Dr Bro: ಡಾ.ಬ್ರೋ ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಮಾಡ್ತಿಲ್ಲ ಯಾಕೆ ?
Dr Bro ಡಾ.ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಅವರು ಕೆಲವು ದಿನಗಳಿಂದ ಯೂಟ್ಯೂಬ್ ವಿಡಿಯೋ ಮಾಡುತ್ತಿಲ್ಲ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಡಾ ಬ್ರೋ ವಿಡಿಯೋಗಾಗಿ ಕೋಟ್ಯಾಂತರ ಜನ ಕಾಯುವುದು ಇದೆ. ನಮಸ್ಕಾರ ದೇವ್ರು ಅಂತ ಹೇಳುವುದರೊಂದಿಗೆ ಪ್ರಾರಂಭವಾಗುವ ವಿಡಿಯೋವನ್ನು ನೋಡುವ ಖುಷಿಯೇ ಬೇರೆ. ಆದರೆ ಡಾ ಬ್ರೋ ಅವರು ಈಚೆಗೆ ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ.
ಡಾ. ಬ್ರೋ... ಈ ಹೆಸರು ಕನ್ನಡಿಗರಿಗೆ ಚಿರಪರಿಚಿತ. ಕನ್ನಡಿಗರು Dr Bro ಅವರ ವಿಡಿಯೋಗಳನ್ನು ಕಾತುರದಿಂದ ನೋಡುವುದು ಇದೆ. ದೇಶ - ವಿದೇಶಗಳನ್ನು ಸುತ್ತಿ ಅಲ್ಲಿನ ವಿಚಾರಗಳನ್ನು ಅತ್ಯಂತ ಸರಳವಾಗಿ ಕನ್ನಡಿಗರಿಗೆ ಪರಿಚಯಿಸುವ ಅವರ ಸಿಂಪಲ್ ವಿಧಾನ ಎಲ್ಲರಿಗೂ ಇಷ್ಟ. ತೀರ ರಿಸ್ಕ್ ತೆಗೆದುಕೊಂಡು ಕೆಲವು ಪ್ರದೇಶಗಳಿಗೆ ಹೋಗಿ Dr Bro ವಿಡಿಯೋಗಳನ್ನು ಮಾಡುವುದು ಇದೆ. ಆದರೆ, ಕಳೆದ ಮೂರು ತಿಂಗಳಿನಿಂದ ಯೂಟ್ಯೂಬ್ ಚಾನೆಲ್‌ನಲ್ಲಿ ಯಾವುದೇ ಹೊಸ ವಿಡಿಯೋ ಅಪ್‌ಲೋಡ್ ಆಗಿಲ್ಲ. ಅವರು ಕೊನೆಯದಾಗಿ ಅಪ್‌ಲೋಡ್ ಮಾಡಿರುವ ವಿಡಿಯೋ ಜೀವಂತ ದೇವತೆ.. ? ಭೂತಾನ್ ದೇಶದ ಧಾರ್ಮಿಕ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಗಗನ್ ಅವರು ವಿಡಿಯೋ ಮಾಡಿದ್ದರು. ಇದಾಗಿ ಮೂರು ತಿಂಗಳಾದರೂ ಅವರು ಅವರ ಚಾನೆಲ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಕನ್ನಡದ ಕೆಲವೇ ಕೆಲವು ಯೂಟ್ಯೂಬರ್‌ಗಳು ಈ ರೀತಿ ದೇಶ - ವಿದೇಶ ಸುತ್ತಿ ಕನ್ನಡಿಗರಿಗೆ ಅಲ್ಲಿನ ಜನರ ಜೀವನ, ಆಚಾರ - ವಿಚಾರ ಹಾಗೂ ಸಂಪ್ರದಾಯಗಳನ್ನು ಪರಿಚಯಿಸುತ್ತಿದ್ದಾರೆ. ಅದರಲ್ಲಿ ಡಾ. ಬ್ರೋ ಸಹ ಒಬ್ಬರು. ಆದರೆ, ಇವರು ಈ ಹಿಂದೆ ನಿರಂತರವಾಗಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುವಂತೆ ಹೊಸ ಅಪ್‌ಲೋಡ್ ಮಾಡುತ್ತಿಲ್ಲ ಅಂತ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಇನ್ನು ನಮಸ್ಕಾರ ದೇವ್ರು ಎನ್ನುವ ಇವರ ಡೈಲಾಗ್ ಅನ್ನೇ ಜನ ಎಲ್ಲಿದ್ಯ ದೇವ್ರು ಅಂತ ಕೇಳ್ತಾ ಇದ್ದಾರೆ.

