ಸರ್ಕಾರಿ ಆಂಗ್ಲ ಶಾಲೆಗಳಿಗೆ ಭಾರೀ ಡಿಮ್ಯಾಂಡ್; ಸಾವಿರ ಹೊಸ ಶಾಲೆ ನಿರ್ಮಾಣ ಯೋಜನೆ
ಬೆಂಗಳೂರು, ಜುಲೈ 03: ಕೊರೊನಾ ಪಿಡುಗು ಇಡೀ ವಿಶ್ವಕ್ಕೇ ಸವಾಲೊಡ್ಡಿದೆ. ಕೊರೊನಾ ಸೋಂಕಿನಿಂದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ ಇಂಥ ಸಮಯದಲ್ಲಿಯೂ ಖಾಸಗಿ ಶಾಲೆಗಳು ಸಂಪೂರ್ಣ ಶುಲ್ಕ ಕಟ್ಟುವಂತೆ ಒತ್ತಡ ಹೇರುತ್ತಿರುವುದು ಎಷ್ಟೋ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ಶಾಲೆಗಳು ಆನ್‌ಲೈನ್ ತರಗತಿ ನಡೆಸುತ್ತಿದ್ದು, ಸಂಪೂರ್ಣ ಶುಲ್ಕ ಕೇಳದಂತೆ ಸರ್ಕಾರದ ಆದೇಶಿಸಿದ್ದರೂ ಹಲವು ಕಾರಣಗಳನ್ನು ನೀಡಿ ಪೋಷಕರಿಗೆ ಶುಲ್ಕ ಕಟ್ಟುವಂತೆ ಒತ್ತಾಯಿಸುತ್ತಿರುವುದು ದಿನನಿತ್ಯದ ಸುದ್ದಿಯಾಗಿದೆ. ಹೀಗೆ ಹಲವು ಕಾರಣಗಳಿಂದ ಈ ಬಾರಿ ಸರ್ಕಾರಿ ಶಾಲೆಗಳ ಕದ ತಟ್ಟುತ್ತಿರುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಈ ಬೆನ್ನಲ್ಲೇ ಶಿಕ್ಷಣ ಇಲಾಖೆ ಸರ್ಕಾರದ ಮುಂದೆ ಪ್ರಸ್ತಾವವೊಂದನ್ನು ಇಟ್ಟಿದೆ. ಒಂದು ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಯೋಜನೆ ಅದರಲ್ಲಿದೆ. ಮುಂದೆ ಓದಿ...

ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಈ ಬಾರಿ ಭಾರೀ ಬೇಡಿಕೆ
2018ರಲ್ಲಿ ಆರಂಭವಾದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಈ ಬಾರಿ ಭಾರೀ ಬೇಡಿಕೆ ಬಂದಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗೆ ಅತಿ ಹೆಚ್ಚು ಬೇಡಿಕೆ ಬಂದಿರುವ ಕಾರಣ ಈಗಿರುವ ಈ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿದ ದಾಖಲಾತಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ಜೂನ್ 15ರಿಂದ ಇದುವರೆಗೆ ಸರ್ಕಾರಿ ಶಾಲೆಗಳಿಗೆ ಒಟ್ಟು 16,52,613 ಮಕ್ಕಳು ಸೇರ್ಪಡೆಯಾಗಿದ್ದಾರೆ. ಅನುದಾನಿತ ಶಾಲೆಗಳಲ್ಲಿ 3,10,883 ಮಕ್ಕಳು ದಾಖಲಾಗಿದ್ದು, ಖಾಸಗಿ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳ ಸಂಖ್ಯೆ 4,48,699 ಆಗಿದೆ. ಈ ವರ್ಷ ದಾಖಲಾತಿಗೆ ಸಮಯಾವಕಾಶ ನೀಡಲಾಗಿದ್ದು, ದಾಖಲಾತಿ ಮತ್ತಷ್ಟು ಏರುವ ನಿರೀಕ್ಷೆಯಿದೆ. 1ರಿಂದ 10ನೇ ತರಗತಿವರೆಗೂ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಆರಂಭವಾಗಿ ಜೂನ್ 15ರವರೆಗೆ 16 ಲಕ್ಷಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಶೇ 30ರಷ್ಟು ಬೇಡಿಕೆ ಹೆಚ್ಚಳ
ಕೊರೊನಾದಿಂದ ಕೆಲಸ ಕಳೆದುಕೊಂಡು ಅಥವಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಕಂಗಾಲಾಗಿರುವ ಪೋಷಕರ ಪಾಡನ್ನು ಖಾಸಗಿ ಶಾಲೆಗಳು ಕೇಳುತ್ತಿಲ್ಲ. ಶಾಲೆಗಳಿಗೆ ಲಕ್ಷಾಂತರ ಹಣ ಕಟ್ಟಲು ತಯಾರಿಲ್ಲದ ಪೋಷಕರು ಈಗ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ ಎಂಬುದು ದಾಖಲಾತಿ ಸಂಖ್ಯೆಯಿಂದ ತಿಳಿದುಬಂದಿದೆ. ಈ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ ಶೇ. 30ರಷ್ಟು ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರು ನಗರದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿರುವುದಾಗಿ ಇಲಾಖೆ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಅತಿ ಸೂಕ್ತ ಎಂದು ಈ ಪ್ರಸ್ತಾವ ಸಲ್ಲಿಸಿರುವುದಾಗಿ ತಿಳಿಸಿದೆ.

ಸಾವಿರ ಆಂಗ್ಲ ಶಾಲೆಗಳನ್ನು ತೆರೆಯುವ ಪ್ರಸ್ತಾವ
ಎಲ್‌ಕೆಜಿ ಇಂದ ದ್ವಿತೀಯ ಪಿಯುಸಿವರೆಗೆ ರಾಜ್ಯದಲ್ಲಿ ಸುಮಾರು ಸಾವಿರ ಆಂಗ್ಲ ಶಾಲೆಗಳನ್ನು ಹೊಸದಾಗಿ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗೆ ಅನುಮೋದನೆ ದೊರೆತರೆ ಶೀಘ್ರದಲ್ಲಿಯೇ ಇನ್ನಷ್ಟು ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ತಲೆ ಎತ್ತಲಿವೆ.












Click it and Unblock the Notifications