ತಾನು ಕಲಿತ ಸರ್ಕಾರಿ ಶಾಲೆಗೆ ಬರೋಬ್ಬರಿ 14 ಕೋಟಿ ರೂ. ದಾನ ನೀಡಿದ ಚನ್ನಪಟ್ಟಣದ ಡಾ. ವೆಂಕಟಪ್ಪ

ಬೆಳೆದು ದೊಡ್ಡವರಾದ ಮೇಲೆ ಅದರಲ್ಲೂ ಒಂದಿಷ್ಟು ಹಣ ಮತ್ತು ಆಸ್ತಿ ಮಾಡಿಕೊಂಡ ಮೇಲೆ ಹೆಚ್ಚಿನ ಜನರು ನಾವು ನಡೆದು ಬಂದ ದಾರಿಯನ್ನ, ನಮ್ಮನ್ನ ಬೆಳೆಸಿದ ಶಾಲೆಯನ್ನ ಹಾಗೂ ಊರನ್ನು ಮರೆಯುವವರೇ ಹೆಚ್ಚು. ಆದರೆ, ಸಮಾಜದಿಂದ ನಾವು ಪಡೆದದ್ದನ್ನು ಮತ್ತೆ ಸಮಾಜಕ್ಕೇ ಹಿಂದಿರುಗಿಸಬೇಕು ಎಂಬ ಉದಾತ್ತ ಚಿಂತನೆಯುಳ್ಳ ಕೆಲವರು ಮಾತ್ರವೇ ಇತಿಹಾಸದಲ್ಲಿ ಹಾಗೆಯೇ ಅಚ್ಚಳಿಯದೇ ಉಳಿಯುತ್ತಾರೆ.

ಅಂತಹವರ ಸಾಲಿಗೆ ಈಗ ಕರ್ನಾಟಕದ 79 ವರ್ಷದ ಹಿರಿಯ ವೈದ್ಯರು ಹಾಗೂ ಕಣ್ವ ಡಯಾಗ್ನೋಸ್ಟಿಕ್ಸ್ ಸಂಸ್ಥಾಪಕರೂ ಆಗಿರುವ ಡಾ. ಎಚ್ ಎಂ ವೆಂಕಟಪ್ಪ ಸೇರ್ಪಡೆಯಾಗಿದ್ದಾರೆ.

Dr HM Venkatappa Donates Rs 14 Crore to Transform His Childhood Govt School in Karnataka Village

ತಾನು ಓದಿ, ಅಕ್ಷರ ಕಲಿತ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಯನ್ನ ತಮ್ಮ ಉಳಿತಾಯದ ಹಣದಲ್ಲಿ, ಯಾವುದೇ ಅಂತರಾಷ್ಟ್ರೀಯ ಶಾಲೆಗೂ ಕಡಿಮೆ ಇಲ್ಲದಂತೆ ಹೈಟೆಕ್ ಆಗಿ ಮರುನಿರ್ಮಾಣ ಮಾಡಿದ್ದಾರೆ. ಈ ಮೂಲಕ ಶಿಕ್ಷಣದ ಮೇಲೆ ಅವರಿಗಿರುವ ಕಾಳಜಿ ಮತ್ತು ಊರಿನ ಮೇಲಿನ ಪ್ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಹೊಂಗನೂರು ಸರ್ಕಾರಿ ಶಾಲೆಯಿಂದ ಹೈಟೆಕ್ ಕರ್ನಾಟಕ ಪಬ್ಲಿಕ್ ಸ್ಕೂಲ್

ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಡಾ. ವೆಂಕಟಪ್ಪ ಅವರು 1949 ರಿಂದ 1957 ರವರೆಗೆ ಇದೇ ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಇದೇ ಶಾಲೆಯಲ್ಲಿ ಕಲಿತ ಅಕ್ಷರ, ಅವರ ಬದುಕಿಗೆ ಅಡಿಪಾಯ ಹಾಕಿಕೊಟ್ಟಿತ್ತು. ಮುಂದೆ ಅವರು ಎಂಬಿಬಿಎಸ್ ಹಾಗೂ ಎಂಡಿ ವ್ಯಾಸಂಗ ಮಾಡಿ ಯಶಸ್ವಿ ವೈದ್ಯರಾಗಿ ಹೊರಹೊಮ್ಮಿದರು.

ಆದರೆ, ತಾವು ಕಲಿತ ಶಾಲೆ ಶಿಥಿಲಾವಸ್ಥೆಗೆ ತಲುಪಿದ್ದನ್ನು ಕಂಡು ಬೇಸರಗೊಂಡ ಅವರು, 2022ರಲ್ಲಿ ಆ ಹಳೆಯ ಕಟ್ಟಡಗಳನ್ನ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಲು ಸಂಕಲ್ಪ ಮಾಡಿದರು.

ಸುಮಾರು ಎರಡೂವರೆ ವರ್ಷಗಳ ಸತತ ಪ್ರಯತ್ನದ ಫಲವಾಗಿ, ಇಂದು ಆ ಹಳೆಯ ಸರ್ಕಾರಿ ಶಾಲೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ತಲೆಯೆತ್ತಿ ನಿಂತಿದೆ.

