E-Khata: ಇ-ಖಾತಾ ಕಡ್ಡಾಯ ನಿಯಮ, ಆಸ್ತಿ ಮಾರಾಟ ಮತ್ತು ಆದಾಯ ಕುಸಿತ
ಬೆಂಗಳೂರು, ಮಾರ್ಚ್ 19: ಕರ್ನಾಟಕ ಸರ್ಕಾರ ಆಸ್ತಿಗಳ ನೋಂದಣಿ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ. ಆಸ್ತಿ ಮಾಲೀಕರು ತಮ್ಮ ಹಕ್ಕನ್ನು ನೋಂದಾಯಿಸಲು ಇ-ಖಾತಾ ಪಡೆಯುವುದು ಕಡ್ಡಾಯಗೊಳಿಸಿದೆ. ಇ-ಖಾತಾ ಇಲ್ಲದಿದ್ದರೆ ಹೊಸ ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಎಂದು ನಿಯಮ ರೂಪಿಸಿದೆ. ಇದರಿಂದಾಗಿ ಆಸ್ತಿಗಳ ವಹಿವಾಟು ಪ್ರಕ್ರಿಯೆ ಕಡಿಮೆಯಾಗಿದೆ. ಆದ್ದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯ ಸಂಗ್ರಹಣೆ ಗುರಿಗೂ ಪೆಟ್ಟು ಬಿದ್ದಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ 2024-25ನೇ ವರ್ಷದಲ್ಲಿ 26 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆ ಗುರಿಯನ್ನು ನಿಗದಿ ಮಾಡಲಾಗಿತ್ತು. ಮಾರ್ಚ್ ತಿಂಗಳ ಅಂತ್ಯ ಸಮೀಪಿಸುತ್ತಿದೆ. ಫೆಬ್ರವರಿ 28ರ ತನಕ 20,186 ಕೋಟಿ ರೂ. ಆದಾಯ ಮಾತ್ರ ಸಂಗ್ರಹವಾಗಿದ್ದು, ನಿಗದಿತ ಗುರಿ ತಲುಪುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ.

ಇ-ಖಾತಾ ಕಡ್ಡಾಯಗೊಳಿಸಿದ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರಗಳು ಕಡಿಮೆಯಾಗಿವೆ. ಆದ್ದರಿಂದ ಮಾರ್ಚ್ ಒಂದು ತಿಂಗಳಿನಲ್ಲಿಯೇ ಇಲಾಖೆ 5,800 ಕೋಟಿ ರೂ. ಆದಾಯ ಸಂಗ್ರಹಣೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇ-ಖಾತಾ ಭವಿಷ್ಯದಲ್ಲಿ ಸಹಾಯಕವಾಗಲಿದೆ. ಆದ್ದರಿಂದ ಈಗ ಇಲಾಖೆ ಆದಾಯ ಕಡಿಮೆಯಾದರೂ ಸಹ ಸರ್ಕಾರ ಆದಾಯ ಸಂಗ್ರಹಕ್ಕೆ ಬೇರೆ ಮೂಲವನ್ನು ಹುಡುಕಬೇಕಿದೆ.
ಇಲಾಖೆ ಆದಾಯ ಕುಸಿತ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸದ್ಯ ಬೆಂಗಳೂರು ನಗರ 13,000 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಸಂಗ್ರಹಣೆ ಮಾಡಿದ್ದು, ಮೊದಲ ಸ್ಥಾನದಲ್ಲಿದೆ. ಇಸಿ ವಿತರಣೆಗೆ ಆಗುತ್ತಿರುವ ಅಡ್ಡಿ, ಇ-ಖಾತಾ ಕಡ್ಡಾಯ ಮತ್ತು ಇತರ ತಾಂತ್ರಿಕ ದೋಷಗಳ ಕಾರಣ ಈಗ ಆಸ್ತಿಗಳ ನೋಂದಣಿ ಕಡಿಮೆಯಾಗಿದ್ದು, ನಿಗದಿತ ಗುರಿಯನ್ನು ಇಲಾಖೆ ತಲುಪುವುದಿಲ್ಲ.
