ಗುರುವಾರ ಚುನಾವಣೆ ಅಧಿಸೂಚನೆ: ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಪಕ್ಷಗಳು
ಬೆಂಗಳೂರು, ಮಾರ್ಚ್ 27: ಲೋಕಸಭೆ ಚುನಾವಣೆ 2024 ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನಡೆಯುವ 14 ಕ್ಷೇತ್ರಗಳಿಗೆ ಚುನಾವಣಾ ಅಧಿಸೂಚನೆ ಗುರುವಾರ ಪ್ರಕಟವಾಗಲಿದೆ.
ಮಾರ್ಚ್ 28ರ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 4 ಕೊನೆಯ ದಿನ. ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಗುರುವಾರವೇ ಅಧಿಸೂಚನೆ ಪ್ರಕಟವಾಗಲಿದೆ. ಆದರೆ ರಾಜಕೀಯ ಪಕ್ಷಗಳು ಇನ್ನೂ ಸಹ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ.
ಯಾವ-ಯಾವ ಕ್ಷೇತ್ರ ಬಾಕಿ?: ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಬಾಕಿ ಇದೆ. ಕಾಂಗ್ರೆಸ್ ಪಕ್ಷ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು, ಬಿಜೆಪಿ 1 ಮತ್ತು ಜೆಡಿಎಸ್ 3 ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ.
ಕಾಂಗ್ರೆಸ್ ಪಕ್ಷ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ. ಈ ಪೈಕಿ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮೂರು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಬಳ್ಳಾರಿಯಲ್ಲಿ 2ನೇ ಹಂತದಲ್ಲಿ ಮೇ 7ರಂದು ಮತದಾನ ನಿಗದಿಯಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಬಿಜೆಪಿ ಜೆಡಿಎಸ್ ಪಕ್ಷಕ್ಕೆ ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಈ ಮೂರು ಕ್ಷೇತ್ರಗಳಿಗೆ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಆದರೆ ಪಕ್ಷ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ನಿವಾಸದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಜೆ. ಪಿ. ನಗರದ ನಿವಾಸದಲ್ಲಿ ಮಂಗಳವಾರ ಸಂಜೆ ನಡೆಯಿತು. ಆದರೆ ಸಭೆಯ ಬಳಿಕ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ ಅಧಿಕೃತವಾಗಿ ಹೆಸರು ಘೋಷಣೆಯಾಗಿಲ್ಲ.
ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮಂಡ್ಯದಿಂದ ಎಚ್. ಡಿ. ಕುಮಾರಸ್ವಾಮಿಯೇ ಅಭ್ಯರ್ಥಿ ಎಂಬ ಸುದ್ದಿಗಳಿವೆ. ಆದರೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.
ರಾಜ್ಯದ ಪ್ರತಿಪಕ್ಷವಾದ ಬಿಜೆಪಿ 28 ಲೋಕಸಭಾ ಕ್ಷೇತ್ರದ ಪೈಕಿ 25 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ ಚಿತ್ರದುರ್ಗ (ಎಸ್‌ಸಿ) ಮೀಸಲು ಕ್ಷೇತ್ರಕ್ಕೆ ಪಕ್ಷ ಇನ್ನೂ ಅಭ್ಯರ್ಥಿ ಘೋಷಣೆ ಮಾಡಬೇಕಿದೆ.
ಎಲ್ಲೆಲ್ಲಿ ಮೊದಲ ಹಂತದಲ್ಲಿ ಮತದಾನ?: ಏಪ್ರಿಲ್ 26ರಂದು ಮೊದಲ ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮತದಾನ ನಡೆಯುವ ಕ್ಷೇತ್ರಗಳಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳು ಸೇರಿವೆ.
ಮೇ 7ರಂದು 2ನೇ ಹಂತದಲ್ಲಿ ಉಳಿದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 26ರಂದು ಮತದಾನ ನಡೆದರೂ ಸಹ ಚುನಾವಣಾ ಫಲಿತಾಂಶಕ್ಕಾಗಿ ಜೂನ್ 4ರ ತನಕ ಕಾಯಬೇಕಿದೆ.












Click it and Unblock the Notifications