ಕರೆಂಟ್ ಬಿಲ್, ಫ್ಲೈಟ್ ಟಿಕೆಟ್, ಡೀಸೆಲ್‌ಗೂ ವಾಲ್ಮೀಕಿ ನಿಗಮದ ಹಣ ಬಳಕೆ: ಏನಿದು ಆರೋಪ?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಬಿ.ನಾಗೇಂದ್ರ ಬಂಧನವಾಗಿ, ಇಂದು ಜಾಮೀನಿನ ಮೇಲೆ ಬಿಡುಗಡೆಯೂ ಆಗಿದೆ. ಇನ್ನು ಈ ಹಗರಣದ ಚಾರ್ಜ್‌ಶೀಟ್‌ನಲ್ಲಿ ಕೆಲ ಆಘಾತಕಾರಿ ಅಂಶಗಳಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮದ ಹಣವನ್ನ ಮಾಜಿ ಸಚಿವ ಬಿ.ನಾಗೇಂದ್ರ ಅವರು ತಮ್ಮ ಮನೆಯ ಕರೆಂಟ್ ಬಿಲ್ ಕಟ್ಟಲು, ವಾಹನಗಳಿಗೆ ಡೀಸೆಲ್ ತುಂಬಿಸಲು, ಕುಟುಂಬ ಸದಸ್ಯರಿಗೆ ವಿಮಾನ ಟಿಕೆಟ್ ಖರೀದಿಸಲು, ಮನೆ ಕೆಲಸದವರಿಗೆ ಸಂಬಳ ನೀಡಲು ಸಹ ಬಳಸಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದ್ದು, ಇವುಗಳಿಗೆ ಸಾಕ್ಷಿ ಸಹ ಲಭ್ಯವಾಗಿದೆ ಎಂದು ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ ಹಂಚಲು ಬಳಕೆಯಾಗಿದೆ ಎಂಬ ಆಘಾತಕಾರಿ ವಿಷಯ ಇ.ಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಹಿರಂಗವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ದಲಿತರಿಗೆ ಸೇರಬೇಕಾದ ಹಣದಲ್ಲಿ ಇಷ್ಟು ದೊಡ್ಡ ಭ್ರಷ್ಟಾಚಾರ ನಡೆದಿರುವಾಗ ಆತ್ಮಸಾಕ್ಷಿ ಇರುವ ಯಾವ ಮುಖ್ಯಮಂತ್ರಿಯೂ ಒಂದು ಕ್ಷಣವೂ ತಮ್ಮ ಸ್ಥಾನದಲ್ಲಿ ಮುಂದುವರಿಯುವುದಿಲ್ಲ. ಆದರೆ ಆತ್ಮಸಾಕ್ಷಿಗಿಂತ ಅಧಿಕಾರವೇ ದೊಡ್ಡದು, ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ದೊಡ್ಡದು, ಅಂತಃಕರಣಕ್ಕಿಂತ ಅಹಂಕಾರವೇ ದೊಡ್ಡದು ಎನ್ನುವ ಮನಸ್ಥಿತಿ ಇರುವವರು ಈಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಅದೇ ಕನ್ನಡಿಗರ ದೌರ್ಭಾಗ್ಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

ಹಗರಣದಲ್ಲಿ ಜೈಲು ಸೇರಿದ್ದ ಕಾಂಗ್ರೆಸ್ ಮಾಜಿ ಸಚಿವ ಬಿ.ನಾಗೇಂದ್ರ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ನಾಗೇಂದ್ರ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮೊನ್ನೆ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಪಡೆದಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 89.63 ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಇದರ ಪೂರ್ಣ ಮೊತ್ತವನ್ನು ವಾಪಸ್ ಪಡೆಯಲಾಗುತ್ತಿದೆ ಎಂದಿದ್ದಾರೆ.
ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು ಸತ್ಯ. ಆದರೂ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನದಲ್ಲಿ ಯಾವುದೇ ಕಡಿತ ಮಾಡಲ್ಲ ಎಂದು ಸಿಎಂ ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರದ ಹಿನ್ನೆಲೆಯಲ್ಲಿ ನಿಗಮಕ್ಕೆ ಅನುದಾನದ ಕೊರತೆಯಾಗದಂತೆ ನೋಡಿಕೊಳ್ಳುವುದು, ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವ ಬಗ್ಗೆಯೂ ಗಂಭೀರವಾಗಿ ಪರಿಗಣಿಸಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಅವ್ಯವಹಾರವಾಗಿರುವ ಪೈಕಿ 5 ಕೋಟಿ ರೂಪಾಯಿಗಳನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications