ನಟಿ ಪಂಚಮಿ 2ನೇ ಪತ್ನಿ, ಕೌಟುಂಬಿಕ ಆಸ್ತಿ ವಿವಾದದಲ್ಲಿ ಶಾಸಕ ಅನ್ಸಾರಿ
ಗಂಗಾವತಿ, ಜೂನ್ 10: ಕೊಪ್ಪಳದ ಗಂಗಾವತಿಯ ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಕೌಟುಂಬಿಕ ಆಸ್ತಿ ವಿವಾದದಲ್ಲಿ ಸಿಲುಕಿದ್ದಾರೆ.
ಅನ್ಸಾರಿ ತಮ್ಮ ಸಹೋದರರಿಗೆ ಸೇರಬೇಕಾದ ಆಸ್ತಿಯನ್ನು ತಮ್ಮ ಎರಡನೇ ಪತ್ನಿಗೆ ನೀಡಿದ್ದಾರೆ ಎಂದು ಅವರ ಸಹೋದರರು ಆರೋಪಿಸಿದ್ದಾರೆ ಎನ್ನಲಾಗಿದೆ.
ನಮ್ಮ ತಂದೆ ನಿಧನರಾದ ನಂತರ ತಂದೆಯ ಆಸ್ತಿಯಲ್ಲಿ ಮೂರು ಸಹೋದರರಿಗೆ ಆಸ್ತಿ ಹಂಚಿಕೆಯಾಗಬೇಕಿತ್ತು. ಆದರೆ ಅನ್ಸಾರಿ ಅವರು ಖಾಲಿ ಪತ್ರದ ಮೇಲೆ ಸಹಿ ಪಡೆದುಕೊಂಡು ನಮ್ಮ ಪಾಲಿನ ಆಸ್ತಿಯನ್ನು ಪಂಚಮಿ ಹೆಸರಿಗೆ ಬರೆದಿದ್ದಾರೆ.ಜತೆಗೆ 2015ರಲ್ಲಿ ನಟಿ ಪಂಚಮಿ ಹೆಸರಿನಲ್ಲಿ ವೈನ್ ಶಾಪ್ ಕೂಡಾ ಮಾಡಿದ್ದಾಗಿ ಸಹೋದರ ಅಜರ್ ಅನ್ಸಾರಿ ದೂರಿದ್ದಾರೆ ಎನ್ನಲಾಗಿದೆ.

ಪಂಚಮಿ ಜತೆ ಎರಡನೇ ಮದುವೆ
ಇಕ್ಬಾಲ್ ಅನ್ಸಾರಿ ಕನ್ನಡ ನಟಿ ಪಂಚಮಿಯನ್ನು ಎರಡನೇ ವಿವಾಹವಾಗಿದ್ದಾರೆ. ಒಂದು ಕಾಲದಲ್ಲಿ ಪಂಚಮಿ ಸಿನಿಮಾ, ಧಾರವಾಹಿಗಳ ಮೂಲಕವೂ ಜನಪ್ರಿಯರಾಗಿದ್ದ ನಟಿ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ತಮ್ಮ ಎರಡನೇ ಪತ್ನಿ ಪಂಚಮಿಗೆ ಅನ್ಸಾರಿ ಮನೆಯನ್ನೂ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿರುವ ಅನ್ಸಾರಿ ತಾಯಿ ಅಹ್ಮದಿ ಬೇಗಂ, "ನನ್ನ ಪತಿ ಎಲ್ಲಾ ಮಕ್ಕಳಿಗೂ ಸಮಾನವಾಗಿ ಆಸ್ತಿ ಹಂಚಿಕೆ ಮಾಡಿದ್ದಾರೆ. ಇಕ್ಬಾಲ್ ಅನ್ಸಾರಿ ಅವರ ಸಹೋದದರು ದಾರಿ ತಪ್ಪಿ ಆಸ್ತಿ ಕಳೆದುಕೊಂಡಿದ್ದಾರೆ ಅಷ್ಟೆ. ಪಂಚಮಿಯನ್ನು ಎಲ್ಲರ ಒಪ್ಪಿಗೆಯೊಂದಿಗೇ ಅನ್ಸಾರಿ ಸಂಪ್ರದಾಯಸ್ಥವಾಗಿ ಮದುವೆಯಾಗಿದ್ದಾರೆ. ನಮ್ಮ ಧರ್ಮದಲ್ಲಿ ನಾಲ್ಕು ಮದುವೆಯೂ ಆಗಬಹುದು," ಎಂದು ಹೇಳಿದ್ದಾರೆ.
ಇನ್ನು ಪಂಚಮಿಗೆ ಪಿತ್ರಾರ್ಜಿತ ಆಸ್ತಿಯನ್ನು ಕೊಟ್ಟಿಲ್ಲ. ಅವರು ಗಳಿಸಿದ ಆಸ್ತಿಯನ್ನು ಕೊಟ್ಟಿರುವುದಾಗಿ ಅಹ್ಮದಿ ಬೇಗಂ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications