ಉಚಿತ ಬಸ್ ಸೇವೆ ಎಫೆಕ್ಟ್: ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣಿಸಿದ್ದು ಎಷ್ಟು ಜನ?
ಬೆಂಗಳೂರು: ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಸೇವೆ ಜಾರಿಗೆ ತಂದಿದೆ. ಹೀಗೆ ಯೋಜನೆ ಜಾರಿಗೆ ಬಂದ ಬಳಿಕ ಕೋಟ್ಯಂತರ ಮಹಿಳೆಯರು ಯೋಜನೆಯನ್ನ ಸದುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಉಚಿತ ಬಸ್ ಸೇವೆ ಎಫೆಕ್ಟ್‌ನಿಂದ ಸರ್ಕಾರಿ ಸಾರಿಗೆಯಲ್ಲಿ ಓಡಾಡುವವರ ಸಂಖ್ಯೆ ಹೊಸ ಇತಿಹಾಸ ನಿರ್ಮಿಸಿದೆ!
ಹೌದು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗಾಗಿ ಉಚಿತ ಬಸ್ ಸೇವೆ ಜಾರಿಗೆ ತಂದು ಇನ್ನೂ 10 ದಿನ ಕೂಡ ಕಳೆದಿಲ್ಲ. ಆಗಲೇ ಸರ್ಕಾರಿ ಸಾರಿಗೆಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣ ಶುರು ಆದ ನಂತರ ರಾಜ್ಯದಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳ ಪ್ರಯಾಣಿಕರ ಸಂಖ್ಯೆ 35 ರಿಂದ 40 ಲಕ್ಷ ಹೆಚ್ಚಳವಾಗಿದೆ ಅಂತೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬಿಎಂಟಿಸಿ ಸೇರಿದಂತೆ ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಬಸ್‌ಗಳೂ ಈಗ ತುಂಬಿ ತುಳುಕುತ್ತಿವೆ (Free Bus).

ದೇವಸ್ಥಾನಕ್ಕೆ ಮಹಿಳೆಯರ ಸಾಗರ!
ದುಡಿಯುವ ವರ್ಗಕ್ಕೆ ಅಂದರೆ ಮಹಿಳಾ ಕಾರ್ಮಿಕರಿಗೆ ಸಹಾಯ ಆಗಲಿ ಎಂದು ಯೋಜನೆ ಜಾರಿಗೆ ಬಂದಿದೆ. ಇನ್ನು ಶಕ್ತಿ ಯೋಜನೆ ಜಾರಿಯಾಗುವ ಮುನ್ನ 4 ನಿಗಮಗಳಲ್ಲಿ ಪ್ರತಿದಿನವು ಸರಾಸರಿ 75ರಿಂದ 80 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ ಈ ಯೋಜನೆ ಜಾರಿಯಾದ ಬಳಿಕ 4 ನಿಗಮಗಳಲ್ಲಿ1.16 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ನಿತ್ಯ 35ರಿಂದ 40 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಂಕಿ ಅಂಶಗಳು ಮಾಹಿತಿ ನೀಡುತ್ತಿವೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರ ಪ್ರಮಾಣ ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಹಿಳೆಯರು ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ತಮ್ಮ ನಂಬಿಕೆಯ ದೇವರಿಗೆ ನಮಿಸುತ್ತಿದ್ದಾರೆ.
ರೈಲು ಆದಾಯಕ್ಕೆ ಬಿತ್ತು ಪೆಟ್ಟು!
ಅಂದಹಾಗೆ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಕಾಣಬಹುದಾಗಿದೆ. ಅದ್ರಲ್ಲೂ ಶಕ್ತಿ ಯೋಜನೆಯಿಂದಾಗಿ ರೈಲು ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆಯಂತೆ. ರಾಜ್ಯದಲ್ಲಿ ಉಚಿತ ಬಸ್ ಸೇವೆ ಶುರು ಆದ ಬಳಿಕ ರಾಜ್ಯದಲ್ಲಿ ಶೇಕಡಾ 15ರಿಂದ 20ರಷ್ಟು ರೈಲು ಪ್ರಯಾಣಿಕರಲ್ಲಿ ವ್ಯತ್ಯಾಸವನ್ನ ಕಾಣಬಹುದಾಗಿದೆ. ಈ ಪೈಕಿ ಮೆಮು ಮತ್ತು ಡೆಮು ರೈಲುಗಳಲ್ಲೇ ಪ್ರಯಾಣಿಕರು ಕಡಿಮೆ ಆಗಿದ್ದು ಹೆಚ್ಚು. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 2.35 ಲಕ್ಷ ಮಂದಿ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದರು. ಆ ಸಂಖ್ಯೆ 2 ಲಕ್ಷಕ್ಕೆ ಇಳಿದಿದೆ ಎನ್ನಲಾಗಿದೆ. ಈ ಮೂಲಕ ರಾಜ್ಯದಲ್ಲಿ ಶಕ್ತಿ ಯೋಜನೆ ಭಾರಿ ಬದಲಾವಣೆಗೆ ಕಾರಣವಾಗಿದೆ.

ನಿನ್ನೆ ಪ್ರಯಾಣ ಮಾಡಿದ್ದು 1 ಕೋಟಿ ಜನ!
ಅಂದಹಾಗೆ ನಿನ್ನೆ ಒಂದೇ ದಿನ ಕರ್ನಾಟಕದ 4 ಸಾರಿಗೆ ನಿಗಮಗಳು ಸೇರಿ 1,06,36,208 ಜನರು ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ಪೈಕಿ 54,30,150 ಮಹಿಳೆಯರು ಕೂಡ ಸೇರಿದ್ದಾರೆ. ಈ ಮೂಲಕ 12,88,81,618 ವೆಚ್ಚವನ್ನ ಮಹಿಳೆಯರ ಉಚಿತ ಬಸ್ ಸೇವೆಗಾಗಿ ರಾಜ್ಯ ಸರ್ಕಾರ ಭರಿಸಲಿದೆ. ಅತ್ತ ಬಿಜೆಪಿ, ಬಿಟ್ಟಿ ಯೋಜನೆ ಮೂಲಕ ರಾಜ್ಯವನ್ನ ಕಾಂಗ್ರೆಸ್ ದಿವಾಳಿ ಮಾಡುತ್ತಿದೆ ಎಂದು ಆರೋಪಿಸುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಉಚಿತ ಯೋಜನೆಗಳ ಮೂಲಕ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ಹೇಳುತ್ತಿದೆ. ಈ ಎರಡೂ ಪಕ್ಷಗಳ ಫೈಟ್ ನಡುವೆ ಮಹಿಳೆಯರು ಮಾತ್ರ ಉಚಿತ ಬಸ್ ಸೇವೆಯನ್ನ ಭಾರಿ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿರುವುದು ಅಂಕಿ-ಅಂಶಗಳ ಮೂಲಕ ಗೊತ್ತಾಗುತ್ತಿದೆ.












Click it and Unblock the Notifications