ಕರ್ನಾಟಕ ಪ್ರವಾಹ: ಕೇಂದ್ರದ ಮಾರ್ಗಸೂಚಿಯಂತೆ ಪರಿಹಾರ ನೀಡಲು ಸಿಎಂ ಮನವಿ
ಬೆಂಗಳೂರು, ಸೆಪ್ಟೆಂಬರ್ 07: ರಾಜ್ಯ ಸರ್ಕಾರವು ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಮಳೆ ನೆರೆ ಹಾನಿಯ ಅಂದಾಜುಪಟ್ಟಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿಯ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಕರ್ನಾಟಕದಲ್ಲಿ ನಿರಂತರ ಭಾರಿ ಮಳೆಗೆ ಉಂಟಾದ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ತಂಡದ ಸದಸ್ಯರಿಗೆ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಈ ಕುರಿತು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್ ಕುಮಾರ್ ನೇತೃತ್ವದ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿದರು. ರಾಜ್ಯದಲ್ಲಿ ಪ್ರವಾಹದಿಂದ ಜುಲೈ, ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸಂಭವಿಸಿದ ಹಾನಿಯ ಕುರಿತು ಅವರು ಚರ್ಚಿಸಿದರು.
Recommended Video
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಅಧ್ಯಯನ ತಂಡವು ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಇದರೊಂದಿಗೆ ಅತಿ ಹೆಚ್ಚು ಭೂಕುಸಿತ, ಸಮುದ್ರ ಕೊರೆತ ಸಂಭವಿಸಿರುವ ಕೊಡಗು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೂ ಭೇಟಿ ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಬೆಂಗಳೂರು, ರಾಮನಗರ ಪ್ರವಾಹ ಅವಲೋಕಿಸಲು ಮನವಿ
ಬೆಂಗಳೂರು ನಗರ, ನೆರೆಯ ಮಂಡ್ಯ, ರಾಮನಗರ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಯನ್ನು ಸಹ ಅವಲೋಕಿಸುವಂತೆ ತಿಳಿಸಲಾಯಿತು. ಈ ವರ್ಷ ಭಾರಿ ಸಂಖ್ಯೆಯಲ್ಲಿ ಮೀನುಗಾರಿಕಾ ದೋಣಿಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಸಂಭವಿಸಿದ ಹಾನಿ ಹಾಗೂ ರಾಮನಗರದ ರೇಷ್ಮೆ ರೀಲಿಂಗ್ ಘಟಕ ಹಾಗೂ ಟ್ವಿಸ್ಟಿಂಗ್ ಘಟಕಗಳಿಗೆ ಸಂಭವಿಸಿದ ನಷ್ಟವನ್ನು ಕೇಂದ್ರ ತಂಡದ ಗಮನಕ್ಕೆ ತರಲಾಯಿತು. ಮೊದಲ ಬಾರಿಗೆ ಇಂತಹ ಹಾನಿ ಸಂಭವಿಸಿದೆ. ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ಅವರಿಗೆ ನೆರವು ನೀಡಲು ಪರಿಶೀಲನೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಕೋರಿದರು.

ಕಲ್ಯಾಣ ಕರ್ನಾಟಕದಲ್ಲೂ ಪ್ರವಾಹ
ಕರ್ನಾಟಕವು 330 ಕಿ.ಮೀ. ಕರಾವಳಿ ಪ್ರದೇಶವನ್ನು ಹೊಂದಿದೆ. ಸಮುದ್ರ ಕೊರೆತ ತಡೆಗಟ್ಟಲು ಹಲವು ಸೂಕ್ಷ್ಮ ಪ್ರದೇಶಗಳಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಹೊಸ ಜಾಗಗಳಲ್ಲಿ ಕಡಲಕೊರೆತ ಉಂಟಾಗಿದ್ದು, ರಾಜ್ಯದ ಸಂಪೂರ್ಣ ಕರಾವಳಿ ಪ್ರದೇಶದ ರಕ್ಷಣೆಗೆ ಕೇಂದ್ರದ ನೆರವಿನ ಅಗತ್ಯವಿದೆ. ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಪ್ರವಾಹ ಕಾಣಿಸಿಕೊಳ್ಳದ ಕಲಬುರಗಿ, ಗದಗ, ಬೀದರ್, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲಿ ಈ ಬಾರಿ ಪ್ರವಾಹ ಉಂಟಾಗಿದೆ ಎಂದು ತಿಳಿಸಿದರು.
2021ರ ನವೆಂಬರ್ ತಿಂಗಳ ನಂತರ ಆಗಾಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಮಳೆಯ ಮಾದರಿಯನ್ನು ಅಧ್ಯಯನ ನಡೆಸಬೇಕಿದೆ. ಸತತ ಮಳೆಯಿಂದಾಗಿ ರಾಜ್ಯದ ಬಹುತೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಕೆರೆ ತುಂಬಿ ಏರಿ ಒಡೆದು ಪ್ರವಾಹ ಉಂಟಾಗುತ್ತಿದೆ. ನದಿ ಪ್ರವಾಹಕ್ಕಿಂತ ಭಿನ್ನ ಪರಿಸ್ಥಿತಿ ಇದಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಮೂಲಸೌಕರ್ಯ ದುರಸ್ತಿಗೆ 1,600 ಕೋಟಿ
ಇನ್ನೂ ಕರ್ನಾಟಕದಲ್ಲಿ ಕಳೆದ ನವೆಂಬರ್ ನಂತರ ಮೂಲಸೌಕರ್ಯಗಳ ದುರಸ್ತಿಗೆ ಎರಡು ಬಾರಿ 500 ಕೋಟಿ ರೂ. ಹಾಗೂ ಎರಡು ದಿನಗಳ ಹಿಂದೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡುತ್ತಿದೆ. 18.58 ಲಕ್ಷ ರೈತರಿಗೆ ಒಟ್ಟು 2,452 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದರಲ್ಲಿ 1,160 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರದ ಬೊಕ್ಕಸದಿಂದ ಭರಿಸಿದೆ.
ಮನೆ ಹಾನಿಗೂ ನಷ್ಟದ ಪ್ರಮಾಣವನ್ನು ಆಧರಿಸಿ, ಪರಿಹಾರ ವಿತರಿಸಲಾಗುತ್ತಿದೆ. ಈ ಎಲ್ಲ ಪರಿಹಾರಗಳನ್ನೂ ಅತ್ಯಂತ ತ್ವರಿತವಾಗಿ, ಪಾರದರ್ಶಕವಾಗಿ ನೇರವಾಗಿ ಸಂತ್ರಸ್ತರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ವಿವರಿಸಿದರು. ಕಳೆದೊಂದು ವಾರದಿಂದ ಪುನಃ ಭಾರಿ ಮಳೆಯಾಗುತ್ತಿದೆ. ಬೆಂಗಳೂರು, ರಾಮನಗರ, ಮಂಡ್ಯ ಮತ್ತಿತರ ಜಿಲ್ಲೆಗಳಲ್ಲಿ ಬಹಳಷ್ಟು ಹಾನಿ ಸಂಭವಿಸಿದೆ. ಈ ಅವಧಿಯಲ್ಲಿ ಸಂಭವಿಸಿದ ನಷ್ಟದ ಕುರಿತು ಪೂರಕ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಕೇಂದ್ರ ತಂಡ ಸದಸ್ಯರು
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ನೇತೃತ್ವದ ತಂಡವು ಕೇಂದ್ರ ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಮಹೇಶ್ ಕುಮಾರ್, ಇಂಧನ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾವ್ಯ ಪಾಂಡೆ, ಜಲಶಕ್ತಿ ಸಚಿವಾಲಯದ ಅಶೋಕ್ ಕುಮಾರ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತರ ವಿ.ವಿ.ಶಾಸ್ತ್ರಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಡಾ. ಕೆ. ಮನೋಹರನ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ. ತಿವಾರಿ ಅವರನ್ನು ಒಳಗೊಂಡಿದೆ.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಬಿ.ಸಿ. ಪಾಟೀಲ, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸೇರಿದಂತೆ ಸರ್ಕಾರ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications