K.Shivaram: ಕೆ.ಶಿವರಾಮ್ ಪತ್ನಿ ಇಂದು ಕಾಂಗ್ರೆಸ್ಗೆ ಸೇರ್ಪಡೆ
ಬೆಂಗಳೂರು, ಏಪ್ರಿಲ್ 08: ಇತ್ತೀಚಿಗಷ್ಟೆ ನಿಧನರಾದ ನಟ, ರಾಜಕಾರಣಿ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರ ಪತ್ನಿ ವಾಣಿ ಕೆ.ಶಿವರಾಮ್ ಇಂದು(ಏಪ್ರಿಲ್ 08) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಪತಿ ಗುರುತಿಸಿಕೊಂಡಿದ್ದ ಬಿಜೆಪಿ ಪಕ್ಷದ ಬಗ್ಗೆ ಅಸಮಾಧಾನಗೊಂಡಿರುವ ವಾಣಿ ಕೆ.ಶಿವರಾಮ್ ಅವರು ಇಂದು ಅಧೀಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೋಮವಾರ ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರ ಪತ್ನಿ ವಾಣಿ ಕೆ.ಶಿವರಾಮ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಇತ್ತೀಚೆಗೆ ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು ಅನಾರೋಗ್ಯದಿಂದ ನಿಧನರಾದರು. ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದ ಅವರ ಹಾದಿಯಲ್ಲೇ ನಡೆಯಲು ಪತ್ನಿ ವಾಣಿ ಕೆ.ಶಿವರಾಮ್ ಮುಂದಾಗಿದ್ದಾರೆ. ಪತಿ ನಂತರ ಪತ್ನಿ ವಾಣಿ ಶಿವರಾಮ್ ಜನಸೇವೆ ಮಾಡುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದರು.
ದಿವಂಗತ ಶಿವರಾಮ್ ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕಳೆದ 6-7 ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ತಮ್ಮದೇ ಆದ ಸಂಘಟನೆ ಮಾಡಿದ್ದರು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಇಹಲೋಕ ತ್ಯಜಿಸಿದರು. ಅವರ ಅಗಲಿಕೆಯ ನಂತರ ಬಿಜೆಪಿ ಪಕ್ಷದ ಬಗ್ಗೆ ಅಸಮಾಧಾನಗೊಂಡಿರುವ ವಾಣಿ ಕೆ.ಶಿವರಾಮ್ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ವಾಣಿ ಕೆ.ಶಿವರಾಮ್ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ಬಳಿಕ ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications