ಕರ್ನಾಟಕದ ಅಭಿವೃದ್ಧಿಗೆ ಬದ್ಧ ಎಂದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

ಕರ್ನಾಟಕ ರಾಜಕಾರಣದ 'ಟ್ರಬಲ್ ಶೂಟರ್' ಎಂದೇ ಹೆಸರಾದ ಡಿ.ಕೆ.ಶಿವಕುಮಾರ್ ಅವರ ಬಹುದಿನಗಳ ಮುಖ್ಯಮಂತ್ರಿ ಕನಸು ಕೊನೆಗೂ ನನಸಾಗುತ್ತಿದೆ. ಜೂನ್ 3ರ ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಐತಿಹಾಸಿಕ ಕ್ಷಣದ ಪ್ರತಿಯೊಂದು ಲೈವ್ ಅಪ್ಡೇಟ್ಸ್‌, ಕ್ಷಣಕ್ಷಣದ ಮಾಹಿತಿ ನಮ್ಮ ಲೈವ್ ಬ್ಲಾಗ್‌ನಲ್ಲಿ ವೀಕ್ಷಿಸಿ.

ಹೈಕಮಾಂಡ್ ಸೂಚನೆಗೆ ಗೌರವ ನೀಡಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಹಲವು ವರ್ಷಗಳಿಂದ ರಾಜ್ಯದ ಚುಕ್ಕಾಣಿ ಹಿಡಿಯುವ ಡಿಕೆಶಿ ಕನಸು ಇಂದು ನನಸಾಗುತ್ತಿದೆ.

DK Shivakumar

Jun 03, 2026, 7:49 pm IST

ಕರ್ನಾಟಕವನ್ನು ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯೋಣ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಅವರು ಕನ್ನಡಿಗರಿಗೆ ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವ ಶೀರ್ಷಿಕೆಯೊಂದಿಗೆ ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದು ಹೇಳಿದ್ದಾರೆ.
Jun 03, 2026, 7:16 pm IST

ಶುಭಕೋರಿದ ಎಚ್ ಡಿ ಕುಮಾರಸ್ವಾಮಿ

ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ತಮಗೆ ದೊರೆತಿರುವ ಈ ಅವಕಾಶವನ್ನು ಜನಪರ ಕೆಲಸಗಳಿಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಉಪಯೋಗ ಮಾಡಿಕೊಳ್ಳಿ ಎಂದು ಆಶಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ಶುಭಕೋರಿದ್ದಾರೆ.
Jun 03, 2026, 6:23 pm IST

ಚಪ್ಪಲಿ ಬಿಟ್ಟು, ಮೆಟ್ಟಿಲಿಗೆ ನಮಸ್ಕರಿಸಿದ ಡಿಕೆಶಿ

ಪ್ರಧಾನಿ ನರೇಂದ್ರ ಮೋದಿ ಅವರಂತೆ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚಪ್ಪಲಿ ಬಿಟ್ಟು, ಮೆಟ್ಟಿಲಿಗೆ ನಮಸ್ಕರಿಸಿ, ವಿಧಾನಸೌಧ ಪ್ರವೇಶಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಮೊದಲು ಸಾವರ್ಜನಿಕರಿಗೆ ಡಿಕೆ ಶಿವಕುಮಾರ್ ಅವರು ಸಾಷ್ಟಾಂಗ ನಮಸ್ಕಾರ ಮಾಡಿದ್ದರು.
Jun 03, 2026, 6:17 pm IST

ಡಿಕೆಶಿಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಶುಭಕೋರಿದ್ದಾರೆ.
Jun 03, 2026, 5:59 pm IST

ಕೆಲವೇ ಕ್ಷಣಗಳಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದ ಮೊದಲ ಸಚಿವ ಸಂಪುಟ ಸಭೆ

ಕೆಲವೇ ಕ್ಷಣಗಳಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
Jun 03, 2026, 5:41 pm IST

ಸಿದ್ದರಾಮಯ್ಯ ಆಶೀರ್ವಾದ ಪಡೆದ ಡಿಕೆಶಿ ಕುಟುಂಬ

ಬುಧವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪತ್ನಿ, ಪುತ್ರಿ ಹಾಗೂ ಪುತ್ರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
Jun 03, 2026, 4:27 pm IST

ಡಾ.ಬಿ ಆರ್ ಅಂಬೇಡ್ಕರ್ ಹೆಸರಲ್ಲಿ ಜಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ

ಇನ್ನು ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಜಿ ಪರಮೇಶ್ವರ್ ಅವರು ಅಧಿಕಾರ ಸ್ವೀಕರಿಸಿದರು. ಜಿ ಪರಮೇಶ್ವರ್ ಅವರು ಡಾ.ಬಿ ಆರ್ ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರಿಸಿದರು.
Jun 03, 2026, 4:12 pm IST

ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ

ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮ ಪ್ರಾರಂಭ. ಕಾಂಗ್ರೆಸ್‌ ಹೈಕಮಾಂಡ್ ಸೇರಿ ಹಲವು ಗಣ್ಯರು ಭಾಗಿ.
Jun 03, 2026, 3:50 pm IST

ಸಂತೋಷ ವ್ಯಕ್ತಪಡಿಸಿದ ನಟಿ, ರಾಜಕಾರಣಿ ರಮ್ಯಾ

ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಖುಷಿ ತಂದಿದೆ ಎಂದು ನಟಿ, ರಾಜಕಾರಣಿ ರಮ್ಯಾ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಗೆ ಅರ್ಹರು ಎಂದಿದ್ದಾರೆ.
Jun 03, 2026, 3:40 pm IST

ಲೋಕಭವನಕ್ಕೆ ಆಗಮಿಸಿದ ಖರ್ಗೆ, ರಾಹುಲ್ ಗಾಂಧಿ; ಕೆಲವೇ ಕ್ಷಣಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವ ಐತಿಹಾಸಿಕ ಕ್ಷಣಕ್ಕೆ ವೇದಿಕೆ ಸಿದ್ಧವಾಗಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ನಾಯಕರು ಲೋಕಭವನಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಮತ್ತು ಡಿ.ಕೆ. ಶಿವಕುಮಾರ್ ಅವರು ಒಟ್ಟಿಗೆ ಲೋಕಭವನವನ್ನು ಪ್ರವೇಶಿಸಿದ್ದಾರೆ. ಅವರೊಂದಿಗೆ ಹೈಕಮಾಂಡ್ ಅಂತಿಮಗೊಳಿಸಿರುವ 14 ಶಾಸಕರ ತಂಡವೂ ಸಹ ಸಚಿವರಾಗಿ ಪದಗ್ರಹಣ ಮಾಡಲಿದೆ. ಲೋಕಭವನದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಬಿಗಿ ಭದ್ರತೆಯ ನಡುವೆ ಸಮಾರಂಭ ಆರಂಭವಾಗುತ್ತಿದೆ.
Jun 03, 2026, 3:21 pm IST

ಡಿ.ಕೆ.ಶಿವಕುಮಾರ್ ಪದಗ್ರಹಣ: ಶುಭ ಹಾರೈಸಲು ಲೋಕಭವನಕ್ಕೆ ಆಗಮಿಸಿದ ನಾಡಿನ ವಿವಿಧ ಮಠಗಳ ಶ್ರೀಗಳು

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಲಿರುವ ಐತಿಹಾಸಿಕ ಕ್ಷಣಕ್ಕೆ ಲೋಕಭವನದಲ್ಲಿ ಧಾರ್ಮಿಕ ಮತ್ತು ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದೆ. ಇಂದು ಸಂಜೆ ನಡೆಯಲಿರುವ ಅದ್ಧೂರಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತು ನೂತನ ಮುಖ್ಯಮಂತ್ರಿಗಳಿಗೆ ಆಶೀರ್ವದಿಸಲು ನಾಡಿನ ವಿವಿಧ ಪ್ರಮುಖ ಮಠಗಳ ಸಂತರ ಹಾಗೂ ಸ್ವಾಮೀಜಿಗಳ ದಂಡು ಲೋಕಭವನಕ್ಕೆ ಆಗಮಿಸಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ಮೂಡಿಬರಲಿ ಮತ್ತು ಜನಕಲ್ಯಾಣ ಕಾರ್ಯಗಳು ಯಶಸ್ವಿಯಾಗಲಿ ಎಂದು ವಿವಿಧ ಧರ್ಮಗುರುಗಳು ಮತ್ತು ಮಠಾಧೀಶರು ಈ ಸಂದರ್ಭದಲ್ಲಿ ಹಾರೈಸಿದ್ದಾರೆ.
Jun 03, 2026, 2:44 pm IST

ಪ್ರಮಾಣವಚನಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದ ಡಿಕೆಶಿ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ.ಶಿವಕುಮಾರ್ ಅವರು, ತಮ್ಮ ಬದುಕಿನ ಈ ಅತ್ಯಂತ ಮಹತ್ವದ ಕ್ಷಣಕ್ಕೂ ಮುನ್ನ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಇಂದು ಲೋಕ ಭವನದಲ್ಲಿ ನಡೆಯಲಿರುವ ಭವ್ಯ ಪದಗ್ರಹಣ ಸಮಾರಂಭಕ್ಕೆ ತೆರಳುವ ಮುನ್ನ ನಿಯೋಜಿತ ಮುಖ್ಯಮಂತ್ರಿಗಳು ತಮ್ಮ ತಾಯಿ ಗೌರಮ್ಮ ಅವರ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ಮಗನ ಸಾಧನೆಯನ್ನು ಕಂಡು ತಾಯಿ ಗೌರಮ್ಮ ಅವರು ಭಾವುಕರಾಗಿ ಹರಸಿದರು. ಈ ವೇಳೆ ಡಿ.ಕೆ. ಶಿವಕುಮಾರ್ ಅವರು ತಾಯಿಯನ್ನು ಪ್ರೀತಿಯಿಂದ ಆಲಂಗಿಸಿಕೊಂಡು ತಮ್ಮ ಸಂತಸವನ್ನು ಹಂಚಿಕೊಂಡರು.
Jun 03, 2026, 2:24 pm IST

ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ ಹೈಕಮಾಂಡ್‌ಗೆ ಈಶ್ವರ್ ಖಂಡ್ರೆ ಧನ್ಯವಾದ

ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸೇರ್ಪಡೆಗೆ ಹಸಿರು ನಿಶಾನೆ ಸಿಗುತ್ತಿದ್ದಂತೆ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಈಶ್ವರ್ ಖಂಡ್ರೆ ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇಂದು ಸಂಜೆ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಅವರು, ತಮ್ಮ ಮೇಲೆ ನಂಬಿಕೆ ಇಟ್ಟ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು. ನನ್ನ ಮೇಲೆ ನಂಬಿಕೆ ಇಟ್ಟು ಈ ಮಹತ್ತರ ಜವಾಬ್ದಾರಿಯನ್ನು ನೀಡಿದ ನಮ್ಮ ಪಕ್ಷದ ಹಿರಿಯ ನಾಯಕರಿಗೆ ನಾನು ಆತ್ಯಂತ ಕೃತಜ್ಞನಾಗಿದ್ದೇನೆ. ಕರ್ನಾಟಕದ ಜನತೆಗೆ ನಾನು ಈ ಮೂಲಕ ಒಂದು ಭರವಸೆ ನೀಡಲು ಬಯಸುತ್ತೇನೆ. ನಾನು ಈ ಹಿಂದೆಯೂ ನನ್ನ ಕರ್ತವ್ಯಗಳನ್ನು ಅತ್ಯಂತ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮತ್ತು ಕಠಿಣ ಪರಿಶ್ರಮದಿಂದ ನಿಭಾಯಿಸಿದ್ದೇನೆ ಎಂದರು. ಎಂದು ನೆನಪಿಸಿಕೊಂಡರು. ಈ ಬಾರಿಯೂ ಸಹ ನಾನು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮತ್ತು ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡಲಿದ್ದೇನೆ ಎಂದರು.
Jun 03, 2026, 1:22 pm IST

ಡಿಕೆಶಿ ಸಂಪುಟದ ಸಂಭಾವ್ಯ ಸಚಿವರಿವರು: ಯತೀಂದ್ರ, ಜಾರ್ಜ್ ಸೇರಿ 13 ಮಂದಿಯ ಹೆಸರು ಇಲ್ಲಿದೆ

ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಜೂನ್ 3) ಮಧ್ಯಾಹ್ನ 04:05 ಕ್ಕೆ ಲೋಕಭವನದಲ್ಲಿ ಪ್ರಮಾಣ ವಚನ ವಿಧಿಗಳು ನೆರವೇರಲಿವೆ. ಡಿಕೆಶಿ ಸಂಪುಟದಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭಾವ್ಯ ಸಚಿವರ ಪಟ್ಟಿ 'ಒನ್ ಇಂಡಿಯಾ ಕನ್ನಡ' ಜಾಲತಾಣಕ್ಕೆ ಲಭ್ಯವಾಗಿದೆ. ಕೊನೆಯ ಕ್ಷಣದ ಬದಲಾವಣೆಗಳ ಹೊರತಾಗಿ ಈ 13 ಮಂದಿ ಇಂದು ಸಚಿವರಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
Jun 03, 2026, 1:07 pm IST

ಡಿಕೆಶಿ-ಪರಮೇಶ್ವರ್‌ಗೆ ಶುಭಹಾರೈಸಿದ ಸಿದ್ದರಾಮಯ್ಯ

ಇಂದು ಸಂಜೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್‌ ಹಾಗೂ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜಿ.ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು. ಈ ವೇಳೆ ಇಬ್ಬರೂ ನಾಯಕರಿಗೆ ಅಭಿನಂದಿಸಿ, ಶುಭ ಹಾರೈಸಿದರು.
Jun 03, 2026, 1:00 pm IST

ಇಂದು ಪ್ರಮಾಣವಚನ ಸ್ವೀಕರಿಸಲಿರುವ 14 ಸಚಿವರು ಯಾರು? ಇಲ್ಲಿದೆ ಫೈನಲ್‌ ಲಿಸ್ಟ್‌

ಇಂದು ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದ್ದು, ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿರುವ 14 ಸಚಿವರ ಅಂತಿಮ ಪಟ್ಟಿ ಅಧಿಕೃತವಾಗಿದೆ. ಹೈಕಮಾಂಡ್ ಸುದೀರ್ಘ ಕಸರತ್ತಿನ ಬಳಿಕ ಸಿದ್ಧಪಡಿಸಿರುವ ಈ ಪಟ್ಟಿಯಲ್ಲಿ ಹಿರಿಯ ಅನುಭವಿ ನಾಯಕರು ಹಾಗೂ ಯುವ ನಾಯಕರಿಗೆ ಸಮಾನ ಆದ್ಯತೆ ನೀಡಲಾಗಿದೆ. ಅಂತಿಮ ಪಟ್ಟಿ ಹೀಗಿದೆ. ಡಿ.ಕೆ.ಶಿವಕುಮಾರ್–ಮುಖ್ಯಮಂತ್ರಿ, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಅವಕಾಶ ಪಡೆದಿದ್ದಾರೆ. ಈ ಪಟ್ಟಿ 'ಒನ್‌ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.
Jun 03, 2026, 12:54 pm IST

ಡಿ.ಕೆ.ಶಿವಕುಮಾರ್‌ಗೆ ಶುಭ ಕೋರಿದ ಸೋನಿಯಾ ಗಾಂಧಿ

ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರು ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಇಂದು ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಿರಿ, ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ. ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ. ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಸೋನಿಯಾ ಗಾಂಧಿ ಅವರು ಶುಭಾಶಯ ಹೇಳಿದರು.
Jun 03, 2026, 12:45 pm IST

ಮಾಜಿ ಪಿಎಂ, ಸಿಎಂ ಭೇಟಿಯಾದ ಡಿಕೆಶಿ

ಸಿಎಲ್‌ಪಿ ನಾಯಕ, ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೇಗೌಡರು, ಉಸ್ತುವಾರಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಬೆಂಗಳೂರು ನಿವಾಸಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ಡಾ ಜಿ.ಪರಮೇಶ್ವರ ಅವರು ಡಿ ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು.
Jun 03, 2026, 12:13 pm IST

ನನಗೆ ಕಂದಾಯ ಇಲಾಖೆಯೇ ಕೊಡಿ: ಕೃಷ್ಣ ಬೈರೇಗೌಡ

ಡಿಕೆ ಶಿವಕುಮಾರ್‌ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾದರೆ, ನನಗೆ ಕಂದಾಯ ಇಲಾಖೆಯೇ ನೀಡಬೇಕು. ಇಲಾಖೆಯಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆ ತಂದಿದ್ದೇನೆ. ಕೆಲವು ಪ್ಲ್ಯಾನ್‌ಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಸಂಪುಟ ಆಯ್ಕೆ ಮಾಡುವುದಾದರೆ ಕಂದಾಯ ಇಲಾಖೆಗೆ ಆಯ್ಕೆ ಮಾಡಬೇಕು ಎಂದು ಕೃಷ್ಣ ಬೈರೇಗೌಡ ಬೇಡಿಕೆ ಇಟ್ಟಿದ್ದಾರೆ.
Jun 03, 2026, 12:06 pm IST

ಡಿ.ಕೆ.ಶಿವಕುಮಾರ್ ಜೊತೆ 14 ಸಚಿವರ ಪದಗ್ರಹಣ: ಎಂ.ಬಿ.ಪಾಟೀಲ್

ಇಂದು ಸಂಜೆ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಒಟ್ಟು 14 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಲವು ದಿನಗಳ ಹೈಕಮಾಂಡ್ ಕಸರತ್ತಿನ ಬಳಿಕ ಸಚಿವರ ಮೊದಲ ಪಟ್ಟಿ ಸಿದ್ಧವಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಅವರು ತಮಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಿಡುಗಡೆ ಮಾಡಿರುವ ನೂತನ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿದೆ ಎಂದು ತಿಳಿಸಿದ್ದಾರೆ.
Jun 03, 2026, 11:51 am IST

ಯಡಿಯೂರಪ್ಪ ಭೇಟಿ ಮಾಡಿದ ಡಿಕೆಶಿ

ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಪದಗ್ರಹಣಕ್ಕೂ ಮುನ್ನವೇ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರು, ಕಾರ್ಯಕ್ರಮಕ್ಕೆ ಬಿಎಸ್‌ವೈ ಅವರನ್ನು ಆಹ್ವಾನಿಸಿದರು.
Jun 03, 2026, 11:01 am IST

ಲೋಕಭವನ ಸುತ್ತ ಪೊಲೀಸ್ ಕೋಟೆ: 2,000 ಸಿಬ್ಬಂದಿ ನಿಯೋಜನೆ

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ, ರಾಜಧಾನಿಯ ಪ್ರಮುಖ ಆಡಳಿತ ಕೇಂದ್ರಗಳಾದ ಲೋಕಭವನ ಮತ್ತು ವಿಧಾನಸೌಧದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ವಲಯದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದ್ದು, ನಗರವನ್ನು ಸಂಪೂರ್ಣವಾಗಿ ಪೊಲೀಸರ ಕಣ್ಗಾವಲಿಗೆ ತರಲಾಗಿದೆ. ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಅವರ ನೇರ ಉಸ್ತುವಾರಿಯಲ್ಲಿ ಈ ಬೃಹತ್ ಭದ್ರತಾ ಯೋಜನೆಯನ್ನು ರೂಪಿಸಲಾಗಿದೆ. ಭದ್ರತೆಯ ಉಸ್ತುವಾರಿಗಾಗಿ 3 ಜಂಟಿ ಪೊಲೀಸ್ ಆಯುಕ್ತರು ಹಾಗೂ 20ಕ್ಕೂ ಹೆಚ್ಚು ಡಿಸಿಪಿಗಳನ್ನು ನಿಯೋಜಿಸಲಾಗಿದೆ. ಸಮಾರಂಭಕ್ಕೆ ಹರಿದುಬರುವ ಜನಸಾಗರ ಮತ್ತು ಗಣ್ಯರ ಆಗಮನವನ್ನು ನಿಯಂತ್ರಿಸಲು 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ರಸ್ತೆಗೆ ಇಳಿಸಲಾಗಿದೆ.
Jun 03, 2026, 10:39 am IST

ಡಿಕೆಶಿ ರುಮಾಲು ವ್ಯಾಮೋಹ

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಪಾಂಚಜನ್ಯ ಯಾತ್ರೆ ಕೈಗೊಂಡಿದ್ದರು. ಇದರ ಉಸ್ತುವಾರಿ ಹೊತ್ತ ಡಿ.ಕೆ.ಶಿವಕುಮಾರ್, ಯಾತ್ರೆಯನ್ನು ಯಶಸ್ವಿಗೊಳಿಸಿ, ಕೃಷ್ಠ ನೇತೃತ್ವದ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲಿಂದಲೇ ಎಸ್‌ಎಂಕೆಯ ನೀಲಿಗಣ್ಣಿನ ಹುಡುಗನಾಗಿದ್ದು ಕನಕಪುರದ ಬಂಡೆ. ಕೃಷ್ಣ ಅವರ ಒಡನಾಟ ಹೆಚ್ಚಾಗಿ, ಅವರ ಸಂಪುಟದಲ್ಲಿ ಸಚಿವರೂ ಆಗಿದ್ದರು. ಕೃಷ್ಣಗೆ ತಮ್ಮ ಫಿಟ್ನೆಸ್ ಹಾಗೂ ಉಡುಗೆ ಮೇಲೆ ವಿಪರೀತ ಆಸಕ್ತಿ. ಅವರ ಪ್ರಭಾವಕ್ಕೆ ಡಿಕೆಶಿ ಸಹ ಒಳಗಾದರು. ಕೃಷ್ಣನಂತೆ ರುಮಾಲು ಧರಿಸಲು ಆರಂಭಿಸಿದರು. ಅದೇ ಡಿಕೆಶಿ ಟ್ರೇಡ್‌ಮಾರ್ಕ್ ಆಯಿತು. ಕೃಷ್ಣ ಅವರ ನಿಧನದ ಬಳಿಕ, ಅವರು ಉಪಯೋಗಿಸುತ್ತಿದ್ದ ವಿವಿಧ ಮಾದರಿಯ ರುಮಾಲು ಅವರ ಪಟ್ಟ ಶಿಷ್ಯ ಡಿಕೆ ಶಿವಕುಮಾರ್ ಅವರ ಕೈ ಸೇರಿವೆ. ಅಷ್ಟೇ ಅಲ್ಲ ಎಸ್‌ಎಂಕೆ ಮೊಮ್ಮಗ ಅಂದ್ರೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಹಾಗೂ ಮಾಳವಿಕಾ ಮಗ ಅಮರ್ಥ್ಯ ಜೊತೆ ತಮ್ಮ ಪುತ್ರಿ ಐಶ್ವರ್ಯಾ ಡಿಕೆಶಿ ಮದುವೆ ಮಾಡಿದ್ದಾರೆ. ಪ್ರಮಾಣ ಸ್ವೀಕಾರಕ್ಕೆ ಉಡುಗೆಯೇನು? ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಶಿವಕುಮಾ‌ರ್ ಅವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ. ಮೈಸೂರು ಕರ್ನಾಟಕ ಶೈಲಿಯ ಸಾಂಪ್ರದಾಯಿಕ ರೇಷ್ಮೆ ಅಂಗಿ-ಪಂಚೆ ಧರಿಸಬಹುದು ಎಂಬುವುದು ಹಲವರ ಅಭಿಪ್ರಾಯ.
Jun 03, 2026, 9:46 am IST

ಪ್ರಮಾಣವಚನ ಕಾರ್ಯಕ್ರಮ ವೀಕ್ಷಣೆಗೆ ಕನಕಪುರದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಕೆ

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರವಾದ ಕನಕಪುರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸಾರ್ವಜನಿಕರು ಹಾಗೂ ಅಭಿಮಾನಿಗಳು ಪ್ರಮಾಣವಚನ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಲು ಅನುಕೂಲವಾಗುವಂತೆ ಕನಕಪುರದ ಪ್ರಮುಖ ಕೇಂದ್ರವಾದ ಚನ್ನಬಸಪ್ಪ ವೃತ್ತದಲ್ಲಿ ಬೃಹತ್ ಎಲ್‌ಇಡಿ (LED) ಸ್ಕ್ರೀನ್ ಅನ್ನು ಅಳವಡಿಸಲಾಗಿದೆ. ಇಡೀ ಕನಕಪುರ ಕ್ಷೇತ್ರವನ್ನು ಬ್ಯಾನರ್‌ಗಳು, ಫ್ಲೆಕ್ಸ್ ಹಾಗೂ ಪೋಸ್ಟರ್‌ಗಳಿಂದ ವಧುವಿನಂತೆ ಶೃಂಗರಿಸಲಾಗಿದೆ.
Jun 03, 2026, 9:00 am IST

ಕನಕಪುರದಲ್ಲಿ ವಿಶೇಷ ಪೂಜೆ: ಕೆಂಕೆರಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರಾರ್ಥನೆ

ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ಅವರ ಸ್ವಕ್ಷೇತ್ರವಾದ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವ ಶುಭ ಸಂದರ್ಭದಲ್ಲಿ, ಅವರ ಆಡಳಿತ ಯಶಸ್ವಿಯಾಗಲಿ ಎಂದು ಕನಕಪುರದ ಪ್ರಸಿದ್ಧ ಶ್ರೀ ಕೆಂಕೆರಮ್ಮ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಇಡೀ ಕನಕಪುರ ಕ್ಷೇತ್ರಾದ್ಯಂತ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
Jun 03, 2026, 8:56 am IST

ಡಿಕೆಶಿ ಪಟ್ಟಾಭಿಷೇಕಕ್ಕೆ ನೆಲಮಂಗಲದಲ್ಲಿ 10 ಲಕ್ಷ ಲಾಡು ವಿತರಣೆ

ಡಿಕೆಶಿ ಪಟ್ಟಾಭಿಷೇಕಕ್ಕೆ ನೆಲಮಂಗಲದಲ್ಲಿ 10 ಲಕ್ಷ ಲಾಡು ವಿತರಣೆ
ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದನ್ನು ಆಚರಿಸಲು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ವಿಭಿನ್ನ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 10 ಲಕ್ಷ ಲಾಡುಗಳನ್ನು ಉಚಿತವಾಗಿ ವಿತರಿಸಲು ಬೃಹತ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಸಕ ಶ್ರೀನಿವಾಸ್ ಮತ್ತು ಅವರ ಬೆಂಬಲಿಗರು ಸುಮಾರು 90,000 ಮನೆಗಳಿಗೆ ತಲಾ 750 ಗ್ರಾಂ ಲಾಡುಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 300 ನುರಿತ ಅಡುಗೆ ಭಟ್ಟರನ್ನು ಕಣಕ್ಕಿಳಿಸಲಾಗಿದೆ.
Jun 03, 2026, 8:19 am IST

ತಡರಾತ್ರಿ ಅಜ್ಜಯ್ಯನ ಮಠಕ್ಕೆ ಡಿಕೆಶಿ ಕುಟುಂಬ ಸಮೇತ ‌ಭೇಟಿ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ಸದ್ದಿಲ್ಲದೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ತಡರಾತ್ರಿ ಕುಟುಂಬದ ಸದಸ್ಯರೊಂದಿಗೆ ಮಠಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಮಧ್ಯರಾತ್ರಿ 2 ಗಂಟೆಯವರೆಗೂ ಮಠದಲ್ಲೇ ಉಳಿದುಕೊಂಡು ಸುದೀರ್ಘ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಯಾವುದೇ ವಿಘ್ನಗಳು ಎದುರಾಗದಿರಲಿ ಮತ್ತು ಮುಂದಿನ ಆಡಳಿತ ಸುಸೂತ್ರವಾಗಿ ನಡೆಯಲಿ ಎಂದು ಅವರು ಅಜ್ಜಯ್ಯನ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ತೊಟ್ಟು ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಅಜ್ಜಯ್ಯನ ಪರಮ ಭಕ್ತರಾಗಿದ್ದು, ರಾಜಕಾರಣದ ಯಾವುದೇ ಪ್ರಮುಖ ಘಟ್ಟಗಳಲ್ಲೂ ಮಠಕ್ಕೆ ಭೇಟಿ ನೀಡುವುದನ್ನು ಮರೆಯುವುದಿಲ್ಲ.
Jun 03, 2026, 7:49 am IST

ನೂತನ ಸಚಿವರ ಪಟ್ಟಿ ಇಂದೇ ಫೈನಲ್: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ನೂತನ ಸಚಿವರ ಪಟ್ಟಿ ಮತ್ತು ಪ್ರಮಾಣವಚನದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹೆಸರುಗಳು ಅಧಿಕೃತವಲ್ಲ. ನಾವೆಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ, ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಇಂದು ಮಧ್ಯಾಹ್ನದ ಹೊತ್ತಿಗೆ ಹೈಕಮಾಂಡ್ ಪಟ್ಟಿಯನ್ನು ಅಂತಿಮಗೊಳಿಸಿ ಕಳುಹಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೈಕಮಾಂಡ್‌ನಿಂದ ಪಟ್ಟಿ ಬಂದ ತಕ್ಷಣ ಅದನ್ನು ರಾಜಭವನಕ್ಕೆ ರವಾನಿಸಲಾಗುವುದು. ಅದರ ನಂತರವಷ್ಟೇ ಅಧಿಕೃತ ಪ್ರಮಾಣವಚನ ಪ್ರಕ್ರಿಯೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
Jun 03, 2026, 7:41 am IST

ನಾನೂ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ: ಕೆ.ಎಚ್.ಮುನಿಯಪ್ಪ

ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ಸೇರುವ ನಾಯಕರ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್. ಮುನಿಯಪ್ಪ ಬೆಂಗಳೂರಿನಲ್ಲಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಇಂದು 10ರಿಂದ 15 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಪಟ್ಟಿಯಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದು ತೋರುತ್ತಿದೆ" ಎಂದು ಹೇಳುವ ಮೂಲಕ ತಮಗೆ ಸಚಿವ ಸ್ಥಾನ ಸಿಗುತ್ತಿರುವುದನ್ನು ಅವರೇ ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ಮುನಿಯಪ್ಪ ಅವರ ಈ ಹೇಳಿಕೆಯಿಂದಾಗಿ ನೂತನ ಸಂಪುಟ ಸೇರಲಿರುವ ಸಚಿವರ ಮೊದಲ ಪಟ್ಟಿಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.
Jun 03, 2026, 6:58 am IST

ಪ್ರಮಾಣವಚನಕ್ಕೆ ಯಾರೆಲ್ಲ ಭಾಗಿ?

ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ವಾಸ್ತು ನಿಯಮಗಳ ಪ್ರಕಾರ ಪೂರ್ವಾಭಿಮುಖವಾಗಿ ವಿಶೇಷ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಸರಳವಾಗಿ ನಡೆಯಲಿರುವ ಈ ಸಮಾರಂಭಕ್ಕೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಗಣ್ಯರು ಸಾಕ್ಷಿಯಾಗಲಿದ್ದಾರೆ. ಇದರೊಂದಿಗೆ ಸರ್ವಧರ್ಮ ಸಮನ್ವಯದ ಸಂಕೇತವಾಗಿ ವಿವಿಧ ಧರ್ಮಗಳ 55 ಪ್ರಮುಖ ಧರ್ಮಗುರುಗಳನ್ನು ಆಹ್ವಾನಿಸಲಾಗಿದ್ದು, ಅವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+