ಪೌತಿ ಖಾತೆ ನೋಂದಣಿ ಕುರಿತು ರಾಜ್ಯದ ರೈತರಿಗೆ ಗುಡ್ ನ್ಯೂಸ್
ಬೆಂಗಳೂರು, ಜುಲೈ 10: ರಾಜ್ಯದಲ್ಲಿ ರೈತರ ಅನುಕೂಲಕ್ಕೆ ತಕ್ಕಂತೆ ಸರ್ಕಾರ ಗುಡ್ ನ್ಯೂಸ್ ನೀಡುತ್ತಲಿರುತ್ತದೆ. ಹಾಗೆಯೇ ಇದೀಗ ಪೌತಿ ಮಾಡಿಸಿಕೊಳ್ಳಲು ಸರಳ ವಿಧಾನದ ಅಭಿಯಾನವನ್ನು ಆರಂಭಿಸಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರೈತರು ತಮ್ಮ ಜಮೀನುಗಳನ್ನು ಪೌತಿ ಮಾಡಿಸಿಕೊಳ್ಳಲು ಇನ್ಮುಂದೆ ಕಂದಾಯ ಇಲಾಖೆ ಕಚೇರಿವರೆಗೂ ಅಲೆಯಬೇಕಾಗಿಲ್ಲ. ಸರಕಾರವೇ ಇ-ಪೌತಿ ಆಂದೋಲನದ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಹೇಗೆ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಇದ್ದೇ ಇರುತ್ತದೆ ಅದಕ್ಕೆಲ್ಲ ಉತ್ತರ ಇಲ್ಲಿದೆ.

ರಾಜ್ಯದಲ್ಲಿ ಮೃತಪಟ್ಟ ಜಮೀನು ಮಾಲೀಕರ ಹೆಸರಿನಲ್ಲಿ ಇರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಈ ಹಿಂದಿನಿಂದಲೂ ಅಭಿಯಾನಗಳು ನಡೆದಿವೆ. ಈ ಯೋಜನೆಯಡಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ, ವಾರಸುದಾರರಿಗೆ ಮೊಬೈಲ್ ಮೂಲಕ ಪೌತಿ ಖಾತೆಯನ್ನು ನೋಂದಣಿ ಮಾಡಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಸೀಡಿಂಗ್‌ನ ಮೂಲಕ ಭೂಮಿ ಹಿಡುವಳಿಯ ನಿಖರ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಮೃತಪಟ್ಟ 75,000 ಜಮೀನುಗಳ ಮಾಲೀಕರ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಇ-ಪೌತಿ ಆಂದೋಲನವನ್ನು ಆರಂಭ ಮಾಡಿದೆ. ಆಧಾರ್ ಜೋಡಣೆಯಿಂದ ಕೃಷಿ ಭೂಮಿ ಪ್ರಮಾಣ, ರೈತರ ಭೂ ಹಿಡುವಳಿ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರ ಸಂಖ್ಯೆಯ ಬಗ್ಗೆ ನಿಖರ ಅಂಕಿ-ಅಂಶಗಳು ಲಭ್ಯ ಆಗಲಿವೆ.
ಪೌತಿ ಖಾತೆ ಎಂದರೇನು?: ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಇರುವ ಆಸ್ತಿಯನ್ನು ತಮ್ಮ ಕಾನೂನು ಬದ್ದ ವಾರಸುದಾರರ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನಲಾಗುತ್ತದೆ. ಮನೆ ಬಾಗಿಲಿಗೆ ಹೋಗಿ ಪೌತಿ ಖಾತೆ ಅಭಿಯಾನ ನಡೆಸುತ್ತಿರುವುದರಿಂದ ಅರ್ಹರಿಗೆ ತುಂಬಾ ಸರಳವಾಗಿ ಪೌತಿ ಖಾತೆ ಲಭ್ಯ ಆಗುತ್ತದೆ. ಆಗ ಜಮೀನಿನ ವಾರಸುದಾರಿಕೆಯ ಪಹಣಿ ಸಿಗುತ್ತದೆ.
ಇ-ಪೌತಿ ಆಂದೋಲನಕ್ಕಾಗಿಯೇ ಕಂದಾಯ ಇಲಾಖೆಯು ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ ವಂಶವೃಕ್ಷದ ಆಧಾರದ ಮೇಲೆ ವಾರಸುದಾರರ ಮಾಹಿತಿಯನ್ನು ಸಂಗ್ರಹಿಸಿ, ಆಧಾರ್ ಸಂಖ್ಯೆಯ ಮೂಲಕ ಒಟಿಪಿ ಪರಿಶೀಲನೆ ನಡೆಸುತ್ತದೆ. ಈ ಪ್ರಕ್ರಿಯೆಯು ಪೌತಿ ಖಾತೆ ನೋಂದಣಿಯಲ್ಲಿನ ನಡೆಯವಹುದಾದ ಅಕ್ರಮಕ್ಕೆ ಕಡಿವಾಣ ಹಾಕಲು ಮತ್ತು ರೈತರಿಗೆ ತಮ್ಮ ಆಸ್ತಿಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸರಳ ಮತ್ತು ಪಾರದರ್ಶಕ ವಿಧಾನವಾಗಿದೆ.












Click it and Unblock the Notifications