14 ಕೋಟಿ ರೂ. ದಾನ ಮಾಡಿದ ವೆಂಕಟಪ್ಪ

ಗ್ರಾಮೀಣ ಭಾಗದ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಡಾ. ವೆಂಕಟಪ್ಪ ಅವರು ತಮ್ಮ ವೈಯಕ್ತಿಕ ಉಳಿತಾಯದಿಂದ ಬರೋಬ್ಬರಿ 14 ಕೋಟಿ ರೂಪಾಯಿ ಹಣವನ್ನು ಈ ಶಾಲೆಗೆ ವಿನಿಯೋಗಿಸಿದ್ದಾರೆ. ಇಂದು ಈ ಶಾಲೆಯು 50 ಸುಸಜ್ಜಿತ ತರಗತಿ ಕೊಠಡಿಗಳನ್ನ ಹೊಂದಿದೆ.

ಕೇವಲ ಕಟ್ಟಡ ಮಾತ್ರವಲ್ಲದೆ, ಸುಮಾರು 40 ಕಂಪ್ಯೂಟರ್‌ಗಳನ್ನೊಳಗೊಂಡ ಹೈಟೆಕ್ ಲ್ಯಾಬ್, ಸ್ಮಾರ್ಟ್ ಬೋರ್ಡ್‌ಗಳು, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಗಳು, ಬೃಹತ್ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

ನಗರ ಪ್ರದೇಶದ ಪ್ರಮುಖ ಖಾಸಗಿ ಶಾಲೆಗಳಲ್ಲಿ ಸಿಗುವ ಪ್ರತಿಯೊಂದು ಸೌಲಭ್ಯವೂ ಈಗ ಹೊಂಗನೂರಿನ ಮಕ್ಕಳಿಗೆ ಉಚಿತವಾಗಿ ಲಭ್ಯವಾಗುತ್ತಿದೆ.

ಗ್ರಾಮೀಣ ಶಿಕ್ಷಣಕ್ಕೆ ನಿರಂತರ ಬೆಂಬಲ

ಪ್ರಸ್ತುತ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯ ಸೌಲಭ್ಯಗಳು ಮತ್ತು ಗುಣಮಟ್ಟವನ್ನ ಕಂಡು ಸುತ್ತಮುತ್ತಲಿನ ಹಳ್ಳಿಗಳ ಪೋಷಕರು ತಮ್ಮ ಮಕ್ಕಳನ್ನ ಈ ಶಾಲೆಗೆ ಸೇರಿಸಲು ಮುಗಿಬೀಳುತ್ತಿದ್ದಾರೆ. ಶಾಲೆಯು ಮರುಪ್ರಾರಂಭವಾದ ಕೇವಲ ಒಂದು ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 200ರಷ್ಟು ಹೆಚ್ಚಾಗಿದೆ.

ಕೇವಲ ಕೋಟಿಗಟ್ಟಲೆ ಹಣ ಸುರಿದು ಕಟ್ಟಡ ಕಟ್ಟಿಸಿಕೊಟ್ಟಿದ್ದಲ್ಲದೆ, ಶಾಲೆಯ ದೈನಂದಿನ ನಿರ್ವಹಣೆಗಾಗಿ ಪ್ರತಿ ವರ್ಷ 10 ಲಕ್ಷ ರೂಪಾಯಿಗಳನ್ನ ಡಾ. ವೆಂಕಟಪ್ಪ ಅವರು ನೀಡುತ್ತಿದ್ದಾರೆ. ಜೊತೆಗೆ, ಅತಿಥಿ ಶಿಕ್ಷಕರಿಗೆ ಸರ್ಕಾರದ ಗೌರವಧನದ ಜೊತೆಗೆ ತಮ್ಮ ಸ್ವಂತ ಹಣದಿಂದ ಹೆಚ್ಚುವರಿ ವೇತನವನ್ನೂ ನೀಡುತ್ತಿದ್ದಾರೆ.

ಡಾ. ವೆಂಕಟಪ್ಪ ಅವರ ಈ ಕೆಲಸಕ್ಕೆ ಕೇವಲ ಕೃತಜ್ಞತೆಯ ಸಂಕೇತವಾಗಿರದೆ, ಮುಂದಿನ ಪೀಳಿಗೆಗೆ ಅಕ್ಷರ ದಾಸೋಹ ಮಾಡುವ ಮಹತ್ಕಾರ್ಯವಾಗಿದೆ. ಶಿಕ್ಷಣದಿಂದ ನಾವು ಗಳಿಸಿದ್ದಕ್ಕಿಂತ, ಅದನ್ನು ಮರಳಿ ಸಮಾಜಕ್ಕೆ ಹೇಗೆ ನೀಡುತ್ತೇವೆ ಎನ್ನುವುದು ಬಹಳ ಮುಖ್ಯ ಎಂಬುದನ್ನ ಅವರ ಬದುಕು ನಮಗೆಲ್ಲರಿಗೂ ಕಲಿಸಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+