Gold Price: ನಿಜವಾಗ್ಲೂ ನಾವು ತಾಮ್ರಕ್ಕೂ ಚಿನ್ನದ ಬೆಲೆ ಕೊಡ್ತೀವಾ?, ಗ್ರಾಹಕರು ಹೇಳುವುದೇನು?, ಇಲ್ಲಿದೆ ವಿವರ
ಚಿನ್ನದ ಬೆಲೆ ಗಗನಕ್ಕೇರುತ್ತಿದೆ.. ಚಿನ್ನ ಖರೀದಿ ಮಾಡುವ ಗ್ರಾಹಕರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿದೆ. ನಿತ್ಯದ ಬದುಕಿಗೆ ಚಿನ್ನ ಅನಿವಾರ್ಯ ಅಲ್ಲದಿರಬಹುದು. ಆದರೆ ಮಗಳನ್ನು ಮದುವೆ ಮಾಡಿಕೊಡುವ ವೇಳೆ ಹೆಣ್ಣು ಹೆತ್ತವರು ಅನಿವಾರ್ಯವಾಗಿ ಚಿನ್ನಾಭರಣಗಳನ್ನು ನೀಡಲೇ ಬೇಕಾಗಿರುವುದರಿಂದ ಸಾಲ ಮಾಡಿಯಾದರೂ ಚಿನ್ನ ಖರೀದಿಸಲೇಬೇಕಾಗಿದೆ.
ಇವತ್ತು ನಿಮ್ಮ ಮಗಳಿಗೆ ಎಷ್ಟು ಗ್ರಾಂನ ಚಿನ್ನದ ಒಡವೆಗಳನ್ನು ಹಾಕ್ತೀರಾ? ಎಂಬ ಪ್ರಶ್ನೆಯಿಂದಲೇ ಮದುವೆ ಮಾತುಕತೆಗಳು ಶುರುವಾಗುವುದರಿಂದಾಗಿ ಕಷ್ಟನೋ ಸುಖನೋ? ಬೆಲೆ ಕಡಿಮೆ ಇರಲಿ ಹೆಚ್ಚಿರಲಿ ಚಿನ್ನಾಭರಣದ ಅಂಗಡಿಗೆ ಹೆಜ್ಜೆ ಹಾಕಲೇ ಬೇಕಾಗಿದೆ. ಹೀಗಾಗಿ ಚಿನ್ನದ ವ್ಯಾಪಾರಿಗಳು ಶ್ರೀಮಂತರಾಗುತ್ತಿದ್ದರೆ, ಇತ್ತ ಮಾನ, ಮರ್ಯಾದೆ, ಅನಿವಾರ್ಯತೆಗೆ ಸಿಕ್ಕಿದ ಜನ ಸಾಮಾನ್ಯರು, ಬಡವರು ಶಕ್ತಿ ಮೀರಿ ಒಡವೆ ಖರೀದಿ ಮಾಡಿ ಮಗಳು, ಅಳಿಯನಿಗೆ ನೀಡಿ ಸಾಲದಲ್ಲಿ ದಿನ ಕಳೆಯುವಂತಾಗಿದೆ.

ಇಷ್ಟಕ್ಕೂ ಚಿನ್ನದ ಒಡವೆಗಳಿಲ್ಲದೆ ಮದುವೆ ಸಾಧ್ಯವಾಗುವುದಿಲ್ಲವೆ? ಅಥವಾ ಗಂಡಿನ ಮನೆಯವರ ಬೇಡಿಕೆಗೆ ಮಣಿದು ಚಿನ್ನಾಭರಣ ನೀಡುವ ಅನಿವಾರ್ಯತೆಯಿಂದ ಹೊರಬರಲು ಸಾಧ್ಯವಿಲ್ಲವೆ? ಈ ಪ್ರಶ್ನೆಗಳಿಗೆ ಉತ್ತರ ಕಷ್ಟವೇ. ಅದು ಏನೇ ಇರಲಿ ಇಷ್ಟಕ್ಕೂ ನಾವು ಖರೀದಿಸುವ ಚಿನ್ನ ನಿಜಕ್ಕೂ ಅಪರಂಜಿನಾ ಎಂಬ ಪ್ರಶ್ನೆಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ್ಗೆ ಚರ್ಚೆಗೆ ಬರುತ್ತಿರುತ್ತವೆ.
ಎಂಟು ಗ್ರಾಂ(ಒಂದು ಪವನ್) ಚಿನ್ನದ ಸರ ತಯಾರಿಸಲು 1.5 ಗ್ರಾಂನಷ್ಟು ತಾಮ್ರ ಬೇಕಾಗುತ್ತದೆಯಂತೆ. ಹಾಗಾದರೆ ನಮ್ಮ ಚಿನ್ನದ ಸರದಲ್ಲಿ ನಿಜವಾಗಿಯೂ ಇರುವ ಚಿನ್ನದ ಅಂಶ 6.5 ಗ್ರಾಂ ಎಂದಾಯಿತು. ಅಂದರೆ ನಾವು 1.5 ಗ್ರಾಂ ತಾಮ್ರಕ್ಕೆ ಚಿನ್ನದ ಬೆಲೆಯನ್ನೇ ನೀಡುತ್ತಿದ್ದೇವೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ಹೀಗಾಗಿಯೇ ದೊಡ್ಡ ದೊಡ್ಡ ಅಂಗಡಿಯವರು ನಮ್ಮಲ್ಲಿ ಚಿನ್ನಕ್ಕೆ ಕೂಲಿ, ವೇಸ್ಟೇಜ್ ಇಲ್ಲ ಎನ್ನುತ್ತಾ ಗ್ರಾಹಕರನ್ನು ಮರಳು ಮಾಡುತ್ತಿವೆ. ಆ ಮೂಲಕವೇ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂಬುದು ಕೆಲವರ ಆರೋಪವಾಗಿದೆ.
ಈ ಕುರಿತಂತೆ ಕೆಲವರು ಒಂದಷ್ಟು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅವರು ಹೇಳುವಂತೆ 8 ಗ್ರಾಂನ ಚಿನ್ನದ ಸರಕ್ಕೆ ತಾಮ್ರವನ್ನು ಸೇರಿಸುವುದರ ಮೂಲಕ ಆಭರಣವನ್ನು ತಯಾರಿಸಲಾಗುತ್ತದೆ. ಅಂದರೆ 8 ಗ್ರಾಂ ಚಿನ್ನದ ಸರ ತಯಾರಿಸಲು 1.5 ಗ್ರಾಂ ತಾಮ್ರ ಮತ್ತು 6.5 ಗ್ರಾಂ ಚಿನ್ನವನ್ನು ಸೇರಿಸಲಾಗುತ್ತದೆ. ಆ ಮೂಲಕ ಚಿನ್ನದ ಸರ ತಯಾರಾಗುತ್ತದೆ.
ಇಲ್ಲಿ ಒಬ್ಬ ಗ್ರಾಹಕ ಚಿನ್ನವನ್ನು ಖರೀದಿಸುವಾಗ ಆತನಿಗೆ 6.5 ಚಿನ್ನ + 1.5 ತಾಮ್ರ ಒಟ್ಟಿಗೆ 8 ಗ್ರಾಂ ಚಿನ್ನವನ್ನು ಬಿಲ್ಲಿನಲ್ಲಿ ಹಾಕಲಾಗುತ್ತದೆ. ಜೊತೆಗೆ ತಾವು ಸೇರಿಸಿ ತಾಮ್ರಕ್ಕೆ ಚಿನ್ನದ ಬೆಲೆಯನ್ನೇ ಪಡೆಯಲಾಗುತ್ತದೆ. ಬಹಳಷ್ಟು ಮಾರಾಟಗಾರರು ಇದನ್ನು (1.5 ಗ್ರಾಂ ತಾಮ್ರವನ್ನು) ವೇಸ್ಟೇಜ್ ಎಂದು ತೋರಿಸುವುದರ ಮೂಲಕ ಹಣ ಪಡೆಯುತ್ತಾರೆ.
ಚಿನ್ನದ ವಿಚಾರದಲ್ಲಿ ಹೆಚ್ಚಿನವರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಹೀಗಾಗಿ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗುವುದರೊಂದಿಗೆ ಚಿನ್ನ ಖರೀದಿಯಲ್ಲಿ ಗ್ರಾಹಕನಿಗೆ ಆಗುವ ಒಂದಷ್ಟು ನಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ತಜ್ಞರು ಮಾಡುವುದರೊಂದಿಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕಾಗಿದೆ. ಚಿನ್ನವನ್ನು ಹಣವಿದ್ದವರು ಮಾತ್ರ ಖರೀದಿಸುತ್ತಿಲ್ಲ. ಬಡವರೂ ಖರೀದಿಸುತ್ತಾರೆ. ಹೀಗಿರುವಾಗ ಗಗನಕ್ಕೇರುತ್ತಿರುವ ಬೆಲೆಯ ಬಿಸಿಯಲ್ಲಿ ಸಣ್ಣ ಸಣ್ಣ ಉಳಿತಾಯ ಕೂಡ ತಂಪು ನೀಡಬಹುದಲ್ಲವೆ?
ಈ ಬಗ್ಗೆ ಒಂದು ಚರ್ಚೆಯಾಗಬೇಕು. ನಿಜವಾಗಲೂ ಚಿನ್ನದ ಖರೀದಿ ವಿಚಾರದಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆಯಾ? ಈ ಬಗ್ಗೆ ತಿಳಿದವರು ಜನರ ಮುಂದೆ ಇಡಬೇಕಾಗುತ್ತದೆ. ಇಲ್ಲದೆ ಹೋದರೆ ಸುಮ್ಮನೆ ಅಂತೆಕಂತೆಗಳ ಸುದ್ದಿಗಳು ಹರಿದಾಡಿ ಅಸಲಿ ವಿಷಯಗಳು ಗೌಣವಾಗುತ್ತವೆ.












Click it and Unblock the Notifications