2023-24ನೇ ಸಾಲಿನ ಫೆಬ್ರವರಿ ಅಂತ್ಯಕ್ಕೆ ಇಲಾಖೆ 17,491 ಕೋಟಿ ರೂ. ಆದಾಯ ಸಂಗ್ರಹಣೆ ಮಾಡಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಫೆಬ್ರವರಿ ಅಂತ್ಯಕ್ಕೆ ಆದಾಯ ಸಂಗ್ರಹಣೆ ಹೆಚ್ಚಾಗಿಯೇ ಇದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಕೇವಲ 2,800 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಆದ್ದರಿಂದ ಈ ಬಾರಿ ನಿಗದಿತ ಗುರಿ ತಲುಪುವುದಿಲ್ಲ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಸರ್ಕಾರ 2024ರ ಅಕ್ಟೋಬರ್‌ನಲ್ಲಿ ಆಸ್ತಿಗಳ ಖರೀದಿ, ಮಾರಾಟಕ್ಕೆ ಇ-ಖಾತಾ ಕಡ್ಡಾಯಗೊಳಿಸಿತು. ಆ ಬಳಿಕ ಇಲಾಖೆಯ ಆದಾಯಕ್ಕೆ ಹೊಡೆತ ಬಿದ್ದಿದೆ. ಮಾರ್ಚ್‌ನಿಂದ ಸೆಪ್ಟೆಂಬರ್ ತನಕ ಇ-ಖಾತಾ ಕಡ್ಡಾಯವಿಲ್ಲದಿದ್ದಾಗ 13,811 ಕೋಟಿ ರೂ. ಸಂಗ್ರಹವಾಗಿತ್ತು. 2024ರ ಅಕ್ಟೋಬರ್‌ನಿಂದ 2025ರ ಫೆಬ್ರವರಿ ತನಕ 6,375 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ.
ಆದಾಯ ಸಂಗ್ರಹದಲ್ಲಿ ಬೆಂಗಳೂರು ನಗರ 13,000 ಕೋಟಿ ರೂ., ಬೆಂಗಳೂರು ಗ್ರಾಮಾಂತರ 1,200 ಕೋಟಿ ರೂ.. ಉಳಿದ 29 ಜಿಲ್ಲೆಗಳು 5,000 ಕೋಟಿಗಿಂತ ಹೆಚ್ಚು ಆದಾಯ ಸಂಗ್ರಹ ಮಾಡಿವೆ. ಬೆಂಗಳೂರು ನಗರ ಜಿಲ್ಲೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿಯೇ ಮೊದಲು ಇ-ಖಾತಾ ಕಡ್ಡಾಯಗೊಳಿಸಲಾಯಿತು.
ಬಳಿಕ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಜಾರಿಗೊಳಿಸಲಾಯಿತು. ಈಗ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಆದೇಶಿಸಲಾಗಿದೆ. ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆಯಬೇಕೆಂದು ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಅಚ್ಚರಿ ಎಂಬಂತೆ ಇ-ಖಾತಾ ಕಡ್ಡಾಯಗೊಳಿಸಿದ ಬಳಿಕವೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆದಾಯ ಹೆಚ್ಚಳವಾಗಿದೆ. ಜಿಲ್ಲೆ 2022-23ರಲ್ಲಿ 1000 ಕೋಟಿ, 2023-24ರಲ್ಲಿ 1,260 ಕೋಟಿ ಆದಾಯ ಸಂಗ್ರಹ ಮಾಡಿದೆ. ಈ ವರ್ಷ ಫೆಬ್ರವರಿ ಅಂತ್ಯದ ತನಕ ಜಿಲ್ಲೆಯಲ್ಲಿ 1,200 ಕೋಟಿ ರೂ. ಆದಾಯ ಬಂದಿದೆ.












Click it and Unblock the Notifications