ದೇಶ - ವಿದೇಶಗಳನ್ನು ಸುತ್ತಿರುವ Dr. Bro ಇಲ್ಲಿಯ ವರೆಗೆ ಅವರ ಚಾನೆಲ್‌ನಲ್ಲಿ 170 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅವರ ಚಾನೆಲ್‌ಗೆ ಬರೋಬ್ಬರಿ 2.8 ಮಿಲಿಯನ್ ಸಬ್‌ಸ್ಕೈಬರ್ಸ್ ಇದ್ದಾರೆ. ಅವರು ಈಗ ಯೂಟ್ಯೂಬರ್ ಮಾತ್ರವಲ್ಲ ಉದ್ಯಮಿಯೂ ಹೌದು. ಗಗನ್ ಅವರು ಕೆಲವು ತಿಂಗಳುಗಳ ಮುಂಚೆ ಗೋ ಪ್ರವಾಸ ಎನ್ನುವ ಕಂಪನಿಯನ್ನು ಶುರು ಮಾಡಿದ್ದಾರೆ. ಈ ಕಂಪನಿಯ ಮೂಲಕ ಕನ್ನಡಿಗರು ಹಾಗೂ ಭಾರತೀಯರಿಗೆ ವಿದೇಶಿ ಪ್ರವಾಸ ಮತ್ತು ಟ್ರಿಪ್ ಪ್ಲ್ಯಾನ್ ಮಾಡಿಕೊಡುವುದು ಈ ಕಂಪನಿಯ ಉದ್ದೇಶ. ಪ್ಯಾಕೇಜ್‌ಗಳ ಮೂಲಕ ವಿದೇಶಿ ಪ್ರವಾಸಕ್ಕೆ ಈ ಕಂಪನಿ ಅವಕಾಶ ಮಾಡಿಕೊಡುತ್ತಿದೆ. ಗಗನ್ ಅವರು ಈ ಕಂಪನಿ ಕೆಲಸದಲ್ಲಿ ಬ್ಯೂಸಿ ಆಗಿರುವುದರಿಂದ ವಿಡಿಯೋ ಅಪ್‌ಲೋಡ್ ಮಾಡುವುದು ವಿಳಂಬವಾಗಿರಬಹುದು ಅಂತ ಹೇಳಲಾಗುತ್ತಿದೆ. ಆದರೆ, ಯಾವ ಕಾರಣಕ್ಕೆ ಡಾ ಬ್ರೋ ವಿಡಿಯೋ ಅಪ್‌ಲೋಡ್ ಮಾಡುತ್ತಿಲ್ಲ ಅಂತ ಅವರಿಂದಲೇ ತಿಳಿದುಕೊಳ್ಳಲು ಅವರ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನು ಈ ವಿಷಯವಾಗಿ ಡಾ. ಬ್ರೋ ಅವರನ್ನು ಮಾತನಾಡಿಸಲು Oneindia Kannada ದಿಂದ ಪ್ರಯತ್ನಿಸಲಾಯಿತು. ಅವರು ಪ್ರತಿಕ್ರಿಯೆಗೆ ಇನ್ನೂ ಲಭ್ಯವಾಗಿಲ್ಲ.
ಮತ್ತೆ ವಿಡಿಯೋ ಮಾಡಿ: ಇನ್ನು ಹಲವರು ಡಾ. ಬ್ರೋ ಮತ್ತೆ ವಿಡಿಯೋ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ದೇವ್ರು ಎಲ್ಲೋದೆ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications