Electric Vehicle: ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ, ದೇಶಕ್ಕೆ ಕರ್ನಾಟಕವೇ ನಂ 1
ಬೆಂಗಳೂರು, ಆಗಸ್ಟ್ 20: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳು ಹೆಚ್ಚುತ್ತಿವೆ. ಸದ್ಯದ ಮಾಹಿತಿ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಬ್ಯುರೋ ಆಫ್ ಎನರ್ಜಿ ಎಫೆಷಿಯನ್ಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ 5,765 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳು ಕರ್ನಾಟಕದಲ್ಲಿವೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದ್ದು, ನಗರದಲ್ಲಿಯೇ ಅತಿ ಹೆಚ್ಚು (4,462) ಪಾಯಿಂಟ್‌ಗಳಿವೆ.

ವರದಿಗಳ ಪ್ರಕಾರ ಮಹಾರಾಷ್ಟ್ರ 3,728, ಉತ್ತ ಪ್ರದೇಶ 1,989 ಮತ್ತು ದೆಹಲಿ 1,941 ಚಾರ್ಜಿಂಗ್ ಪಾಯಿಂಟ್ ಹೊಂದಿದ್ದು, ಕರ್ನಾಟಕದ ನಂತರದ ಸ್ಥಾನದಲ್ಲಿವೆ. ಉಳಿದಂತೆ ತಮಿಳುನಾಡು 1,413, ಕೇರಳ 1,212, ರಾಜಸ್ಥಾನ 1,129, ಗುಜರಾತ್ 992 ಪಾಯಿಂಟ್‌ಗಳಿವೆ.
ಈ ವರ್ಷದ ಮೇ ತಿಂಗಳಿನಲ್ಲಿ ಟಾಟಾ ಪವರ್ ತನ್ನ ಇವಿ ಚಾರ್ಜಿಂಗ್ ನೆಟ್‌ವರ್ಕ್ ಅಡಿಯಲ್ಲಿ ಕರ್ನಾಟಕದಲ್ಲಿ 220 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಿತ್ತು. ಮಂಗಳೂರು, ದಾವಣಗೆರೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ, ಹಲವು ಪ್ರವಾಸಿ ತಾಣಗಳಲ್ಲಿಯೂ ಚಾರ್ಜಿಂಗ್ ಪಾಯಿಂಟ್ ಆರಂಭಿಸಿ ಎಲೆಕ್ಟ್ರಿಕ್ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿತ್ತು.
ಬೆಂಗಳೂರಿನಲ್ಲೇ ಅಧಿಕ: ಕರ್ನಾಟಕದ 5,765 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಪೈಕಿ ಶೇ 85ರಷ್ಟು ಬೆಂಗಳೂರು ನಗರದಲ್ಲಿಯೇ ಇವೆ. ವಿವಿಧ ಮೂಲದ ಆರ್ಥಿಕ ಬೆಂಬಲವನ್ನು ಪಡೆದು ಬೆಸ್ಕಾಂ, ಖಾಸಗಿ ಸಂಸ್ಥೆಗಳು, ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳು ನಗರದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡಿವೆ.
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಿದೆ. ಈಗಾಗಲೇ ಫೆಬ್ರವರಿಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಸುಮಾರು 2,500 ಹೊಸ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದಲ್ಲಿ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 35 ಕೋಟಿ ರೂ. ಹೂಡಿಕೆ ಮಾಡಲಿದೆ. ಆದರೆ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ಕಂಪನಿಗಳು ಶೋ ರೂಂಗಳನ್ನು ತೆರಯುತ್ತಿವೆ.
ಬೆಂಗಳೂರು ನಗರದಲ್ಲಿ ಬೈಕ್, ಆಟೋ, ಕಾರು ಮಾತ್ರವಲ್ಲ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗಳು ಸಹ ಸಂಚಾರ ನಡೆಸುತ್ತಿವೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಹನಗಳ ಚಾರ್ಜಿಂಗ್‌ಗೆ ಅನುಕೂಲವಾಗುವಂತೆ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
2024ರ ಮಾಹಿತಿಯಂತೆ ಕರ್ನಾಟಕದಲ್ಲಿರುವ ಒಟ್ಟು ಎಲೆಕ್ಟ್ರಿಕ್ ವಾಹನಗಳು 3.4 ಲಕ್ಷ. ಇವುಗಳಲ್ಲಿ 2.98 ದ್ವಿಚಕ್ರ ವಾಹನ, 23,516 ನಾಲ್ಕು ಚಕ್ರದ ವಾಹನಗಳು ಮತ್ತು 18,246 ತ್ರಿ-ಚಕ್ರವಾಹನಗಳು. ರಾಜ್ಯದಲ್ಲಿ 2020-21ಕ್ಕೆ ಹೋಲಿಕೆ ಮಾಡಿದರೆ 2023-24ರಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶೇ 1,275ರಷ್ಟು ಏರಿಕೆಯಾಗಿದೆ.
ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಉತ್ತರ ಪ್ರದೇಶ ರಾಜ್ಯ ಮೊದಲ ಸ್ಥಾನದಲ್ಲಿದೆ. ಆದರೆ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಕರ್ನಾಟಕವೇ ಮೊದಲು. 2017-18ರಲ್ಲಿ ರಾಜ್ಯದಲ್ಲಿ 1922 ವಾಹನ ನೋಂದಣಿಯಾಗಿತ್ತು. 2023-24ರ ಮಾರ್ಚ್‌ಗೆ ಈ ಸಂಖ್ಯೆ 1,59,428ಕ್ಕೆ ಏರಿಕೆಯಾಗಿದೆ.












Click it and Unblock the Notifications