ಇಂದು ಕೈ ಹೈಕಮಾಂಡ್ ನಾಯಕ ಭೇಟಿಯಾಗಲಿರುವ ಡಿ ಕೆ ಶಿವಕುಮಾರ್; ಕನಕಪುರ ಬಂಡೆಗೆ ಸಿಗುತ್ತಾ ಕುರ್ಚಿ ಅಭಯ?
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ಭರ್ಜರಿಯಾಗಿ ಚರ್ಚೆಯಾಗುತ್ತಿರುವ ನಡುವೆ, ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ದೆಹಲಿಯತ್ತ ಮುಖ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರೀ ಸಂಕ್ರಾಂತಿಗೆ ಕೈ ಪಾಳಯದಲ್ಲಿ ಕ್ರಾಂತಿಯಾಗಲಿದೆ ಎಂಬೆಲ್ಲ ಚರ್ಚೆಗಳು ಹುಟ್ಟಿಕೊಂಡಿತ್ತು. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಎಲ್ಲಾ ಗೊಂದಲಕ್ಕೆ ಬ್ರೇಕ್ ಹಾಕಲು ಮುಂದಾಗದೇ ಇರುವುದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೈಸೂರಿಗೆ ಬಂದಾಗ ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದರು. ಅದರಲ್ಲೂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿತ್ತು. ಏರ್‌ಪೋರ್ಟ್ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿದ್ದವು. ಅಲ್ಲದೇ ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದರು.

ಇತ್ತ ಸಿಎಂ ಕುರ್ಚಿಗಾಗಿ ಕಾದುಕುಳಿತಿದ್ದ ಡಿ ಕೆ ಶಿವಕುಮಾರ್ ಅವರು, ರಾಹುಲ್ ಗಾಂಧಿಯವರ ಆಹ್ವಾನ ದೊರೆಯುತ್ತಿದ್ದಂತೆಯೇ ಉತ್ಸಾಹದಲ್ಲಿ ದೆಹಲಿಯತ್ತ ಮುಖ ಮಾಡಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕಾಗಿ ತೆರಳುತ್ತಿದ್ದು, ಅದಕ್ಕೂ ಮುನ್ನವೇ ದೆಹಲಿಯಲ್ಲಿ ಭೇಟಿ ಮಾಡಿ ಅಧಿಕಾರ ಹಂಚಿಕೆ ಕುರಿತು ಇರುವ ಗೊಂದಲವನ್ನು ಬಗೆ ಹರಿಸಿಕೊಳ್ಳಲು ಡಿಕೆ ಶಿವಕುಮಾರ್ ಕಾತರರಾಗಿದ್ದಾರೆ. ಇತ್ತ ಬಹುದಿನದ ಸಿಎಂ ಕುರ್ಚಿಯ ಕನಸಿಗಾಗಿ ಕಾದುಕುಳಿತಿರುವ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಕುರ್ಚಿಯ ಅಭಯ ಸಿಗುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಎಲ್ಲಾ ನಾಯಕರನ್ನು ಭೇಟಿ ಮಾಡುತ್ತೇನೆ: ಡಿ ಕೆ ಶಿವಕುಮಾರ್
ರಾಹುಲ್ ಗಾಂಧಿ ಅವರನ್ನು ನಾನು ಭೇಟಿ ಮಾಡುವುದು ಹೊಸತೇನಲ್ಲ. ದೆಹಲಿಗೆ ಹೋದಾಗ ಎಲ್ಲಾ ನಾಯಕರು ಅಲ್ಲೇ ಇರುತ್ತಾರೆ. ಭೇಟಿ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ರಾಹುಲ್ ಗಾಂಧಿ ಅವರು ನಮ್ಮ ಪಕ್ಷದ ನಾಯಕರು. ನಮ್ಮ ಪಕ್ಷದ ನಾಯಕರನ್ನು, ಅಧ್ಯಕ್ಷರನ್ನು ಭೇಟಿ ಮಾಡುವುದು, ಕರೆ ಮೂಲಕ ಚರ್ಚೆ ಮಾಡುವುದು ಸಹಜ ಪ್ರಕ್ರಿಯೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಆಪ್ತರ ಬಯಕೆಯನ್ನು ರಾಹುಲ್ ಗಾಂಧಿ ಅವರ ಬಳಿ ಹೇಳಿಕೊಳ್ಳುತ್ತೀರಾ ಪ್ರಸ್ತಾಪ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಿಮ್ಮ (ಮಾಧ್ಯಮಗಳ) ಬಯಕೆಯನ್ನು ಅವರ ಮುಂದೆ ಪ್ರಸ್ತಾಪಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಟ್ವೀಟ್ ಮಾಡಿದ್ದನ್ನು ಕೆಲವು ಮಾಧ್ಯಮಗಳು ವಿವಿಧ ರೀತಿ ವ್ಯಾಖ್ಯಾನ ಮಾಡುತ್ತಿವೆ. ಕಾವೇರಿ ಆರತಿಯ ಪ್ರಾರ್ಥನೆಗೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಮೇಕೆದಾಟು ಯೋಜನೆ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಾ ಬಂದಿದ್ದೇನೆ. ಇದನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿದರೆ ಅರ್ಥವಿಲ್ಲ ಎಂದು ತಿಳಿಸಿದರು.












Click it and Unblock the Notifications