E- khata: ಇನ್ಮುಂದೆ ಎಲ್ಲಾ ಆಸ್ತಿ ನೋಂದಣಿಗೆ ಇದು ಕಡ್ಡಾಯ!
ರಾಜ್ಯದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳು ಆಗುತ್ತಿವೆ. ಕರ್ನಾಟಕದಲ್ಲಿ ಆಸ್ತಿ ವಿಚಾರದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಇ - ಖಾತಾ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ಅಲ್ಲದೇ ಇದೀಗ ಎಲ್ಲಾ ಆಸ್ತಿಗಳ ನೋಂದಣಿಗೂ ಇ -ಖಾತಾ ಕಡ್ಡಾಯ ಮಾಡಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗದಲ್ಲಿ ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ಕ್ರಮ ವಹಿಸಲಾಗಿದೆ. ಅಲ್ಲದೇ ಈ ಕ್ರಮದಿಂದ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿರುವುದಾಗಿಯೂ ರಾಜ್ಯ ಸರ್ಕಾರ ಹೇಳಿಕೊಂಡಿದೆ.
ರಾಜ್ಯದಲ್ಲಿ ಆಸ್ತಿಗಳ ನೋಂದಣಿಗೆ ಇದೀಗ ಕಡ್ಡಾಯ ಇ - ಖಾತಾ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲೇ ಏಳರಿಂದ ಎಂಡು ಲಕ್ಷ ಆಸ್ತಿಗಳಿಗೆ ಸಂಬಂಧಿಸಿದಂತೆ ಆಸ್ತಿ ಖಾತಾಗಳನ್ನೇ ಮಾಡಿಸಿಲ್ಲ. ಅಲ್ಲದೇ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಂದಾಜು 90 ಲಕ್ಷಕ್ಕೂ ಹೆಚ್ಚು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಖಾತೆ ಮಾಡಿಸಿಲ್ಲ ಎಂದು ಖುದ್ದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ವಂಚನೆಯ ಮೂಲಕ ಆಸ್ತಿ ನೋಂದಣಿ ಮಾಡುವುದು ಸಹ ನಡೆಯುತ್ತಿದೆ. ಈ ರೀತಿ ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಇದೀಗ ಇ-ಖಾತೆ ಮಾಡಿಸಿದ್ದರೆ ಮಾತ್ರ ನೋಂದಣಿ ಮಾಡಿಕೊಡುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಧ್ಯವರ್ತಿಗಳಿಗೆ ಕಡಿವಾಣ: ಆಸ್ತಿ ನೋಂದಣಿ ವಿಚಾರದಲ್ಲಿ ಆಗುತ್ತಿರುವ ಅವ್ಯವಹಾರಗಳನ್ನು ತಡೆಯುವುದರೊಂದಿಗೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆಗುತ್ತಿರುವ ಆದಾಯ ನಷ್ಟವನ್ನು ತಪ್ಪಿಸುವುದಕ್ಕೂ ಇದು ಸಹಕಾರಿಯಾಗಿದೆ. ಈ ಹಿಂದೆ ಪ್ರತಿ ಆಸ್ತಿ ನೋಂದಣಿ ಮಾಡಿಸುವುದಕ್ಕೂ ಮಧ್ಯವರ್ತಿಗಳು 30ರಿಂದ 40 ಲಕ್ಷ ರೂಪಾಯಿ ಲಂಚ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಮಾಡುತ್ತಿರುವುದರಿಂದ ಸ್ಥಳೀಯ ಆಡಳಿತ ಸಂಸ್ಥೆಗಳಿಗೂ ಆದಾಯ ನಷ್ಟವಾಗುತ್ತಿದೆ.
ಜನ ತೆರಿಗೆ ಕಟ್ಟಿದವರ ದುಡ್ಡಿನಿಂದ ಎಲ್ಲರಿಗೂ ಸವಲತ್ತು ಸಿಗುತ್ತದೆ. ಆದರೆ, ಇದನ್ನು ತಪ್ಪಿಸಿ ಬೆಂಗಳೂರಲ್ಲಿ 600 ರಿಂದ 1000 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸೋರಿಕೆ ಮಾಡಲಾಗುತ್ತಿತ್ತು. ಈಗ ಎಲ್ಲವನ್ನೂ ತಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಿಬಿಎಂಪಿಗೆ ಕೋಟಿ ಕೋಟಿ ಆದಾಯ: ಇನ್ನು ಈ ವರ್ಷ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಕೋಟ್ಯಾಂತ ರೂಪಾಯಿ ಆದಾಯ ಹರಿದು ಬಂದಿದೆ. ಬಿಬಿಎಂಪಿಗೆ ಆಸ್ತಿ ತೆರಿಗೆಯು 30.11.24 4284 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಇದಕ್ಕೆ ಬೆಂಗಳೂರಿನಲ್ಲಿ ಒಟಿಎಸ್ ಯೋಜನೆ ಜಾರಿ ಮಾಡಿದ್ದು ಪ್ರಮುಖ ಕಾರಣವಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಇ - ಖಾತಾ ಪದ್ಧತಿ ಜಾರಿಯಾದ ಮೇಲೆ ಹಲವು ಬದಲಾವಣೆಗಳು ಆಗಿವೆ.
ಬೆಂಗಳೂರಿನಲ್ಲಿ ಇ - ಖಾತಾ (ಖಾತಾ ಮಾಡಿಸಿಕೊಳ್ಳದೆ ಇರುವವರನ್ನು) ಹೆಚ್ಚು ಸಕ್ರಿಯವಾಗಿ ಮಾಡಿಸಲಾಗುತ್ತಿದೆ. ಖಾತಾ ವ್ಯಾಪ್ತಿಯಿಂದ ಹೊರಗೆ ಇರುವವರನ್ನೂ ಸಹ ಬಿಬಿಎಂಪಿಯು ಖಾತಾ ವ್ಯಾಪ್ತಿಗೆ ಸೇರಿಸುತ್ತಿದ್ದು, ಇದರಿಂದ ಪಾಲಿಕೆಗೆ ಹೆಚ್ಚುವರಿ ಆದಾಯ ಹರಿದು ಬರ್ತಿದೆ.












Click it and Unblock the Notifications