ಚಿನ್ನದ ಅಂಬಾರಿ ಅರಮನೆ ಆಸ್ತಿ, ಸರ್ಕಾರದ್ದಲ್ಲ: ಪೊಲೀಸರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಪ್ರಮೋದಾದೇವಿ ಒಡೆಯರ್
ಮೈಸೂರು ದಸರಾ ಎಂದರೆ ಇಡೀ ಜಗತ್ತಿಗೆ ಅಚ್ಚುಮೆಚ್ಚು. ನವರಾತ್ರಿಯ ಪ್ರಮುಖ ಆಕರ್ಷಣೆಯೇ ವಿಜಯದಶಮಿಯ ಜಂಬೂಸವಾರಿ ಹಾಗೂ ಅದರಲ್ಲಿ ರಾರಾಜಿಸುವ 750 ಕೆ.ಜಿ ತೂಕದ ಚಿನ್ನದ ಅಂಬಾರಿ. ಆದರೆ, ಈ ಬಾರಿಯ ದಸರಾ ಮಹೋತ್ಸವದಲ್ಲಿ (ಅಕ್ಟೋಬರ್ 21ರಂದು) ನಡೆದ ಕೆಲವು ಅಹಿತಕರ ಘಟನೆಗಳು ಮೈಸೂರು ರಾಜವಂಶಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ.
ಹೌದು, "ಚಿನ್ನದ ಅಂಬಾರಿ ಅರಮನೆಯ ಖಾಸಗಿ ಆಸ್ತಿಯೇ ಹೊರತು, ಅದು ಸರ್ಕಾರದ್ದಲ್ಲ" ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಅಧಿಕಾರಿಗಳ ವರ್ತನೆ ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ಜಂಬೂಸವಾರಿಗೆ ಅಂಬಾರಿಯನ್ನ ನೀಡುವ ಬಗ್ಗೆ ಮರುಪರಿಶೀಲನೆ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಸುದೀರ್ಘ ಪತ್ರದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಿಬ್ಬಂದಿ ಮೇಲೆ ದರ್ಪ ತೋರಿದ ಪೊಲೀಸರು
ಅಕ್ಟೋಬರ್ 21ರಂದು ನಡೆದ ವಿಜಯದಶಮಿ ಮೆರವಣಿಗೆಯ ವೇಳೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಅರಮನೆಯ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಜಂಬೂಸವಾರಿ ಮುಗಿದ ಬಳಿಕ ಅಂಬಾರಿಯನ್ನ ಸುರಕ್ಷಿತವಾಗಿ ವಾಪಸ್ ತರಲು ಪೊಲೀಸ್ ಆಯುಕ್ತರು ನೀಡಿದ್ದ ಅಧಿಕೃತ ಪಾಸ್ ಹೊಂದಿದ್ದ ಅರಮನೆಯ ಪ್ರತಿನಿಧಿಗಳನ್ನೇ ಪೊಲೀಸರು ತಡೆದಿದ್ದಾರೆ.
ಡಿಸಿಪಿ ಮತ್ತು ಇತರ ಪೊಲೀಸ್ ಸಿಬ್ಬಂದಿ ನಮ್ಮ ಪ್ರತಿನಿಧಿಗಳನ್ನು ತಳ್ಳಾಡಿ, ಅನುಚಿತವಾಗಿ ವರ್ತಿಸಿದ್ದಾರೆ. ಮೇಲಧಿಕಾರಿಗಳು ತಮ್ಮ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡುವ ಅಗತ್ಯವಿದೆ. ಇಂತಹ ದುರ್ವರ್ತನೆ ಹಾಗೂ ಕರ್ತವ್ಯಲೋಪವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರಮೋದಾದೇವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸೆಲ್ಫಿ ಕ್ರೇಜ್ ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿ
ಭದ್ರತಾ ನಿಯಮಗಳನ್ನ ಉಲ್ಲಂಘಿಸಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. "ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಚಿನ್ನದ ಅಂಬಾರಿಯ ಭದ್ರತಾ ವಲಯವನ್ನು ಪ್ರವೇಶಿಸಿ, ಮುಗಿಬಿದ್ದು ಸೆಲ್ಫಿ ಹಾಗೂ ಫೋಟೋಗಳನ್ನು ತೆಗೆಸಿಕೊಂಡಿರುವುದು ನಿಜಕ್ಕೂ ಆಘಾತಕಾರಿ. ಇದಲ್ಲದೆ, ರಾಜಮನೆತನಕ್ಕೆ ಮೀಸಲಾಗಿದ್ದ ಖಾಸಗಿ ಪಾರ್ಕಿಂಗ್ ಜಾಗವನ್ನು ಪೊಲೀಸರು ಅತಿಕ್ರಮಿಸಿ ತಮ್ಮ ವಾಹನಗಳನ್ನ ನಿಲ್ಲಿಸಿದ್ದರು. ಅಷ್ಟೇ ಅಲ್ಲದೆ, ಅವೈಜ್ಞಾನಿಕವಾಗಿ ಬ್ಯಾರಿಕೇಡ್ಗಳನ್ನ ಅಳವಡಿಸುವ ಮೂಲಕ ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಮತ್ತು ಪೂಜಾ ಕಾರ್ಯಗಳಿಗೆ ಅನಗತ್ಯ ಅಡಚಣೆ ಉಂಟುಮಾಡಿದರು" ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
45 ವರ್ಷಗಳಲ್ಲಿ ಇದೇ ಮೊದಲು: ಅರಣ್ಯ ಇಲಾಖೆ ವಿರುದ್ಧವೂ ಕಿಡಿ
ಅರಣ್ಯ ಇಲಾಖೆಯ ಸಮನ್ವಯದ ಕೊರತೆಯ ಬಗ್ಗೆಯೂ ಪ್ರಮೋದಾದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಚಿನ್ನದ ಅಂಬಾರಿಯನ್ನು ಯಾವ ಆನೆ ಹೊರಲಿದೆ ಎಂಬ ಮಾಹಿತಿಯನ್ನ ನಮಗೆ ಕೊನೆಯ ಕ್ಷಣದವರೆಗೂ ಗೌಪ್ಯವಾಗಿಡಲಾಗಿತ್ತು. ಜಂಬೂಸವಾರಿಗೆ ಕೇವಲ ಐದು ದಿನಗಳಿರುವಾಗ ನಾನೇ ಖುದ್ದಾಗಿ ಡಿಸಿಎಫ್ (ಉಪ ಅರಣ್ಯ ಸಂರಕ್ಷಣಾಧಿಕಾರಿ) ಪ್ರಭುಗೌಡ ಪಾಟೀಲ್ ಅವರನ್ನ ಸಂಪರ್ಕಿಸಿ ಮಾಹಿತಿ ಪಡೆಯಬೇಕಾಯಿತು. ಇದರಿಂದ ಯಾವುದೇ ಕಾರಣವಿಲ್ಲದೆ ಅರಮನೆಗೆ ಅನಗತ್ಯ ಒತ್ತಡ ಎದುರಾಯಿತು" ಎಂದು ವಿವರಿಸಿದ್ದಾರೆ.
ಸರ್ಕಾರಕ್ಕೆ ಪರ್ಯಾಯ ಮಾರ್ಗಸೂಚಿ
ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಅಂಬಾರಿ ನೀಡುವುದು ಕಷ್ಟ ಎಂಬ ಸ್ಪಷ್ಟ ಸಂದೇಶ ರವಾನಿಸಿರುವ ಅವರು, ಸರ್ಕಾರಕ್ಕೆ ಒಂದು ಪರ್ಯಾಯ ಸಲಹೆಯನ್ನೂ ನೀಡಿದ್ದಾರೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಅರಮನೆ ಆವರಣದಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ನಮ್ಮ ಪಾಡಿಗೆ ನಮ್ಮ ಪೂಜಾ ಕೈಂಕರ್ಯಗಳನ್ನ ನಡೆಸಲು ಅವಕಾಶ ಮಾಡಿಕೊಡಬೇಕು.
ಸರ್ಕಾರವು ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆಯನ್ನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನದಂದೇ ಅಥವಾ ತಮಗೆ ಅನುಕೂಲವಾದ ಬೇರೆ ದಿನದಂದು ನಡೆಸಿಕೊಳ್ಳಬಹುದು ಎಂದು ಅವರು ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಸೂಚಿಸಿದ್ದಾರೆ.


Click it and Unblock the Notifications
