Breaking; ಡಿ.28ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ, ಮಾರ್ಗಸೂಚಿ
ಬೆಂಗಳೂರು, ಡಿಸೆಂಬರ್ 26; ಕರ್ನಾಟಕದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಓಮಿಕ್ರಾನ್ ಹರಡುವಿಕೆ ತಡೆಯಲು ಕರ್ನಾಟಕ ಸರ್ಕಾರ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಡಿಸೆಂಬರ್ 28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, "ರಾಜ್ಯದಲ್ಲಿ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಡಿಸೆಂಬರ್ 28 ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ" ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಆಚರಿಸುವಂತಿಲ್ಲ. ಸಭೆ-ಸಮಾರಂಭಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಗಲಿನಲ್ಲೂ ಸಹ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ.
ಪಬ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಇರುವ 50:50 ನಿಯಮ ಸಿನಿಮಾ ಥಿಯೇಟರ್‌ಗಳಿಗೆ ಅನ್ವಯವಾಗುವುದಿಲ್ಲ.
ನೈಟ್ ಕರ್ಫ್ಯೂ ಮಾರ್ಗಸೂಚಿ
* ನೈಟ್ ಕರ್ಫ್ಯೂ ಅವಧಿಯಲ್ಲಿ ರಾತ್ರಿ 10 ರಿಂದ 5 ಗಂಟೆಯ ತನಕ ಜನರ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ರೋಗಿಗಳು, ರೋಗಿಗಳ ಅವಲಂಬಿತರಿಗೆ ತುರ್ತು ಸಂದರ್ಭದಲ್ಲಿ ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ.
* ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಣೆ ಮಾಡುವ ಎಲ್ಲಾ ಕಂಪನಿಗಳು ನೈಟ್ ಕರ್ಫ್ಯೂ ಅವಧಿಯಲ್ಲಿ ಕೆಲಸ ನಿರ್ವಹಣೆ ಮಾಡಬಹುದಾಗಿದೆ. ಇಂತಹ ಕಂಪನಿಗಳನ್ನು ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು ಐಡಿ ಕಾರ್ಡ್ ತೋರಿಸಿ ಸಂಚಾರ ನಡೆಸಬೇಕು.
* ನೈಟ್ ಕರ್ಫ್ಯೂ ಅವಧಿಯಲ್ಲಿ ಬಸ್, ರೈಲು, ಮೆಟ್ರೋ ರೈಲು, ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ಟ್ಯಾಕ್ಸಿ ಸೇರಿದಂತೆ ಇತರ ವಾಹನಗಳಲ್ಲಿ ಪ್ರಯಾಣ ಮಾಡಬಹುದು. ಆದರೆ ಟಿಕೆಟ್ ತೋರಿಸಬೇಕು.
ಮಾರ್ಗಸೂಚಿ ವಿವರಗಳಿಗೆ ಪಿಡಿಎಫ್ ಕ್ಲಿಕ್ ಮಾಡಿ












Click it and Unblock the Notifications