಪಾಲುದಾರರಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಗೂಗಲ್ ಕಂಪನಿಯ ಮುಖ್ಯಸ್ಥರಾದ ಸುಂದರ್ ಪಿಚ್ಚೈ ಯೋಜನೆಯ ರೂಪುರೇಷೆಗಳನ್ನು ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ಆಂಧ್ರ ಸಚಿವ ನಾರಾ ಲೋಕೇಶ್ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಟೀಕಿಸಿ, ಐಟಿ ಕಂಪನಿಗಳನ್ನು ಆಂಧ್ರಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆಯೂ ಉಲ್ಲೇಖಿಸಿ, ಅದರ ಲಾಭ ಪಡೆಯಲು ಸಂಚು ರೂಪಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ತಿರುಗೇಟು ನೀಡಿತ್ತು. ಈ ಕಿತ್ತಾಟದ ನಡುವೆಯೇ ಗೂಗಲ್‌ನ ದೊಡ್ಡ ಯೋಜನೆ ಆಂಧ್ರಪ್ರದೇಶದ ಪಾಲಾಗಿದೆ.












Click it and Unblock the Notifications