ಅನ್ನದಾತನಿಗೂ ಸಂಕಷ್ಟ, ಉಣ್ಣುವವನಿಗೂ ಕಷ್ಟ : ರಾಜ್ಯದಲ್ಲಿ 100 ರೂ. ಗಡಿಯತ್ತ ಸಾಗುತ್ತಿದೆ ಸೋನಾ ಮಸೂರಿ ಅಕ್ಕಿ ಬೆಲೆ
ಬೆಂಗಳೂರು: ರಾಜ್ಯದ ಜನತೆಗೆ ಇದೀಗ ಪ್ರತಿನಿತ್ಯದ ಬಳಕೆ ಬೇಕಾಗಿರುವ ದಿನಸಿಗಳ ಬೆಲೆ ಏರಿಕೆಯ ಬಿಸಿ ತೀವ್ರವಾಗಿ ತಟ್ಟಲಾರಂಭಿಸಿದೆ. ನಿತ್ಯದ ಊಟಕ್ಕೆ ಬಳಸುವ ಮುಖ್ಯ ಆಹಾರ ಧಾನ್ಯವಾದ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಕರ್ನಾಟಕದಲ್ಲಿ ಈ ವರ್ಷ ಎದುರಾಗಿರುವ ತೀವ್ರ ಬರಗಾಲ ಹಾಗೂ ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ. ಇದರ ನೇರ ಪರಿಣಾಮ ಮಾರುಕಟ್ಟೆಯ ಮೇಲಾಗಿದ್ದು, ರಾಜ್ಯದ ಜನಸಾಮಾನ್ಯರ ನೆಚ್ಚಿನ ಸೋನಾ ಮಸೂರಿ ಅಕ್ಕಿ ಬೆಲೆ ಪ್ರತಿ ಕೆ.ಜಿಗೆ 100 ರೂಪಾಯಿಗಳ ಗಡಿಯನ್ನು ತಲುಪುವತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಈ ಬೆಲೆ ಏರಿಕೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ಬಹುದೊಡ್ಡ ಹೊಡೆತವನ್ನ ನೀಡಿದೆ.

ಸತತ ನಾಲ್ಕು ತಿಂಗಳಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಏರಿಕೆ
ಕಳೆದ ನಾಲ್ಕು ತಿಂಗಳಲ್ಲಿ ಮಾಡಿದರೆ, ರಾಜ್ಯದಲ್ಲಿ ಅಕ್ಕಿಯ ದರವು ಸತತವಾಗಿ ಏರುಗತಿಯಲ್ಲೇ ಸಾಗುತ್ತಿದೆ. ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಯಶವಂತಪುರ ಮಾರುಕಟ್ಟೆಯಲ್ಲಿ ಕೂಡ ಅಕ್ಕಿಯ ದರ ಏರಿಕೆಯ ಬಿಸಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಕೆಲವೇ ತಿಂಗಳ ಹಿಂದೆ ಪ್ರತಿ ಕೆ.ಜಿಗೆ ಸುಮಾರು 69 ರೂಪಾಯಿಗಳಷ್ಟಿದ್ದ ಸೋನಾ ಮಸೂರಿಯ ಬೆಲೆ, ಇದೀಗ 90 ರೂಪಾಯಿಗಳ ಗಡಿಯನ್ನ ದಾಟಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಿದೆ. 25 ಕೆಜಿ ತೂಕದ ಅಕ್ಕಿ ಚೀಲದ ಬೆಲೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ದಾಖಲಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಾರಂಭಿಸಿದೆ.
ಮಳೆ ಕೊರತೆಯಿಂದ ಭತ್ತದ ಇಳುವರಿ ಕುಸಿತ
ಕರ್ನಾಟಕದ ಹಲವು ಪ್ರಮುಖ ಜಿಲ್ಲೆಗಳಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಭತ್ತದ ಬಿತ್ತನೆ ಪ್ರದೇಶದ ವಿಸ್ತೀರ್ಣ ಗಣನೀಯವಾಗಿ ಕಡಿಮೆಯಾಗಿದೆ.
ಪ್ರಮುಖವಾಗಿ ಭತ್ತ ಬೆಳೆಯುವ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ನೀರಿನ ಅಭಾವವಾಗಿದೆ. ಭತ್ತದ ಬೆಳೆಗೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಆದರೆ, ಈ ವರ್ಷ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪಾತಾಳಕ್ಕೆ ಕುಸಿದಿರುವುದು ಕೃಷಿಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿಯ ಭತ್ತದ ಇಳುವರಿ ಕುಸಿತ ಉಂಟಾಗುವುದು ಬಹುತೇಕ ಖಚಿತವಾಗಿದೆ.
ಮಧ್ಯಮ ವರ್ಗ ಹಾಗೂ ಹೋಟೆಲ್ ಉದ್ಯಮಕ್ಕೆ ಆರ್ಥಿಕ ಸಂಕಷ್ಟ
ಈ ದಿಢೀರ್ ಬೆಲೆ ಏರಿಕೆಯಿಂದಾಗಿ ಸಮಾಜದ ಕೆಳಹಂತದ ಜನಸಾಮಾನ್ಯರು, ದಿನಗೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ಪ್ರತಿದಿನ ಅನ್ನವನ್ನೇ ಪ್ರಮುಖ ಆಹಾರವಾಗಿ ಅವಲಂಬಿಸಿರುವ ಕುಟುಂಬಗಳಿಗೆ ಹೆಚ್ಚುವರಿ ಹಣವನ್ನ ಹೊಂದಿಸುವುದು ಅನಿವಾರ್ಯ ಎದುರಾಗಿದೆ.
ಇದು ಕೇವಲ ಮನೆಗಳಿಗಷ್ಟೇ ಅಲ್ಲದೆ, ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದವರಿಗೂ ಈ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಊಟದ ದರ ಏರಿಸಿದರೆ ಗ್ರಾಹಕರು ಬರುವುದಿಲ್ಲ, ಏರಿಸದಿದ್ದರೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿಗೆ ಹೋಟೆಲ್ ಮಾಲೀಕರು ಸಿಲುಕಿದ್ದಾರೆ.
ಸರ್ಕಾರದ ಮಧ್ಯಪ್ರವೇಶದ ನಿರೀಕ್ಷೆಗಳು
ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುವ ಹೊಸ ಭತ್ತದ ಬೆಳೆಯ ಪ್ರಮಾಣ ಹಾಗೂ ಪ್ರಸ್ತುತ ಲಭ್ಯವಿರುವ ಅಕ್ಕಿಯ ದಾಸ್ತಾನಿನ ಮೇಲೆ ಬೆಲೆ ನಿಯಂತ್ರಣವು ಅವಲಂಬಿತವಾಗಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ, ದರ ಮತ್ತಷ್ಟು ಗಗನಕ್ಕೇರುವ ಎಲ್ಲಾ ಸಾಧ್ಯತೆಗಳಿವೆ.
ಈ ಸಂದರ್ಭದಲ್ಲಿ ಬೆಲೆ ಏರಿಕೆ ತಡೆಯಲು ಸರ್ಕಾರದ ಮಧ್ಯಪ್ರವೇಶ ಮಾಡುವ ಅಗತ್ಯವಿದೆ. ಮಾರುಕಟ್ಟೆಯ ದರಗಳ ಮೇಲೆ ನಿರಂತರ ನಿಗಾ ಇಟ್ಟು, ಕೃತಕ ಅಭಾವ ಸೃಷ್ಟಿಸುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಮಳೆ ಕೊರತೆಯಿಂದ ಶುರುವಾದ ರೈತರ ಈ ಆತಂಕ, ಇದೀಗ ಅಕ್ಕಿ ದರದ ಮೂಲಕ ಜನಸಾಮಾನ್ಯರ ನೆಮ್ಮದಿಯನ್ನೂ ಕಸಿದುಕೊಂಡಿದೆ.


Click it and Unblock the Notifications
