Gram Panchayat Election 2023 : 111 ಗ್ರಾಮ ಪಂಚಾಯತ್‌ಗಳಿಗೆ ಚುನಾವಣಾ ದಿನಾಂಕ ಪ್ರಕಟ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಏರಿಕೆಯಾಗುತ್ತಿದ್ದು, ಇದನ್ನು ಮತ್ತೆ ಹೆಚ್ಚು ಮಾಡಲು ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಪ್ರಕಟವಾಗಿದೆ.
ಬೆಂಗಳೂರು, ಫೆಬ್ರವರಿ. 02: ರಾಜ್ಯ ವಿಧಾನಸಭಾ ಚುನಾವಣೆ ಬರುವ ಮುಂಚೆಯೇ ವಿವಿಧ ಭಾಗಗಳಲ್ಲಿ ಗ್ರಾಮ ಪಂಚಾಯಿತ್ ಚುನಾವಣೆ ನಡೆಯಲಿದೆ. ವಿವಿಧ ಕಾರಣಗಳಿಗೆ ತೆರವಾಗಿರುವ ಮತ್ತು ಅವಧಿ ಮುಗಿದ ರಾಜ್ಯದ ಎಂಟು ಗ್ರಾಮ ಪಂಚಾಯತ್‌ಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದೆ.
ರಾಜ್ಯ ಚುನಾವಣಾ ಆಯೋಗವು ಅವಧಿ ಮುಗಿದ ರಾಜ್ಯದ ಎಂಟು ಗ್ರಾಮ ಪಂಚಾಯತ್‌ಗಳ 127 ಸ್ಥಾನಗಳು ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ 103 ಗ್ರಾಮ ಪಂಚಾಯತ್‌ಗಳ 135 ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ ಮಾಡಿ ಪ್ರಕಟಿಸಿದೆ.
ಈ 111 ಗ್ರಾಮ ಪಂಚಾಯತ್‌ಗಳಿಗೆ ಫೆಬ್ರವರಿ 25ರಂದು ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.

ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳ 8 ಗ್ರಾಮ ಪಂಚಾಯತ್‌ಗಳ 127 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇನ್ನು ವಿವಿಧ ಕಾರಣಗಳಿಂದ ತೆರವಾಗಿರುವ 30 ಜಿಲ್ಲೆಗಳ 103 ಗ್ರಾಮ ಪಂಚಾಯತ್‌ಗಳ 135 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲಿದೆ. ಫೆಬ್ರವರಿ 8 ರಿಂದ ಆಯಾ ಜಿಲ್ಲೆಯ ಜಿಲ್ಲಾಡಳಿತ ಚುನಾವಣೆಯ ಅಧಿಸೂಚನೆ ಹೊರಡಿಸಲಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆಬ್ರವರಿ 14 ಕೊನೆ ದಿನಾಂಕವಾಗಿದೆ. ಫೆಬ್ರವರಿ 15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆದುಕೊಳ್ಳಲು ಫೆಬ್ರವರಿ 17 ಕೊನೆ ದಿನಾಂಕವಾಗಿದೆ.
ಫೆಬ್ರವರಿ 25 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಫೆಬ್ರವರಿ 28 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಫೆಬ್ರವರಿ 8 ರಿಂದ ಫೆಬ್ರವರಿ 28ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ.











Click it and Unblock the Notifications