ಜನಾರ್ದನ ರೆಡ್ಡಿ 24 ಕೋಟಿ ಆಸ್ತಿ ಮುಟ್ಟುಗೋಲು
ಬೆಂಗಳೂರು, ಏ. 1 : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ 24 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಜಾನ್ ಕಿಂಗ್ಲಿ ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಬಳ್ಳಾರಿಯ ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ 24 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕೊಳ್ಳಲಾಗಿದೆ ಎಂದು ಹೇಳಿದ್ದಾರೆ. [ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು]

ಜನಾರ್ದನ ರೆಡ್ಡಿ ದಂಪತಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕೊಂಡಿದ್ದೇವೆ. ಇದುವರೆಗೂ ಜನಾರ್ದನ ರೆಡ್ಡಿ ಅವರ 62.09 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.[ಚಿತ್ರ: ಅಗ್ರಹಾರದಿಂದ ಹೊರ ಬಂದ ರೆಡ್ಡಿಗೆ ಬಹುಪರಾಕ್]
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಅವರನ್ನು 2011ರಲ್ಲಿ ಸಿಬಿಐ ಅಧಿಕಾರಿಗಳು ಬಳ್ಳಾರಿಯಲ್ಲಿ ಬಂಧಿಸಿದ್ದರು. ಸುಮಾರು ಮೂರುವರೆ ವರ್ಷಗಳ ನಂತರ 2015ರ ಜನವರಿ 20ರಂದು ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. [ಪೊಲೀಸರಿಗೆ ದೂರು ನೀಡಿದ ರೆಡ್ಡಿ]
ಜನವರಿ 23ರಂದು ಜನಾರ್ದನರೆಡ್ಡಿ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದರು. ಜೈಲಿನಿಂದ ಹೊರ ಬಂದ ರೆಡ್ಡಿ ಅವರು ಕುಟುಂಬದೊಂದಿಗೆ ಅವರು ಕಾಲ ಕಳೆಯುತ್ತಿದ್ದಾರೆ. ಬಳ್ಳಾರಿಗೆ ಹೋಗದಂತೆ ಸುಪ್ರೀಂಕೋರ್ಟ್ ಜನಾರ್ದನ ರೆಡ್ಡಿ ಅವರಿಗೆ ಷರತ್ತು ವಿಧಿಸಿದೆ.












Click it and Unblock the Notifications