ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಜೆಡಿಎಸ್ ಸೇರ್ಪಡೆ
ಬೆಂಗಳೂರು, ಜನವರಿ 25 : ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಗುರುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಗುರುವಾರ ಜೆಪಿ ಭವನದಲ್ಲಿ ಬಾಬಾಗೌಡ ಪಾಟೀಲ್ , ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ್ ಸೇರಿದಂತೆ ಒಟ್ಟು 20 ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮುಖಂಡರು ಜೆಡಿಎಸ್ ಗೆ ಸೇರ್ಪಡೆಗೊಂಡರು.
ಮುಂಬರುವ ವಿಧಾನಸಭಾ ಚುನಾವಣ125 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಇವರೆಲ್ಲರೂ ಪಕ್ಷಕ್ಕೆ ಭದ್ರ ಬುನಾದಿ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ತಂತ್ರಗಾರಿಕೆ ಮೀರಿ ಜೆಡಿಎಸ್ ಅಭ್ಯರ್ಥಿಗಳು ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಕಾರ್ಯಾಗಾರ ನಡೆಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿಯಿಂದ ಹಲವು ಮುಖಂಡರು ಜೆಡಿಎಸ್ ಸೇರಿದ್ದಾರೆ, ಬೆಳಗಾವಿ ಜಿಲ್ಲೆಯಲ್ಲಿ ಮುಂದಿನ ತಿಂಗಳು ಬಹಳಷ್ಟು ಬದಲಾವಣೆಯಾಗಲಿದೆ. ಎರಡು ರಾಜಕೀಯ ಪಕ್ಷಗಳ ಕೃಷಿವಿರೋಧಿ ನೀತಿಯಿಂದ ಬೆಳಗಾವಿ ಭಾಗದ ಜನ ಬೇಸತ್ತಿದ್ದಾರೆ. ಇವತ್ತು ಸೇರ್ಪಡೆಗೊಂಡ ಮುಖಂಡರು ಯಾವುದೇ ಸ್ಥಾನಮಾನಕ್ಕಾಗಿ ಪಕ್ಷ ಸೇರಿಲ್ಲ. ಎರಡನೇ ಹಂತದ ನಾಯಕರು ಪಕ್ಷ ಸೇರಿದ್ದು, ಜೆಡಿಎಸ್ ನ್ನು ಇನ್ನಷ್ಟು ಬಲಪಡಿಸಲಿದ್ದಾರೆ ಎಂದರು.

ಶೀಘ್ರವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ. ನಮ್ಮ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ನಿಲ್ಲಿಸಿ ನಾಡಿನ ಸಂಪತ್ತು ರಕ್ಷಣೆ ಬಗ್ಗೆ ಪ್ರಮಾಣ ಮಾಡಿಸುತ್ತೇನೆ. ಈ ಹಿಂದೆ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತು ಲೂಟಿ ಮಾಡಿವೆ ಎಂದರು.
ಸಚಿವ ಎ ಮಂಜುಗೆ ನಾಗರಿಕತೆ ಇದ್ದರೆ ದೇವೇಗೌಡರ ಬಗ್ಗೆ ಆ ರೀತಿ ಮಾತನಾಡುತ್ತಿರಲಿಲ್ಲ. ಅವರ ಭಾಷೆ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.. ನಾಗರಿಕತೆನೇ ಅವರಿಗಿಲ್ಲ. ಈ ಚುನಾವಣೆಯಲ್ಲಿ ಗೊತ್ತಾಗುತ್ತೆ ಏನೂ ಎಂದು ಬಂದ್ ಮೂಲಕ ಏನು ಸಾಧನೆ ಆಗುತ್ತೆ ಅನ್ನೋದನ್ನು ಬಂದ್ ಕರೆದವರು ಹೇಳಬೇಕು ಎಂದು ಹೇಳಿದರು.
ಒಂದು ರಾಷ್ಟ್ರೀಯ ಪಕ್ಷ ಮೋದಿ ಬರುತ್ತಾರೆ ಎಂದು ಮತ್ತೊಂದು ಪಕ್ಷ ರಾಹುಲ್ ಗಾಂಧಿ ಬರುತ್ತಾರೆ ಎಂದು ಹೇಳುತ್ತಾರೆ.ಈ ಎರಡು ಪಕ್ಷಗಳಿಗೂ ರಾಜ್ಯದ ಹಿತ ಬೇಕಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮಾತ್ರ ಸತ್ಯ ಹೇಳೋದು, ಮಿಕ್ಕವರೆಲ್ಲಾ ಸುಳ್ಳು ಹೇಳೋರು ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.











Click it and Unblock the Notifications